ಬೆಳಗಾವಿ : ಅಥಣಿ ತಾಲೂಕಿನ ತೆಲಸಂಗ ಸಮೀಪದ ಕಕಮರಿ ಗ್ರಾಮದಲ್ಲಿ ಹಾವು ಕಚ್ಚಿ ಮಗನನ್ನು ಕಳೆದುಕೊಂಡ ಕುಟುಂಬ ಆ ಮಗನ ಸಾವಿಗೆ ಕಾರಣವಾದ ಹಾವನ್ನು3 ದಿನಗಳ ನಂತರ ಸೆರೆ ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡುವ ಮೂಲಕ ಮಾನವೀಯತೆ ಮೆರೆದಿದೆ.
ಮೇ 31ರಂದು ಅಮಿತ್ ಗುರುಲಿಂಗ ಸಿಂಧೂರ (10) ಎಂಬ ಬಾಲಕ ಮನೆಯಲ್ಲಿ ಮೊಬೈಲ್ ನೋಡುತ್ತಾ ನಿದ್ದೆಗೆ ಜಾರಿದ್ದ. ಆಗ ಮನೆಯೊಳಗೆ ನುಸುಳಿದ್ದ ಹಾವು ಬಾಲಕನ ಕೈಗೆ ಕಚ್ಚಿತ್ತು. ತಕ್ಷಣ ಬಾಲಕನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದ. 3 ದಿನಗಳ ಕಾಲ ಹಾವು ಅದೇ ಸ್ಥಳದಲ್ಲಿ ಉಳಿದುಕೊಂಡಿತ್ತು.
ಬಾಲಕನ ಅಂತ್ಯಕ್ರಿಯೆಯ ವಿಧಿ ವಿಧಾನ ಮುಗಿಸಿದ ನಂತರ ಕುಟುಂಬಸ್ಥರು ಸೇರಿ ಆ ಹಾವನ್ನು ಕೊಲ್ಲುವ ಬದಲು ಉರಗ ರಕ್ಷಕರಿಗೆ ಮಾಹಿತಿ ನೀಡಿ ಹಾವನ್ನು ಸೆರೆ ಹಿಡಿದು ಕಾಡಿಗೆ ಬಿಡಲಾಯಿತು. ಕುಟುಂಬದ ಈ ಕಾರ್ಯವು ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.

 
             
         
         
        
 
  
        
 
    