ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಅತ್ಯಂತ ಸದೃಢವಾಗಿದೆ. ಯಾರು ಸಹ ನನ್ನ ರಾಜೀನಾಮೆಯಿಂದ ಬ್ಯಾಂಕಿನಲ್ಲಿ ಇಟ್ಟ ಠೇವು ವಾಪಸು ಪಡೆಯದಂತೆ ಡಿಸಿಸಿ ಬ್ಯಾಂಕಿಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಮೇಶ ಕತ್ತಿ ಮನವಿ ಮಾಡಿದ್ದಾರೆ.
ಬೆಲ್ಲದ ಬಾಗೇವಾಡಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಸದಸ್ಯತ್ವ ಕುರಿತ ಅಂತಿಮ ಹಂತದ ನಿರ್ಧಾರಕ್ಕೆ ಬಾರದ ಕಾರಣ ನಾನು ರಾಜೀನಾಮೆ ನೀಡಿದ್ದೇನೆ. ಈ 42 ವರ್ಷಗಳ ಅವಧಿಯಲ್ಲಿ ನನ್ನಿಂದ ತಪ್ಪಾಗಿದ್ದರೆ ಅದು ಬ್ಯಾಂಕಿನ ಹಿತ ದೃಷ್ಟಿಯಿಂದ ಮಾಡಿರಬಹುದು. ಯಾವ ತಪ್ಪಿದ್ದರೂ, ನೋವಿದ್ದರೆ ವಿಷಾದ ವ್ಯಕ್ತಪಡಿಸುವೆ ಎಂದು ಅವರು ಹೇಳಿದರು.
27 ವರ್ಷಗಳ ಕಾಲ ಬ್ಯಾಂಕಿನ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೇನೆ. ಬ್ಯಾಂಕಿನ ಪ್ರಗತಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಎಲ್ಲರೊಂದಿಗೆ ಚರ್ಚೆ ಮಾಡಿದ ನಂತರ ರಾಜೀನಾಮೆ ನೀಡಿರುವೆ. ಎಲ್ಲಾ ನಿರ್ದೇಶಕರು ಒಗ್ಗಟ್ಟಾಗಿದ್ದು ಯಾವುದೇ ಅವಿಶ್ವಾಸದ ಕುರಿತು ಚರ್ಚೆ ನಡೆದಿಲ್ಲ ನನಗೆ 60 ವರ್ಷವಾಗಿದ್ದರಿಂದ ಈಗ ರಾಜೀನಾಮೆ ಕೊಟ್ಟಿರುವೆ ಎಂದು ಅವರು ಹೇಳಿದರು.
ಯಾವ ನಿರ್ದೇಶಕರು ನನ್ನ ವಿರುದ್ಧವಾಗಿ ಕೆಲಸ ಮಾಡಿಲ್ಲ. ಪಕ್ಷಾತೀತವಾಗಿ ಎಲ್ಲರೂ ಸಹಕರಿಸಿದ್ದಾರೆ. ಹೊಸಬರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ನಾನು ಬ್ಯಾಂಕಿನ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಅವರು ಸ್ಪಷ್ಟಪಡಿಸಿದರು.
ನಾನು 1999ರಲ್ಲಿ ಅಧಿಕಾರ ಪಡೆದಾಗ ಬ್ಯಾಂಕು ₹28.60 ಕೋಟಿ ಷೇರು ಬಂಡವಾಳ ಹೊಂದಿತ್ತು. 2024ರ ಮಾರ್ಚ್ ಅಂತ್ಯಕ್ಕೆ ₹273.66 ಕೋಟಿ ಇದೆ. ₹369.28 ಕೋಟಿ ಇದ್ದ ಠೇವಣಿ ಈಗ ₹5797.29 ಕೋಟಿ ಇದೆ. ದುಡಿಯುವ ಬಂಡವಾಳ ₹577.83 ಕೋಟಿಯಿಂದ 7894.96 ಕೋಟಿಗೆ ಏರಿದೆ. ಆಗ ₹442.15 ಸಾಲ ನೀಡಲಾಗಿತ್ತು. ಈಗ ₹5230.74 ಕೋಟಿ ನೀಡಿದ್ದೇವೆ. ಆಡಳಿತಾತ್ಮಕ ವೆಚ್ಚ ಶೇ 3.23ರಿಂದ ಶೇ 1.71ರಷ್ಟು ಕಡಿಮೆಯಾಗಿದೆ ಎಂದು ಅವರು ತಮ್ಮ ಅವಧಿಯ ಸಾಧನೆ ಬಿಚ್ಚಿಟ್ಟರು. 3.28 ಲಕ್ಷ ರೈತರಿಗೆ ₹3100 ಕೋಟಿ ಲಾಭವಾಗಿದೆ. ಹುಕ್ಕೇರಿ ತಾಲ್ಲೂಕಿನ ಸುಮಾರು 38 ಸಾವಿರ ರೈತರಿಗೆ ₹310 ಕೋಟಿ ಸಾಲಮನ್ನಾ ಆಗಿದೆ ಎಂದರು.