ಬೆಳಗಾವಿ : ಕನ್ನಡಿಗರು ಸ್ವಾಭಿಮಾನಿಗಳು. ಬೇರೆ ಭಾಷೆಯನ್ನು ದ್ವೇಷಿಸದೇ ಮಾತೃಭಾಷೆ ಮೇಲೆ ಹಿಡಿತ ಹೊಂದಬೇಕು. ವೈವಿಧ್ಯಮಯ ಕನ್ನಡವನ್ನು ಸರ್ವರೂ ಪ್ರೀತಿಸಿ ಸುಂದರ ಕನ್ನಡ ನಾಡನ್ನು ಪುನರ್ ಸೃಷ್ಟಿ ಮಾಡೋಣ ಎಂದು ಬೆಳಗಾವಿ ಜಿಎ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ರವಿ ಪಾಟೀಲ ಹೇಳಿದರು. ಬೆಳಗಾವಿಯ ಕೆಎಲ್ ಇ ಸಂಸ್ಥೆಯ ಜಿಎ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.
ಬೆಳಗಾವಿ ನೆಲದಲ್ಲಿ ಈ ಹಿಂದೆ ಕರ್ನಾಟಕ ರಾಜ್ಯೋತ್ಸವ ಆಚರಿಸುವುದೇ ಅತ್ಯಂತ ಕಷ್ಟವಾಗಿತ್ತು. ಆದರೆ ಇಂದು ಕರ್ನಾಟಕದಲ್ಲಿ ಬೆಳಗಾವಿಯಲ್ಲಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆಯಾಗುತ್ತಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ ಎಂದು ಅವರು ಹೇಳಿದರು.
ಕನ್ನಡಿಗರು ಯಾರನ್ನು ದ್ವೇಷ ಮಾಡುವುದಿಲ್ಲ. ಪ್ರಪಂಚದಲ್ಲೇ ಅತ್ಯಂತ ಶ್ರೇಷ್ಠವಾದ ಸಂಸ್ಕೃತಿ ನಮ್ಮದು. ಜಗತ್ತಿಗೆ ಹಾಗೂ ಮನುಕುಲಕ್ಕೆ ಅಣ್ಣ ಬಸವಣ್ಣನವರನ್ನು ನೀಡಿದ ನಾಡು ನಮ್ಮದು. ಕನ್ನಡ ನಾಡು ಹಾಗೂ ಸಂಸ್ಕೃತಿ ತನ್ನದೇ ಆದ ಹಿರಿಮೆ ಹೊಂದಿದೆ. ಭಾರತದಲ್ಲಿ ಕನ್ನಡ ನಾಡಿನ ಜನತೆ ಉತ್ತಮ ಸಜ್ಜನಿಕೆಗೆ ಹೆಸರಾದವರು. ಆದರೆ, ಕನ್ನಡಿಗರ ತಂಟೆಗೆ ಯಾರಾದರೂ ಬಂದರೆ ನಾವು ಸುಮ್ಮನಿರಲ್ಲ. ಸ್ನೇಹಕ್ಕೂ ಸಿದ್ಧ ಸಮರಕ್ಕೂ ಬದ್ಧ ಎಂಬ ಸಿದ್ದಾಂತ ನಮ್ಮದು ಎಂದು ಅವರು ಕನ್ನಡಿಗರ ಮನೋಧರ್ಮವನ್ನು ವಿಶ್ಲೇಷಣೆ ಮಾಡಿದರು.
ಕನ್ನಡ ಈ ನೆಲದ ಭಾಷೆಯಾಗಿದೆ. ಹೀಗಾಗಿ ಇಲ್ಲಿರುವ ಎಲ್ಲರಿಗೂ ಕನ್ನಡವೇ ಪ್ರಧಾನ ಭಾಷೆ. ನಮ್ಮ ಮನೆಯ ಹೆಬ್ಬಾಗಿಲು ವಿಶಾಲವಾಗಿ ಇರಬೇಕುಮ ಅದರಂತೆ ಕನ್ನಡ ನಾಡಿನ ಹೆಬ್ಬಾಗಿಲಾಗಿರುವ ಬೆಳಗಾವಿಯಲ್ಲಿ ಕನ್ನಡವೇ ಪ್ರಧಾನವಾಗಿ ಆಚರಣೆಯಲ್ಲಿ ಇರಬೇಕಾಗಿರುವುದು ಕರ್ತವ್ಯವಾಗಿದೆ. ಕನ್ನಡಿಗರಿಗೆ ಬಹುದೊಡ್ಡ ಹಾಗೂ ವಿಶಾಲವಾದ ಗುಣ ಇದೆ. ನಾವು ಗುಣ ಸಂಪನ್ನರು ಎಂದು ನಮ್ಮ ಸಂಸ್ಕೃತಿಯಿಂದಲೇ ಅರಿವಾಗುತ್ತದೆ ಎಂದು ಅವರು ಹೇಳಿದರು.
ಮಾನವ ಇಂದು ಚಂದ್ರನ ಮೇಲೆ ಹೋಗಿದ್ದಾನೆ. ಅಲ್ಲಿಯೂ ಕನ್ನಡಿಗರ ಪಾತ್ರ ಇದೆ. ಕನ್ನಡಿಗರು ಎಂದಿಗೂ ತಮ್ಮ ಸ್ವಾಭಿಮಾನವನ್ನು ಬಿಟ್ಟು ಕೊಡಬಾರದು. ಕನ್ನಡ ಬದುಕಿನ ಭಾಷೆ ಆಗಿರಬೇಕು ಎಂದು ಅವರು ಹೇಳಿದರು.
ಪ್ರಾಚಾರ್ಯ ರವಿ ಪಾಟೀಲ ಹಾಗೂ ಮಹಾದೇವ ಬಳಿಗಾರ ಅವರು ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಧ್ವಜಾರೋಹಣ ಮಾಡಿ ಕರ್ನಾಟಕ ರಾಜ್ಯೋತ್ಸವಕ್ಕೆ ಚಾಲನೆ ನೀಡಿದರು.
ಉಪ ಪ್ರಾಚಾರ್ಯ ಚನ್ನಬಸಪ್ಪ ದೇವಋಷಿ , ಆಜೀವ ಸದಸ್ಯ ಮಹಾದೇವ ಬಳಿಗಾರ ಪಾರ್ವತಿ ಚಿಮ್ಮಡ ಹಾಜರಿದ್ದರು. ಕನ್ನಡ ನಾಡಿನ ಅಭಿಮಾನದ ಅನಿಕೆಗಳು ವಿದ್ಯಾರ್ಥಿಗಳು ಶಿಕ್ಷಕರಿಂದ ಮೂಡಿ ಬಂದವು. ಚನ್ನಬಸಪ್ಪ ಪಾಗಾದ , ಸುನಿಲ ಹಲವಾಯಿ ಮಾತನಾಡಿದರು. ಅಲ್ಕಾ ಪಾಟೀಲ ಸ್ವಾಗತಿಸಿದರು. ವಿಶಾಲಾಕ್ಷಿ ಅಂಗಡಿ ನಿರೂಪಿಸಿದರು. ಸಂದೀಪ ದೇಸಾಯಿ ವಂದಿಸಿದರು.