ಉಡುಪಿ :
ಕುಂದಾಪುರದ ಎರಡು ವರ್ಷದ ಕಂದಮ್ಮಳ ಚಿಕಿತ್ಸೆಗೆ ಈ ಬಾರಿ ಕೃಷ್ಣ ಜನ್ಮಾಷ್ಟಮಿ ಎಂದು ವೇಷ ಹಾಕುವುದಾಗಿ ಖ್ಯಾತ ಸಾಮಾಜಿಕ ಕಾರ್ಯಕರ್ತ ರವಿ ಕಟಪಾಡಿ ತಿಳಿಸಿದ್ದಾರೆ.
ಕಳೆದ ಎಂಟು ವರ್ಷಗಳಲ್ಲಿ ಕೃಷ್ಣ ಜನ್ಮಾಷ್ಟಮಿಯಂದು ವಿಶಿಷ್ಟ ವೇಷ ಹಾಕಿ 1.13 ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರಹಿಸಿ 70 ಕ್ಕೂ ಹೆಚ್ಚು ಬಡ ಕುಟುಂಬಗಳ ಅನಾರೋಗ್ಯ ಪೀಡಿತ ಕಂದಮ್ಮಗಳ ಚಿಕಿತ್ಸೆಗೆ ಅವರು ದಾನ ಮಾಡಿದ್ದಾರೆ. ಆದರೆ, ಪಾರದರ್ಶಕವಾಗಿ ಹಣ ಸಂಗ್ರಹಿಸಿ ಅದನ್ನು ಸಂಬಂಧಪಟ್ಟ ಕುಟುಂಬದವರಿಗೆ ವಿತರಿಸುತ್ತಿದ್ದರು. ಆ ಬಗ್ಗೆ ಬಂದಿರುವ ಅಪವಾದದಿಂದ ಬೇಸರಿಸಿಕೊಂಡಿರುವ ರವಿ ಅವರು, ಈ ಬಾರಿ ವೇಷ ಹಾಕುತ್ತೇನೆ. ಆದರೆ, ಡಬ್ಬ ಹಿಡಿದು ಬೇಡುವುದಿಲ್ಲ. ಯಾರಾದರೂ ಕೊಟ್ಟರೆ ತೆಗೆದುಕೊಳ್ಳುತ್ತೇನೆ. ಅಷ್ಟು ಹಣವನ್ನು ಅನಾರೋಗ್ಯದಿಂದ ಬಳಲುತ್ತಿರುವ ಕುಂದಾಪುರದ ಎರಡು ವರ್ಷದ ಕಂದಮ್ಮಳ ಚಿಕಿತ್ಸೆಗೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಮಕ್ಕಳ ಚಿಕಿತ್ಸೆಗೆ ಹಣ ಸಂಗ್ರಹಿಸುವ ಕಾರ್ಯಕ್ಕೆ ಅಡ್ಡಿಯಾಗಬಾರದು ಎಂದು ಅವಿವಾಹಿತರಾಗಿಯೇ ಉಳಿದಿರುವ ರವಿ ಅವರು ಸರಕಾರ ನೀಡಿರುವ 2:45 ಸೆಂಟ್ಸ್ ಭೂಮಿಯಲ್ಲಿ ಮನೆ ಕಟ್ಟುತ್ತಿದ್ದಾರೆ. ಎರಡು ದಶಕಗಳಿಂದ ಕಟ್ಟಡ ಕಾರ್ಮಿಕರಾಗಿರುವ ಅವರು ಮನೆ ಕಟ್ಟುತ್ತಿದ್ದಾರೆ.
ಆದರೆ ಇದೀಗ ಕೆಲವರು ಮಕ್ಕಳ ಹೆಸರಿನಲ್ಲಿ ಸಂಪಾದಿಸಿದ ಹಣದಲ್ಲಿ ಮನೆ ಕಟ್ಟುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಮಕ್ಕಳಿಗಾಗಿ ಸಂಗ್ರಹಿಸಿದ ಹಣದಿಂದ ಮನೆ ಕಟ್ಟುವುದಕ್ಕೆ ಎಂಟು ವರ್ಷ ಕಾಯಬೇಕಿತ್ತೇ ? ಯಾವಾಗಲೇ ಕಟ್ಟುತ್ತಿದ್ದೆ ಎಂದು ಅಪವಾದ ಹೊರಿಸಿದವರ ಮೇಲೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಮುಂದೆ ವೇಷ ಹಾಕುವುದಿಲ್ಲ ಎಂದು ಹೇಳಿದ್ದೆ. ಆದರೆ ಇತ್ತೀಚಿಗೆ ತಮ್ಮ ಎರಡು ವರ್ಷದ ಮಗುವಿನ ಚಿಕಿತ್ಸೆಗೆ 15 ಲಕ್ಷ ರೂಪಾಯಿ ಬೇಕು ಎಂದು ವೈದ್ಯರು ಹೇಳಿರುವ ಕಾರಣ ಆ ಕುಟುಂಬದ ನೆರವಿಗೆ ಧಾವಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.
ಪ್ರತಿ ಸಲ ಕೃಷ್ಣ ಜನ್ಮಾಷ್ಟಮಿಯಂದು ಹಾಲಿವುಡ್ ಸಿನಿಮಾಗಳ ವಿಶೇಷ ಪಾತ್ರ ವಹಿಸುತ್ತಿದ್ದ ರವಿ ಅವರು, ಈ ಬಾರಿ ಸೀ ಪೋಕ್ ಸಿನಿಮಾದ ಪಾತ್ರ ಹಾಕಲಿದ್ದಾರೆ.