ಬೆಳಗಾವಿ : ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಬಿಜೆಪಿಯಿಂದ ರಮೇಶ ಕತ್ತಿ ಅವರಿಗೆ ಮತ್ತೊಮ್ಮೆ ಬಿಜೆಪಿ ಟಿಕೆಟ್ ಸಿಗುವುದು ಬಹುತೇಕ ಖಚಿತ ಎನಿಸಿದೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದೆ ರಮೇಶ ಕತ್ತಿ ಗೆಲುವು ಸಾಧಿಸಿದ್ದರು. ಕಳೆದ ಸಲ ಅಣ್ಣಾ ಸಾಹೇಬ ಜೊಲ್ಲೆ ಅವರಿಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಈ ಸಲ ಕತ್ತಿ ಅವರಿಗೆ ಮತ್ತೊಂದು ಅವಕಾಶ ಮಾಡಿಕೊಡುವುದು ಬಹುತೇಕ ನಿಶ್ಚಿತವಾಗಿದೆ.
ಈ ಬಾರಿ ಹುಕ್ಕೇರಿ ವಿಧಾನಸಭಾ ಕ್ಷೇತ್ರ ಸೇರಿದಂತೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ರಮೇಶ ಕತ್ತಿ ಅವರ ಪರ ಬಲವಾದ ಗಾಳಿ ಬೀಸುತ್ತಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿರುವ ಬಿಜೆಪಿ ವರಿಷ್ಠರು ಹಾಲಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಅವರಿಗೆ ಟಿಕೆಟ್ ನಿರಾಕರಿಸುವ ಸಾಧ್ಯತೆ ಇದ್ದು, ಕತ್ತಿ ಅವರಿಗೆ ಮನ್ನಣೆ ನೀಡುವ ಸಾಧ್ಯತೆ ಬಹುತೇಕ ಹೆಚ್ಚಿದೆ. ಈ ಸಲ ತಮಗೆ ಸ್ಪರ್ಧೆಗೆ ಅವಕಾಶ ಮಾಡಿಕೊಡಬೇಕು ಎಂದು ರಮೇಶ ಕತ್ತಿ ಮೊದಲಿನಿಂದಲೂ ಒತ್ತಾಯ ಮಾಡುತ್ತಾ ಬಂದಿದ್ದಾರೆ. ಕಾಂಗ್ರೆಸ್ ಪಕ್ಷ ಸಹ ರಮೇಶ ಕತ್ತಿ ಅವರಿಗೆ ಟಿಕೆಟ್ ನೀಡಲು ಉತ್ಸುಕತೆ ತೋರಿಸಿತ್ತು. ಆದರೆ, ಪಕ್ಷನಿಷ್ಠೆ ತೋರಿಸಿದ್ದ ಕತ್ತಿ ಅವರು ಬಿಜೆಪಿ ವರಿಷ್ಠರು ಕೃಪಾಕಟಾಕ್ಷ ತೋರಿರುವುದು ಸ್ಪಷ್ಟವಾಗಿದೆ.
ಈ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ ಹೈಕಮಾಂಡ್ ಈ ಬಾರಿ ರಮೇಶ ಕತ್ತಿ ಅವರಿಗೆ ಟಿಕೆಟ್ ನೀಡುವ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಮ್ಮೆ ಅವರಿಗೆ ಸಂಸದರಾಗುವ ಅವಕಾಶ ಮಾಡಿಕೊಡುವ ಸಾಧ್ಯತೆ ಗೋಚರಿಸಿದ್ದು, ಎದುರಾಳಿ ಅಭ್ಯರ್ಥಿ ಯಾರೇ ಇದ್ದರೂ ಕತ್ತಿ ಅವರು ಬಹುದೊಡ್ಡ ಅಂತರದಿಂದ ಗೆಲುವು ಸಾಧಿಸುವುದರಲ್ಲಿ ಅನುಮಾನವಿಲ್ಲ.