ಬೆಳಗಾವಿ: ಕೇಂದ್ರ ಸಾಂಸ್ಕೃತಿಕ ಮಂತ್ರಾಲಯದ ಸಹಯೋಗದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಮಾರ್ಚ್ 7ರಿಂದ 12ರವರೆಗೆ ನವದೆಹಲಿಯಲ್ಲಿ ಆಯೋಜಿಸಿರುವ ಸಾಹಿತ್ಯ ರಂಗದಲ್ಲೇ ಪ್ರತಿಷ್ಠಿತ ಕಾರ್ಯಕ್ರಮವಾದ
‘ಏಷ್ಯಾದ ಅತಿದೊಡ್ಡ ಸಾಹಿತ್ಯೋತ್ಸವ’ಕ್ಕೆ ಬೆಳಗಾವಿಯ ಹಿರಿಯ ಸಾಹಿತಿ, ಕವಿ ಮತ್ತು ನಿವೃತ್ತ ಅಧಿಕಾರಿ ರವಿ ಕೋಟಾರಗಸ್ತಿ (ಎಸ್.ಸಿ.ಕೋಟಾರಗಸ್ತಿ) ಆಯ್ಕೆಯಾಗಿದ್ದಾರೆ.
ಮಾರ್ಚ್ 8ರಂದು ಬೆಳಿಗ್ಗೆ 10ಕ್ಕೆ ನಡೆಯುವ ‘ಎಸೆಂಬಲ್ ಆಫ್ ಇಮೇಜ್, ರಿದಮ್ ಆ್ಯಂಡ್ ಬ್ಯೂಟಿ: ಮಲ್ಟಿಲಿಂಗ್ವಲ್ ಪೋಯಿಟ್ರಿ ರೀಡಿಂಗ್ಸ್’ ವಿಷಯ ಕುರಿತ ಕವಿಗೋಷ್ಠಿಯಲ್ಲಿ ಕನ್ನಡ ವಿಷಯದಲ್ಲಿ ಅವರು ಕಾವ್ಯ ವಾಚಿಸಲಿದ್ದಾರೆ.
ಅವರೊಂದಿಗೆ ಡೊಗ್ರಿ, ಗುಜರಾತಿ, ಹಿಂದಿ, ಕಾಶ್ಮೀರಿ, ಓಡಿಯಾ, ಸಾಂಸ್ಕೃತಿಕ ಮತ್ತು ತಮಿಳು ಭಾಷೆಗಳಲ್ಲೂ ಕವಿಗಳು ಕಾವ್ಯ ವಾಚಿಸಲು ವೇದಿಕೆ ಹಂಚಿಕೊಳ್ಳಲಿದ್ದಾರೆ.
‘ಸರ್ಕಾರಿ ನೌಕರಿ ಜತೆಜತೆಯಲ್ಲೇ ಸಾಹಿತ್ಯಿಕ ಚಟುವಟಿಕೆಯಲ್ಲೂ ಪಾಲ್ಗೊಳ್ಳುತ್ತ ಬಂದವನು ನಾನು. ಇಂಥದ್ದೊಂದು ಸಾಹಿತ್ಯೋತ್ಸವದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗಿದೆ’ ಎಂದು ರವಿ ಕೋಟಾರಗಸ್ತಿ ಸಂತಸ ಹಂಚಿಕೊಂಡಿದ್ದಾರೆ.
‘ಈ ಉತ್ಸವದಲ್ಲಿ ದೇಶದ ನಾನಾ ಸಾಂಸ್ಕೃತಿಕ ವಲಯಗಳ ಅನಾವರಣವಾಗುತ್ತದೆ. ದಿಗ್ಗಜ ಸಾಹಿತಿಗಳ ಸಮಾಗಮವಾಗುತ್ತದೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿರುವ ಕರ್ನಾಟಕದ ಡಾ.ಬಸವರಾಜ ಕಲಗುಡಿ, ಡಾ.ಮನು ಬಳಿಗಾರ, ಡಾ.ಬಸವರಾಜ ಸಾದರ, ಮರಾಠಿಯ ಪ್ರಖ್ಯಾತ ಲೇಖಕರಾದ ನಿವೃತ್ತ ಐಎಎಸ್ ಅಧಿಕಾರಿಗಳಾದ ಮಹಾರಾಷ್ಟ್ರದ ಡಾ.ವಿಶ್ವಾಸ ಪಾಟೀಲ ಹಾಗೂ ಅಕಾಡೆಮಿಯ ಮಾಜಿ ಸದಸ್ಯರಾದ ಬೆಳಗಾವಿಯ ಹಿರಿಯ ಸಾಹಿತಿ ಸರಜೂ ಕಾಟ್ಕರ್ ಅವರ ಸಹಕಾರ ಸ್ಮರಿಸುತ್ತೇನೆ. ಸಾಹಿತ್ಯದಲ್ಲಿ ಅತ್ಯುನ್ನತ ಕಾರ್ಯಕ್ರಮವಾದ ಇದರಲ್ಲಿನ
ದಿಗ್ಗಜರೊಂದಿಗೆ ವೇದಿಕೆ ಹಂಚಿಕೊಳ್ಳುವುದು ನನ್ನ ಸೌಭಾಗ್ಯ.
ಸಾಹಿತ್ಯಿಕ ಸಾಧನೆಗೆ ನೆರವಾದ ಬೆಳಗಾವಿಯ ಎಲ್ಲ ಸಾಹಿತಿಗಳು, ಇತರೆ ರಂಗಗಳ ಹಿರಿಯರಿಗೆ ಅಭಾರಿಯಾಗಿದ್ದೇನೆ’ ಎಂದು ಹೇಳಿದ್ದಾರೆ.