ಬೆಂಗಳೂರು :
ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾಗಿ ಸೇವೆ ಸಲ್ಲಿಸಿ ಬಹು ಜನಪ್ರಿಯರಾಗಿದ್ದ ರವಿಕುಮಾರ್ ಅವರಿಗೆ ಇದೀಗ ಜಿಲ್ಲಾಧಿಕಾರಿ ಹುದ್ದೆ ಒಲಿದು ಬಂದಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಡಾ. ರಾಜೇಂದ್ರ ಕೆ.ವಿ. ಅವರಿಂದ ತೆರವಾಗಿದ್ದ ಸ್ಥಾನಕ್ಕೆ ರವಿಕುಮಾರ್ ಎಂ.ಆರ್. ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ರವಿಕುಮಾರ್ ಅವರು ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದಾಗ ಇಲ್ಲಿಯ ರಸ್ತೆ ಅಗಲೀಕರಣಕ್ಕೆ ಒತ್ತು ನೀಡಿದ್ದರು. ಯಾವುದೇ ಒತ್ತಡ ಬಂದರೂ ಅವುಗಳಿಗೆ ಮಣಿಯದೆ ದಶಕಗಳಿಂದ ಕೊಳೆಯುತ್ತಾ ಬಿದ್ದಿದ್ದ ರಸ್ತೆ ಅಗಲೀಕರಣಗೊಳಿಸಿ ಜನಮಾನಸದಲ್ಲಿ ನೆಲೆಯಾಗಿದ್ದರು. ಖಡಕ್ ಅಧಿಕಾರಿ ಎಂದೇ ಜನಪ್ರಿಯರಾಗಿದ್ದ ರವಿಕುಮಾರ್ ಇದೀಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಇತರ ಅಧಿಕಾರಿಗಳ ವರ್ಗಾವರ್ಗಿ :
ರಾಜ್ಯ ಸರ್ಕಾರವು ಎಂಟು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ಐಎಎಸ್ ಅಧಿಕಾರಿ ಶೆಟ್ಟೆಣ್ಣನವರ್ ಎಸ್. ಬಿ. ಅವರನ್ನು ಹಟ್ಟಿ ಗೋಲ್ಡ್ ಮೈನಿಂಗ್ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಮಂಜುನಾಥ್ ಜೆ ಅವರನ್ನು ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿಯನ್ನಾಗಿ ನೇಮಿಸಿದೆ.
ಅನ್ನೀಸ್ ಕಣ್ಮಣಿ ಜೋಯ್ ಅವರನ್ನು ಬೆಂಗಳೂರಿನ ಕಮರ್ಷಿಯಲ್ ಟ್ಯಾಕ್ಸ್ನ ಹೆಚ್ಚುವರಿ ಆಯುಕ್ತರನ್ನಾಗಿ ನೇಮಿಸಿದೆ. ಚಾರುಲತಾ ಸೋಮಲ್ ಅವರನ್ನು ನವದೆಹಲಿಯ ಕರ್ನಾಟಕ ಭವನದ ಎಆರ್ಸಿ ಆಗಿ ನೇಮಿಸಿದೆ.
ಐಎಎಸ್ ಅಧಿಕಾರಿ ಬಸವರಾಜೇಂದ್ರ ಹೆಚ್ ಅವರನ್ನು ಸ್ಕಿಲ್ ಡೆಲವೆಲಪ್ಮೆಂಟ್, ಎಂಟರ್ ಪ್ರೈನರ್ ಮತ್ತು ಲೈವ್ಲಿ ಹುಡ್ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಿದೆ. ಕವಿತಾ ಎಸ್ ಮನ್ನಿಕೇರಿ ಅವರನ್ನು ಬೆಂಗಳೂರಿನ ಕರ್ನಾಟಕ ಹೌಸಿಂಗ್ ಬೋರ್ಡ್ ಆಯುಕ್ತರನ್ನಾಗಿ ನೇಮಿಸಲಾಗಿದೆ.
ರಾಜೀವ್ ಗಾಂಧಿ ವಿಶ್ವ ವಿದ್ಯಾಲಯದ ರಜಿಸ್ಟ್ರಾರ್ ಆಗಿದ್ದ ರವಿಕುಮಾರ ಎಂ.ಆರ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯನ್ನಾಗಿ ನೇಮಕ ಮಾಡಿದೆ.
ಡಾ.ವಾಸಂತಿ ಅಮರ ಬಿ.ವಿ. ಅವರನ್ನು ಕೆಎಸ್ಎಂಸಿಎಲ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಹುದ್ದೆಯಿಂದ ಬೆಂಗಳೂರು ನಗರ ಉತ್ತರ ವಿಭಾಗದ ವಿಶೇಷ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ.