ಭುವನೇಶ್ವರ : ಒಡಿಶಾದ ಕೊರಾಪುಟ್ ಜಿಲ್ಲೆಯ ದುಡುಮಾ ಜಲಪಾತದಲ್ಲಿ ರೀಲ್ಗಳನ್ನು ಚಿತ್ರೀಕರಿಸುವಾಗ ಯೂ ಟ್ಯೂಬರ್ ಒಬ್ಬರು ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾರೆ.
ಅವರನ್ನು ಗಂಜಾಂ ಜಿಲ್ಲೆಯ ಬೆರ್ಹಾಂಪುರ್ನ 22 ವರ್ಷದ ಸಾಗರ ತುಡು ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಗರ ತುಡು ಭಾನುವಾರ ಮಧ್ಯಾಹ್ನ ಡ್ರೋನ್ ಕ್ಯಾಮೆರಾ ಬಳಸಿ ಜಲಪಾತದಲ್ಲಿ ರೀಲ್ಗಳನ್ನು ರೆಕಾರ್ಡ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.
ಅವರು ತಮ್ಮ ಯೂಟ್ಯೂಬ್ ಚಾನೆಲ್ಗಾಗಿ ವಿವಿಧ ಪ್ರವಾಸಿ ಸ್ಥಳಗಳ ವೀಡಿಯೊಗಳನ್ನು ರೆಕಾರ್ಡ್ ಮಾಡಲು ತಮ್ಮ ಸ್ನೇಹಿತ ಅಭಿಜಿತ ಬೆಹೆರಾ ಅವರೊಂದಿಗೆ ಕೊರಾಪುಟ್ಗೆ ಭೇಟಿ ನೀಡಿದ್ದರು. ಸಾಗರ ತುಡು ಜಪಾತದ ಮೇಲಿನ ಬಂಡೆಯ ಮೇಲೆ ನಿಂತಿದ್ದರು. ಆದರೆ ಕೊರಾಪುಟ್ನ ಲ್ಯಾಮ್ಟಾಪುಟ್ ಪ್ರದೇಶದಲ್ಲಿ ಭಾರೀ ಮಳೆಯಾದ ನಂತರ ಮಚಕುಂಡಾ ಅಣೆಕಟ್ಟಿನ ಅಧಿಕಾರಿಗಳು ನೀರನ್ನು ಬಿಡುಗಡೆ ಮಾಡಿದ್ದರು. ಇದರಿಂದಾಗಿ ಜಲಪಾತದಲ್ಲಿ ನೀರಿನ ಹರಿವು ಹಠಾತ್ ಏರಿಕೆಯಿಂದಾಗಿ ಸಾಗರ ಅವರು ಸಿಲುಕಿಕೊಂಡರು.
ಯೂ ಟ್ಯೂಬರ್ ಸಾಗರ ತುಡು ಅವರಿಗೆ ಬಂಡೆಯ ಮೇಲೆ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಭಾರೀ ನೀರಿನ ಹರಿವಿನಿಂದಾಗಿ ಕೊಚ್ಚಿ ಹೋದರು ಎಂದು ವರದಿಗಳು ತಿಳಿಸಿವೆ.
ಕೆಲವು ಪ್ರವಾಸಿಗರು ಮತ್ತು ಸ್ಥಳೀಯರು ಅವರನ್ನು ರಕ್ಷಿಸಲು ಪ್ರಯತ್ನಿಸಿದರು, ಆದರೆ ವಿಫಲರಾದರು. ಮಾಹಿತಿ ತಿಳಿಯುತ್ತಿದ್ದಂತೆ ಮಚ್ಕುಂಡ ಪೊಲೀಸ್ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸಾಗರ ತುಡು ಅವರನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಿದರು. ಆದರೆ, ಅವರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.