ಬೆಳಗಾವಿ: ಬಾಲಕಿ ಮೇಲೆ ಅತ್ಯಾಚಾರವೆಸಗಿದ ಅಪರಾಧಿಗೆ ಬೆಳಗಾವಿ ಪೋಕ್ಸೊ ನ್ಯಾಯಾಲಯ 30 ವರ್ಷ ಶಿಕ್ಷೆ ಮತ್ತು ರೂ.10 ಸಾವಿರ ದಂಡ ವಿಧಿಸಿ ಬುಧವಾರ ತೀರ್ಪು ನೀಡಿದೆ.
ಖಾನಾಪುರ ತಾಲೂಕಿನ ಕಕ್ಕೇರಿಯ ಕೃಷ್ಣಾ ಗಣಪತಿ ವಡ್ಡರ ಶಿಕ್ಷೆಗೆ ಒಳಗಾದ ವ್ಯಕ್ತಿ. 2019ರ ಜೂನ್ 20 ರಂದು ಈತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ. ನಂತರ ಮಹಾರಾಷ್ಟ್ರದ ಮಿರಜ್ಗೆ ಅಪಹರಿಸಿಕೊಂಡು ಹೋಗಿ, ಮದುವೆಯಾಗುವುದಾಗಿ ನಂಬಿಸಿ ನಿರಂತರವಾಗಿ ಅತ್ಯಾಚಾರ ಮಾಡಿದ್ದ.
ಈ ಬಗ್ಗೆ ಬಾಲಕಿಯ ಪೋಷಕರು ನಂದಗಡ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖಾಧಿಕಾರಿ ಎಂ.ಆರ್.ಪವಾರ ಅವರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತೀರ್ಪು ಪ್ರಕಟಿಸಿದ್ದಾರೆ. ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಸಂತ್ರಸ್ತೆ ರೂ. 4 ಲಕ್ಷ ಪರಿಹಾರ ಪಡೆಯುವಂತೆ ಮತ್ತು ಆ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಐದು ವರ್ಷಗಳವರೆಗೆ ಠೇವಣಿಯಾಗಿ ಇರಿಸುವಂತೆ ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ.ಪಾಟೀಲ ವಾದ ಮಂಡಿಸಿದ್ದರು.