ಬೆಳಗಾವಿ:
ಜಿಲ್ಲೆಯಲ್ಲಿರುವ ಸರ್ವ ಪಕ್ಷದ ಮುಖಂಡರನ್ನು ಒಂದುಗೂಡಿಸುವ ಮೂಲಕ ಬಿಜೆಪಿಗೆ ಕರೆತರುವ ಕಾರ್ಯ ಭರದಿಂದ ಸಾಗಿದ್ದು, 2023 ರಲ್ಲಿ ಬೆಳಗಾವಿ ಗ್ರಾಮೀಣ ಸೇರಿ ಜಿಲ್ಲೆಯ 14 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಿ ಅಧಿಕಾರಕ್ಕೆ ತರಲಾಗುವುದು ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಸಂಕಲ್ಪ ಮಾಡಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿ ಗ್ರಾಮದಲ್ಲಿ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅಭಿಮಾನಿಗಳ ಬಳಗ ವತಿಯಿಂದ ಶುಕ್ರವಾರ ನಡೆದ ಅಭಿಮಾನದ ಕಾರ್ಯಕರ್ತರ ಸಮಾವೇಶವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಧ್ವಜ ಹಾರಿಸುತ್ತೇವೆ. ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನಮ್ಮಏಕೈಕ ಉದ್ದೇಶ. ಹಲವು ವರ್ಷಗಳಿಂದ ಬಿಜೆಪಿ ಸಂಘಟಿಸಲು ಪ್ರಯತ್ನ ಮಾಡುತ್ತಿದ್ದೇವೆ. ಈಗ ಸಮಾವೇಶದಲ್ಲಿ ಪಕ್ಷದ ಚಿಹ್ನೆ ಮೇಲೆ ನಡೆಸದೇ ಎಲ್ಲ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರನ್ನು ಇಲ್ಲಿ ಸೇರಿಸಲಾಗಿದೆ. ಇವರೆಲ್ಲರನ್ನೂ ಬಿಜೆಪಿಗೆ ಕರೆ ತಂದು ಬಿಜೆಪಿಯನ್ನು ಸಂಘಟಿಸಲಾಗುವುದು. ಬಿಜೆಪಿ ಅಧಿಕಾರಕ್ಕೆ ತರುವುದಾಗಿ ಎಲ್ಲರೂ ಸಂಕಲ್ಪ ಮಾಡುತ್ತೇವೆ. ನನಗೆ ಮಂತ್ರಿ ಕೊಡ್ತಾರೋ ಬಿಡ್ತಾರೋ ಗೊತ್ತಿಲ್ಲ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಜಿಲ್ಲೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಿಸುತ್ತೇನೆ ಎಂದು ಹೇಳಿದರು.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕಿ ವಿರುದ್ಧ ಗುಡುಗಿದ ರಮೇಶ ಜಾರಕಿಹೊಳಿ, ಈ ಸಮಾವೇಶದಲ್ಲಿ ಗಿಪ್ಟ್ ಕೊಡೋಣ ಅಂತ ನನಗೆ ಕೆಲವರು ಸಲಹೆ ನೀಡಿದರು. ಆದರೆ ಅದಕ್ಕೆ ನಾನು ಒಪ್ಪಲಿಲ್ಲ. ಇದೇ ಮೈದಾನದಲ್ಲಿ ಕೆಲ ದಿನಗಳ ಹಿಂದೆ ಬೆಂಗಳೂರಿನ ಮಹಾನಾಯಕ ಬಂದಾಗ ಹಿಂದೆ ಗಿಫ್ಟ್ ಕೊಟ್ಟೂ 2-3 ಸಾವಿರ ಜನರೂ ಸೇರಿರಲಿಲ್ಲ.
ಈ ಕಾರ್ಯಕ್ರಮ ನಡೆಯುವ ಪಕ್ಕದ ಮೋದಗಾ ಗ್ರಾಮದಲ್ಲಿ ಮಿಕ್ಸರ್ ವಿತರಣೆ ಮಾಡುತ್ತಿದ್ದಾರೆ. ಅದನ್ನು ಧಿಕ್ಕರಿಸಿ ನೀವು ನಮ್ಮ ಕಾರ್ಯಕ್ರಮಕ್ಕೆ ಬಂದಿದ್ದೀರಿ. ನಿಮ್ಮಂತ ಜನರನ್ನು ಪಡೆದ ನಾವೇ ಧನ್ಯರು. ಇಂಥ ಜನರನ್ನು ಪಡೆದಿರುವ ನಾನು ಅದೃಷ್ಟವಂತ ಹಾಗೂ ಪುಣ್ಯವಂತ. ಇಂಥ ಜನಸಾಗರ ನೋಡಿ ನನಗೆ ಖುಷಿ ಅಗಿದೆ ಎಂದರು.
ಈವರೆಗೆ ಆರು ಚುನಾವಣೆ ಮಾಡಿದ್ದೇನೆ. ನಾನು ಯಾರಿಗೂ ನಯಾಪೈಸೆ ಕೊಟ್ಟಿಲ್ಲ. ಜನರೇ ಹಣ ಕೊಟ್ಟು ಗೆಲ್ಲಿಸಿದ್ದಾರೆ. ಜನರ ಪ್ರೀತಿ ಅಷ್ಟೊಂದು ನಮ್ಮ ಮೇಲೆ ಇದೆ. ಈಗಿನ ಗ್ರಾಮೀಣ ಮತಕ್ಷೇತ್ರದ ಶಾಸಕರನ್ನು ನಾನೇ ಗೆಲ್ಲಿಸಿ ತಂದಿದ್ದೀನೆ. ಈಗ ಅದು ನನಗೆ ಗರ್ರ ಎನ್ನುತ್ತಿದೆ. ಅದು ಕೆಟ್ಟ ಹುಳ, ಅದನ್ನು ತೆಗೆದು ಹಾಕಲೇಬೇಕು. ಈಗಿರುವ ಶಾಸಕರಾದ ಬಳಿಕ ಈ ಭಾಗದಲ್ಲಿ ರಸ್ತೆ ತುಂಬ ಕ್ಲಬ್, ಬಾರ್ಗಳು ಅವರ ಚಮಚಾಗಳಿಗೆ ಸೇರಿವೆ. ಅಕ್ರಮ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ. ಈ ಶಾಸಕರನ್ನು ಕಿತ್ತು ಹಾಕಬೇಕಿದೆ. ಅಷ್ಟೂ ಮೀರಿಜನರು ಅವರಿಗೆ ಮತ ಹಾಕಿದರೆ ಏನೂ ಮಾಡಲು ಆಗುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಪ್ಪಬೇಕಾಗುತ್ತದೆ ಎಂದು ಹೇಳಿದರು.
ಐದು ವರ್ಷದ ಹಿಂದೆ ಶಾಸಕರ ಸ್ಟೈಲ್(ಶೈಲಿ) ನೋಡಿ, ಈಗ ಅವರ ಸ್ಟೈಲ್ ನೋಡಿ ನಿಮಗೆ ಗೊತ್ತಾಗುತ್ತದೆ. ಎಲ್ಲವೂ ಬದಲಾಗಿದೆ. ಇದು ಜನರು ಗಮನಿಸುತ್ತಿದ್ದಾರೆ. ಹಾಲಿ ಶಾಸಕರು ಕೊಟ್ಟ ಹಣಕ್ಕಿಂತ ನಾವು 10 ಕೋಟಿ ರೂಪಾಯಿ ಜಾಸ್ತಿ ಖರ್ಚು ಮಾಡಿ ಅಭ್ಯರ್ಥಿಯ್ನು ಗೆಲ್ಲಿಸುತ್ತೇವೆ. ಈಗ ಶಾಸಕರು ಡಬ್ಬಿ, ಮಿಕ್ಸರ್ ಸೇರಿ ಇನ್ನೂ ಬೇರೆ ಬೇರೆ ಗಿಪ್ಟ್ ಕೊಟ್ಟರೆ ಒಟ್ಟು 3 ಸಾವಿರ ರೂಪಾಯಿ ಆಗುತ್ತದೆ. ನಾವು ಕೂಡ ಚುನಾವಣೆಯಲ್ಲಿ 6 ಸಾವಿರ ರೂ. ವರೆಗೆ ಕೊಟ್ಟರೆ ನೀವು ನಮಗೆ ಮತ ಹಾಕಿ ಗೆಲ್ಲಿಸಬೇಕು ಎಂದು ಹೇಳಿದರು.
ಕಳೆದ ಎಂಎಲ್ಸಿ ಚುನಾವಣೆಯಲ್ಲಿ ಬೇರೆಯವರ ಹಣ ತಂದು ಹಾಕಿ ಗೆದ್ದು ಬಂದಿದ್ದಾರೆ. ನನ್ನ ಮಂತ್ರಿ ಸ್ಥಾನ ಹೋದ ನಂತರ ಈ ಶಾಸಕರ ನಿಜ ಬಣ್ಣ ಬಯಲಾಗಿದೆ. ಸಚಿವನಾಗಿದ್ದರೆ ಇವರ ಬಣ್ಣ ಗೊತ್ತಾಗುತ್ತಿರಲಿಲ್ಲ. ಈಗ ಎಲ್ಲವೂ ಹೊರ ಬರುತ್ತಿದೆ. ನಾನು ಸಚಿವ ಸ್ಥಾನ ಹೋದ ಬಳಿಕ ಮನೆಯಲ್ಲಿ ಕುಳಿತುಕೊಳ್ಳುತ್ತೇನೆ ಎಂದುಕೊಂಡಿದ್ದ ಅವರಿಗೆ ನಿರಾಸೆಯಾಗಿದೆ. ನಾವು ಮನೆಯಲ್ಲಿ ಕೂರಲ್ಲ, ಹೊರಗೆ ಬಂದು ರಾಜಕಾರಣ ಮಾಡುತ್ತೇವೆ. ನಮ್ಮ ಜಾರಕಿಹೊಳಿ ಕುಟುಂಬದ ಮೇಲೆ ಬಹಳ ಷಡ್ಯಂತ್ರ ನಡೆದಿದೆ. ಅವು ಯಾವುದು ಫಲ ಕೊಟ್ಟಿಲ್ಲ ಎಂದರು.
ಈ ಹಿಂದೆ ಈ ಕ್ಷೇತ್ರದಲ್ಲಿ ಬಹಳಷ್ಟು ಜನ ಶಾಸಕರಾಗಿದ್ದಾರೆ. ಎಸ್.ಸಿ . ಮಾಳಗಿ, ಮನೋಹರ ಕಿಣೇಕರ, ಸಂಜಯ ಪಾಟೀಲ, ಅಭಯ ಪಾಟೀಲ ಶಾಸಕರಾಗಿದ್ದಾರೆ. ಇವರೆಲ್ಲರೂ ಬಹಳ ಚೆನ್ನಾಗಿ ಕೆಲಸ ಮಾಡಿದ್ದಾರೆ. ಆದರೆ ಈಗಿನ ಶಾಸಕರು ಅಧಿಕಾರ ಸಿಕ್ಕ ಮೇಲೆ ಅಹಂಕಾರ ಬಂದಿದೆ ಎಂದು ವಾಗ್ದಾಳಿ ನಡೆಸಿದರು.
ಮುಖಂಡ ಮಹಾಂತೇಶ ಅಲಿಬಾದಿ ಮಾತನಾಡಿ, ರಮೇಶ ಜಾರಕಿಹೊಳಿ ಅವರು ಯಾವುದೇ ಆಮಿಷ ನೀಡುತ್ತಿಲ್ಲ. ಗ್ರಾಮಿಣ ಕ್ಷೇತ್ರದ ಜನರು ಅಭಿಮಾನದಿಂದ ಸೇರುವ ಮೂಲಕ ಅಭಿಮಾನ ಪ್ರದರ್ಶಿಸಿದ್ದಾರೆ. ನಾವು ವಿರೋಧಿಗಳ ಹೆದರಿಕೆಗೆ ಬಗ್ಗುವುದಿಲ್ಲ. ರಮೇಶ ಜಾರಕಿಹೊಳಿ ಹೇಳಿದ್ದನ್ನು ಮಾಡುತ್ತಾರೆ. ಗ್ರಾಮೀಣ ಕ್ಷೇತ್ರದಲ್ಲಿ ಶಾಶ್ವತ ಯೋಜನೆಗಳಿಲ್ಲದೇ ಜನರಜ ರೋಸಿ ಹೋಗಿದ್ದಾರೆ. ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು, ಕೈಗಾರಿಕಾ ಯೋಜನೆಗಳನ್ನು ಮಾಡದೇ ಶಾಸಕರು ಜನರಿಗೆ ಮೋಸ ಮಾಡಿದ್ದಾರೆ. ರಮೇಶ ಜಾರಕಿಹೊಳಿ ಸೂಚಿಸುವ ಅಭ್ಯರ್ಥಿಯನ್ನು ಗೆಲ್ಲಿಸಿ ಕ್ಷೇತ್ರ ಅಭಿವೃದ್ಧಿ ಪಡಿಸೋಣ ಎಂದು ಹೇಳಿದರು.
ಕೋಮಲ ಗಾವಡೆ ಮಾತನಾಡಿ, ರಮೇಶ ಜಾರಕಿಹೊಳಿ ಅವರು ಕಾಂಗ್ರೆಸ್ ಸರ್ಕಾರ ಬೀಳಿಸಿರುವ ತಾಕತ್ತು ಇದ್ದು, ಇವರು ಗ್ರಾಮೀಣ ಕ್ಷೇತ್ರದ ಶಾಸಕರನ್ನು ಸೋಲಿಸುವುದರಲ್ಲಿ ಕಷ್ಟದ ಕೆಲಸ ಅಲ್ಲ. ಈ ಕ್ಷೇತ್ರದ ಶಾಸಕಿ ಅಭಿವೃದ್ಧಿ ಮಾಡದೇ ಕುಕ್ಕರ್, ಮಿಕ್ಸರ್ ಹಂಚುತ್ತಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜನಸಾಮಾನ್ಯನಾಗಿದ್ದು, ಜಯಭೇರಿ ಬಾರಿಸಲಿದ್ದಾರೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಶಂಕರಗೌಡ ಪಾಟೀಲ ಮಾತನಾಡಿ, ಗ್ರಾಮೀಣ ಕ್ಷೇತ್ರದಲ್ಲಿಯ ಪರಿಸ್ಥಿತಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಈಗಿನ ಶಾಸಕರು ಅಭಿವೃದ್ಧಿ ಮಾಡಿರುವುದಾಗಿ ಹೇಳುತ್ತಿದ್ದಾರೆ. ಶಾಶ್ವತ ಯೋಜನೆ ಮಾಡಿದ್ದಾದರು ಏನು.ಕೆರೆ ತುಂಬಿಸುವ ಕೆಲಸ ಶಾಸಕರಕೈಯಿಂದ ಮಾಡಲು ಆಗಿಲ್ಲ. ಆಸ್ಪತ್ರೆ, ಪಶು ಆಸ್ಪತ್ರೆ, ವಸತಿ ನಿಲಯಗಳು ಬಂದಿವೆಯೇ. ಕ್ಷೇತ್ರದ ಜನರಿಗೆ ಗಿಫ್ಟ್ ನೀಡಿ ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಆರೋಪಿಸಿದರು.
ಮುಖಂಡರಾದ ನಾಗೇಶ ಮನ್ನೋಳಕರ, ಬಸವರಾಜ ಚಿಕ್ಕಲದಿನ್ನಿ, ದೇವಣ್ಣ ಬಂಗೇನ್ನವರ, ಕೃಷ್ಣಾ ಅನಗೋಳಕರ, ಶಂಕರಗೌಡ ಪಾಟೀಲ, ನಾನಪ್ಪ ಪಾರ್ವತಿ, ದ್ಯಾಮಣ್ಣ ಮುರಾರಿ, ರಮೇಶ ಸರವದೆ, ನಾಗರಾಜ ಹುಲಿಕವಿ, ಗಜಾನನ ನಾಯಕ, ತೌಸೀಫ ಫಣಿಬಂಧ, ನಾಗರಾಜ ಪಾಟೀಲ, ರಫೀಕ ಗೋಕಾಕ, ರಾಮಾ ಹನ್ನೂರ, ಬಸವಣ್ಣಿ ಬಾಲನಾಯಕ, ಡಾ. ಗುರು ಕೋತಿನ, ವೀರಭದ್ರ ನೇಸರಗಿ, ಕಲ್ಲಪ್ಪ ರಾಮಚನ್ನವರ, ಪ್ರಕಾಶ ದಾನೀಜಿ, ಅಜಿತ್ ಪಾಟೀಲ, ಸುರೇಶ ಕಡಬುಗೋಳ, ಅಶೋಕ ತಳವಾರ, ಅರ್ಜುನ ಮರಗಿ, ಪ್ರಭು ಖವಾಶಿ, ನಾಗೇಂದ್ರ ಧರ್ಮೋಜಿ, ರಂಜನಾ ಅಪ್ಪಯ್ಯಾಚೆ ಸೇರಿದಂತೆ ಅನೇಕರು ಇದ್ದರು.