ಬೆಂಗಳೂರು : ಜಾತಿಗಣತಿ ಆಯೋಗವು ರಾಜ್ಯದಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ಕೋಟಾವನ್ನು ಪ್ರಸ್ತುತ ಶೇ. 32 ರಿಂದ ಶೇ. 51 ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿದೆ ಎಂದು ಹೇಳಲಾಗಿದೆ.
ಶುಕ್ರವಾರ ಜಾತಿಗಣತಿ ವರದಿ ಕ್ಯಾಬಿನೆಟ್ನಲ್ಲಿ ಮಂಡನೆಯಾಗಿದೆ. ವರದಿಯಲ್ಲಿ ಏನಿದೆ ಎಂಬುದನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ಏಪ್ರಿಲ್ 17ರ ಕ್ಯಾಬಿನೆಟ್ನಲ್ಲಿ ವರದಿ ಅಂಗೀಕಾರದ ಬಳಿಕ ಅಧಿಕೃತ ದತ್ತಾಂಶ ಬಿಡುಗಡೆಯಾಗುವ ಸಾಧ್ಯತೆ ಇದೆ. ಆದರೆ ಜಯಪ್ರಕಾಶ್ ಹೆಗ್ಡೆ (Jayaprakash Hegde) ನೇತೃತ್ವದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಕೆಲ ಶಿಫಾರಸುಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿವೆ.
ಇದು ಜಾರಿಗೆ ಬಂದರೆ, ರಾಜ್ಯದಲ್ಲಿ ಒಟ್ಟು ಮೀಸಲಾತಿ ಪ್ರಮಾಣವು ಶೇ. 85 ಕ್ಕೆ ಏರಲಿದೆ. ಇದರಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯೂಎಸ್) ಶೇ. 10 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ (ಎಸ್ಸಿ/ಎಸ್ಟಿ) ಶೇ. 24 ಸೇರಿವೆ.
ಆಯೋಗವು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಉದ್ಯೋಗ ಮೀಸಲಾತಿಯೊಳಗೆಮೀಸಲಾತಿ ನೀತಿಗಳನ್ನು ಜಾರಿಗೆ ತರುವಂತೆ ಸಲಹೆ ನೀಡಿದೆ.
ಒಬಿಸಿ ವಿಭಾಗಗಳ ಜನಸಂಖ್ಯೆಯು ಒಟ್ಟು ಜನಸಂಖ್ಯೆಯ ಸುಮಾರು ಶೇ. 70 ಕ್ಕೆ ಏರಿದೆ ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಆದಾಗ್ಯೂ, ಮೀಸಲಾತಿಗಳ ಪ್ರಮಾಣವು ಅದಕ್ಕೆ ತಕ್ಕಂತೆ ಹೆಚ್ಚಿಗೆಯಾಗಿಲ್ಲ ಎಂದು ಸಮಿತಿ ಗಮನಿಸಿದೆ.
ಜನಸಂಖ್ಯೆಯ ಆಧಾರದ ಮೇಲೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡದಿದ್ದರೆ, ಸರ್ಕಾರಿ ಸೌಲಭ್ಯಗಳನ್ನು ಸಮಾನವಾಗಿ ವಿತರಿಸಲಾಗುವುದಿಲ್ಲ” ಎಂದು ಸಮಿತಿ ತನ್ನ ಶಿಫಾರಸುಗಳಲ್ಲಿ ತಿಳಿಸಿದೆ.
ಈಗಿರುವ ಕಾನೂನಿನಂತೆ ಒಟ್ಟು ಮೀಸಲಾತಿ 50% ಮೀರುವಂತಿಲ್ಲ. ಹಿಂದುಳಿದವರ ಮೀಸಲು ಪ್ರಮಾಣವನ್ನು ಹೆಚ್ಚಿಸುವ ಶಿಫಾರಸು ಜಾರಿಯಾಗಬೇಕಾದರೆ ಕೇಂದ್ರ ಸರ್ಕಾರವು ಸಂವಿಧಾನದ ಒಂಬತ್ತನೇ ಪರಿಚ್ಛೇದಕ್ಕೆ ತಿದ್ದುಪಡಿ ತರಬೇಕು ಎಂದು ಆಯೋಗ ಶಿಫಾರಸು ಮಾಡಿದೆ.