ಬೆಳಗಾವಿ :
ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ಸಂತಿಬಸ್ತವಾಡ ಗ್ರಾಮದಲ್ಲಿ ಶಾಸಕ ರಮೇಶ ಜಾರಕಿಹೊಳಿ ಮತ್ತೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದವರ ಗೆಲುವಿನ ಅಂತರ ಈಗ 10,000 ಕ್ಕೆ ಬಂದು ಇಳಿದದ್ದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಕಳೆದ ಬಾರಿ ಶಾಸಕರಾಗಿ ಗೆದ್ದ ಒಂದೇ ಗಂಟೆಯಲ್ಲಿ ಈಗಿನ ಹಾಲಿ ಶಾಸಕರು ಬದಲಾದರು. ನಾನು ದುಡ್ಡಿನಿಂದ, ಬೆಂಗಳೂರಿನ ಮಹಾ ನಾಯಕನಿಂದ ಗೆದ್ದೇ ಎಂದರು. ಚುನಾವಣೆ ಕಾಲಕ್ಕೆ ಅವರ ಗೆಲುವಿಗೆ ಹಗಲು ರಾತ್ರಿ ದುಡಿದ ನನ್ನನ್ನೇ ಮರೆತರು. ಗ್ರಾಮೀಣ ಮತಕ್ಷೇತ್ರದ ಜನ ಅವರ ದುಡ್ಡಿಗೆ ಕೈಯೊಡ್ಡದೇ ಸ್ವಾಭಿಮಾನಕ್ಕೆ ಸಂಕಲ್ಪ ಮಾಡಬೇಕು. ಯಾವುದೇ ಆಸೆ- ಆಮಿಷಗಳಿಗೆ ಈ ಬಾರಿ ಬಲಿಯಾಗಬಾರದು. ಕಳೆದ ಸಲ ಇಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದಕ್ಕೆ ನಾನು ಅಸಹಾಯಕನಾದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
50 ವರ್ಷಗಳಿಂದ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೆ. ಗ್ರಾಮೀಣ ಶಾಸಕಿ, ಮಹಾನಾಯಕನಿಂದಲೇ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರುವ ಅನಿವಾರ್ಯ ಸ್ಥಿತಿ ನಿರ್ಮಾಣವಾಯಿತು. ಆದರೆ ಬಿಜೆಪಿ ನನಗೆ ದಿನೇ ದಿನೇ ಹೆಚ್ಚಿನ ಮನ್ನಣೆ ನೀಡುತ್ತಿದ್ದು ಇಲ್ಲಿ ಯಾವುದೇ ಸ್ವಜನಪಕ್ಷಪಾತಕ್ಕೆ ಅವಕಾಶ ಇಲ್ಲ. ಪಕ್ಷ ಇಲ್ಲಿ ನೈಜ ನಾಯಕರಿಗೆ ಕೆಲಸ ಮಾಡುವ ಶಕ್ತಿ ನೀಡುತ್ತಿದೆ ಎಂದು ಅವರು ಹೇಳಿದರು.
ನಾನು ಈಗ ಬಿಜೆಪಿ ಸೇರಿದ್ದರಿಂದ ನನಗೆ ಬಹಳಷ್ಟು ಒಳ್ಳೆಯದಾಗಿದೆ. ನನಗೆ ಉತ್ತಮ ನಾಯಕತ್ವ ಸಿಕ್ಕಿದೆ. ಎಲ್ಲಾ ನಾಯಕರು ನನ್ನನ್ನು ಪ್ರೀತಿ ಹಾಗೂ ವಿಶ್ವಾಸದಿಂದ ದೊಡ್ಡ ನಾಯಕನನ್ನಾಗಿ ಮಾಡಿ ಸಹಕಾರ ಕೊಡುತ್ತಿದ್ದಾರೆ. ಬಿಜೆಪಿ ದಿನೇ ದಿನೇ ಬಲವರ್ಧನೆ ಆಗುತ್ತಿದೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಅವರು ಹೇಳಿದರು.
ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಶಾಸಕರು ರಸ್ತೆ, ಚರಂಡಿ ಬಿಟ್ಟರೆ ಏನೊಂದು ಅಭಿವೃದ್ಧಿ ಮಾಡಿಲ್ಲ. ನಾನು ಸಹಾ ಇದೇ ಕ್ಷೇತ್ರದಲ್ಲಿ ಓಡಾಡುತ್ತಿದ್ದೇನೆ. ನನಗೆ ಮುಖ್ಯ ರಸ್ತೆಯ ಅಭಿವೃದ್ಧಿ ಆಗಿರುವುದೇ ಕಾಣುತ್ತಿಲ್ಲ. ಸರಕಾರಿ ಅನುದಾನದಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಿದರೂ ತಾವೇ ಸ್ವಂತ ದುಡ್ಡಿನಲ್ಲಿ ಅಭಿವೃದ್ಧಿ ಮಾಡಿದ್ದೇವೆ ಎನ್ನುತ್ತಾರೆ. ರಾಜಹಂಸಗಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆಗೊಳಿಸಿದರು ಆದರೆ ಆನಂತರ ಮುಖ್ಯಮಂತ್ರಿ ಲೋಕಾರ್ಪಣೆ ಗೊಳಿಸಿದ ನಂತರವೂ ಎರಡನೇ ಬಾರಿ ಲೋಕಾರ್ಪಣೆ ಮಾಡುವ ಕೆಟ್ಟ ಗಳಿಗೆ ಯಾಕೆ ಬಂತು ? ಎಷ್ಟು ಕೆಟ್ಟ ಗುಣ ಇದೆ ಎಂಬುದು ಗೊತ್ತಾಗುತ್ತದೆ. ಒಬ್ಬ ಹೆಣ್ಣು ಮಗಳಾಗಿ ಕೆಟ್ಟ ಸ್ವಭಾವ, ಗೂಂಡಾಗಿರಿ ಪ್ರವೃತ್ತಿ ಇದೆ. ಇಂಥವರು ಚುನಾವಣೆಯಲ್ಲಿ ಮತ್ತೆ ಆರಿಸಿ ಬಂದರೆ ಇಲ್ಲಿನ ಜನರ ಪರಿಸ್ಥಿತಿ ಏನಾಗಲಿದೆ ಎಂಬುದರ ಕುರಿತು ಎಲ್ಲರೂ ವಿಚಾರ ಮಾಡಬೇಕು ಎಂದು ಅವರು ಎಚ್ಚರಿಕೆ ನೀಡಿದರು.
ಬೆಳಗಾವಿ ಗ್ರಾಮೀಣ ಬಿಜೆಪಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಜೆಪಿ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧವಾಗಿದ್ದೇನೆ. ನಾಗೇಶ ಮನ್ನೋಳ್ಕರ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಬಿಜೆಪಿ ಯಾರಿಗೆ ಟಿಕೆಟ್ ನೀಡುತ್ತದೆ ಅವರ ಪರವಾಗಿ ನಾನು ಕೆಲಸ ಮಾಡುವೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಲಿಷ್ಠ ಸರ್ಕಾರ ಇದೆ. ರಾಜ್ಯದಲ್ಲೂ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲೇಬೇಕು ಎಂದು ಅವರು ಮನವಿ ಮಾಡಿದರು.