ಬೆಂಗಳೂರು : ಪ್ರಜಾತಾಂತ್ರಿಕವಾಗಿ ಚುನಾಯಿತವಾದ ಸರ್ಕಾರಗಳನ್ನು ಅಪ್ರಜಾತಾಂತ್ರಿಕ ಮಾರ್ಗದಲ್ಲಿ ಅಸ್ಥಿರಗೊಳಿಸುವ ಕೇಂದ್ರ ಸರ್ಕಾರ ಮತ್ತು ರಾಜಭವನದ ಷಡ್ಯಂತ್ರಗಳನ್ನು ವಿರೋಧಿಸಿ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಹಾಗೂ ಜನಾರ್ದನ ರೆಡ್ಡಿ ಅವರ ವಿರುದ್ಧ ತನಿಖೆಗೆ, ಕ್ರಮಕ್ಕೆ ಅನುಮತಿ ನೀಡದ ರಾಜ್ಯಪಾಲರ ತಾರತಮ್ಯ ನೀತಿಯನ್ನು ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ, ನಂತರ ಅಲ್ಲಿಂದ ರಾಜಭವನ ಚಲೋ ಪ್ರತಿಭಟನಾ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಸಚಿವರಾದ ಜಿ.ಪರಮೇಶ್ವರ್, ರಾಮಲಿಂಗಾ ರೆಡ್ಡಿ, ಡಿ.ಸುಧಾಕರ್, ಹೆಚ್.ಕೆ. ಪಾಟೀಲ್, ಬೋಸರಾಜು, ಶರಣಪ್ರಕಾಶ್ ಪಾಟೀಲ್, ಜಮೀರ್ ಅಹ್ಮದ್, ಈಶ್ವರ್ ಖಂಡ್ರೆ, ವೆಂಕಟೇಶ್, ಎಸ್.ಎಸ್ ಮಲ್ಲಿಕಾರ್ಜುನ್ ದಿನೇಶ್ ಗುಂಡೂರಾವ್, ಶಾಸಕರಾದ ಶಿವಲಿಂಗೇಗೌಡ, ಪ್ರದೀಪ್ ಈಶ್ವರ್, ನಯನ ಮೋಟಮ್ಮ, ಕಂಪ್ಲಿ ಗಣೇಶ್, ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಯು. ಬಿ ವೆಂಕಟೇಶ್, ಸುಧಾಮ್ ದಾಸ್, ಐವಾನ್ ಡಿಸೋಜ, ಸಂಸದರಾದ ಶ್ರೇಯಸ್ ಪಟೇಲ್, ಹಿರಿಯ ಮುಖಂಡರಾದ ವೀರಪ್ಪ ಮೊಯ್ಲಿ, ಎಂ.ಆರ್ ಸೀತಾರಾಮ್, ವಿ.ಎಸ್ ಉಗ್ರಪ್ಪ, ಆರ್.ವಿ ದೇಶಪಾಂಡೆ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
*ರಾಜ್ಯಪಾಲರ ಕಚೇರಿ ರಾಜಕೀಯ ಪಕ್ಷದ ಕಚೇರಿ ಆಗಬಾರದು: ಡಿಸಿಎಂ ಡಿ.ಕೆ. ಶಿವಕುಮಾರ್*
*ಬೆಂಗಳೂರು, ಆ.31:*
“ರಾಜ್ಯಪಾಲರ ಹುದ್ದೆ ಸಾಂವಿಧಾನ ನೀಡಿರುವ ಪೀಠ. ರಾಜ್ಯಪಾಲರ ಕಚೇರಿ ಒಂದು ರಾಜಕೀಯ ಪಕ್ಷದ ಕಚೇರಿ ಆಗಬಾರದು. ಸಂವಿಧಾನಿಕವಾಗಿ ಈ ಹುದ್ದೆಗೆ ಇರುವ ಘನತೆದೆ ಧಕ್ಕೆ ಬರುವಂತೆ ನಡೆದುಕೊಳ್ಳಬಾರದು ಎಂಬುದು ನಮ್ಮ ಅಭಿಲಾಷೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ರಾಜ್ಯಪಾಲರ ಪಕ್ಷಪಾತ ಧೋರಣೆ ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಶನಿವಾರ ರಾಜಭವನ ಚಲೋ ಪ್ರತಿಭಟನೆ ಹಮ್ಮಿಕೊಂಡಿತ್ತು. ಮೊದಲು ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿ ರಾಜ್ಯಾಪಾಲರ ವಿರುದ್ಧ ಘೋಷಣೆ ಕೂಗಿದರು.
ನಂತರ ಕಾಲ್ನಡಿಗೆ ಮೂಲಕ ರಾಜಭವನಕ್ಕೆ ತೆರಳಿದ ಕಾಂಗ್ರೆಸ್ ಪಕ್ಷದ ನಿಯೋಗವು ಲೋಕಾಯುಕ್ತ ಎಸ್ ಐಟಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ಮತ್ತು ಜನಾರ್ಧನ ರೆಡ್ಡಿ ಅವರ ವಿಚಾರಣೆಗೆ ಅನುಮತಿ ನೀಡಿ ಎಂದು ಸಲ್ಲಿಸಿರುವ ಮನವಿಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.
ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು “ರಾಜ್ಯಪಾಲರು ನಮಗೆ ಟೀ, ಕಾಫಿ ಮತ್ತು ಉಪಹಾರವನ್ನು ಕೊಟ್ಟು ಉಪಚರಿಸಿದರು. ಎಲ್ಲದಕ್ಕಿಂತ ಮುಖ್ಯವಾಗಿ ನಿಮಗೆ ನ್ಯಾಯ ನೀಡುತ್ತೇವೆ ಎಂದು ಭರವಸೆ ನೀಡಿದರು” ಎಂದು ತಿಳಿಸಿದರು.
“ಲೋಕಾಯುಕ್ತ ಎಸ್ ಐಟಿ ಅವರು ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರಮಂತ್ರಿ ಕುಮಾರಸ್ವಾಮಿ ಹಾಗೂ ಮೂರು ಜನ ಮಾಜಿ ಮಂತ್ರಿಗಳ ಅಕ್ರಮಗಳ ವಿರುದ್ಧ ನ್ಯಾಯಾಲಯದ ಸೂಚನೆಯಂತೆ ಸಂಪೂರ್ಣ ತನಿಖೆ ನಡೆಸಿ ವರದಿ ನೀಡಿದ್ದಾರೆ. ಆದರೂ ಏನೂ ಕ್ರಮ ತೆಗೆದುಕೊಂಡಿಲ್ಲ. ನಮ್ಮ ಮುಖ್ಯಮಂತ್ರಿಗಳ ಮೇಲೆ ಕ್ರಮ ಕೈಗೊಳ್ಳಲು ಮುಂದಾಗುವ ರಾಜ್ಯಪಾಲರು, ಅವರ ಮೇಲೆ ಏಕೆ ಕ್ರಮ ತೆಗೆದುಕೊಂಡಿಲ್ಲ. ನೀವು ತಾರತಮ್ಯ ಎಸಗಿ ನಮ್ಮ ವಿರುದ್ಧ ಕೆಲಸ ಮಾಡಿದ್ದಾರಲ್ಲವೇ” ಎಂದು ಹೇಳಿದರು.
“ನಾಲ್ಕು ಜನರ ವಿರುದ್ಧ ಭ್ರಷ್ಟಾಚಾರ ವಿರೋಧಿ ಕಾಯ್ದೆ, 197 ಸಿಪಿಸಿ ಕಾಯ್ದೆಯಡಿ ಸೆಕ್ಷನ್ 17 ಎ ಪ್ರಕಾರ ಲೋಕಾಯುಕ್ತವು ಅನುಮತಿ ಕೇಳಿತ್ತು. ಆದರೂ ರಾಜ್ಯಪಾಲರು ಕ್ರಮ ತೆಗೆದುಕೊಳ್ಳಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಯಾರೋ ಅರ್ಜಿ ಕೊಟ್ಟರು ಎಂದು ಒಂದೇ ದಿನದಲ್ಲಿ ತೀರ್ಮಾನ ತೆಗೆದುಕೊಂಡರು. ಆದರೆ ಮಾಜಿ ಮುಖ್ಯಮಂತ್ರಿಗಳ, ಮಂತ್ರಿಗಳ ವಿಚಾರದಲ್ಲಿ ಲೋಕಾಯುಕ್ತ ಈ ಹಿಂದೆ ಮನವಿ ಮಾಡಿದಾಗ ಎಂಟತ್ತು ದಿನಗಳಲ್ಲಿ ತನಿಖೆಗೆ ಅನುಮತಿ ನೀಡುವ ತೀರ್ಮಾನ ಮಾಡಬಹುದಿತ್ತು. ಆದರೂ ಪಕ್ಷಪಾತ ಮಾಡಿದ್ದಾರೆ. ಮುಖ್ಯಮಂತ್ರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳ ಬೇಡಿ ಎಂದು ಸಚಿವ ಸಂಪುಟ ಮನವಿ ಮಾಡಿದ್ದರು. ರಾಜ್ಯಪಾಲರು ಮಾನ್ಯ ಮಾಡಲಿಲ್ಲ” ಎಂದು ಹೇಳಿದರು.
“ಸಾರ್ವಜನಿಕ ಜೀವನದಲ್ಲಿರುವ ರಾಜ್ಯಪಾಲರು ಎಚ್ಚರಿಕೆಯನ್ನು ಇಟ್ಟುಕೊಂಡು ಕೆಲಸ ಮಾಡಬೇಕಿತ್ತು. ಅವರು ಸಂವಿಧಾನದ ಪ್ರತಿನಿಧಿಯಾಗಿ ಕೆಲಸ ಮಾಡಬೇಕಿತ್ತೇ ಹೊರತು ಪಕ್ಷದ ಪ್ರತಿನಿಧಿಯಾಗಿ ಕೆಲಸ ಮಾಡಬಾರದಿತ್ತು. ಸಂವಿಧಾನಿಕ ಹುದ್ದೆಯನ್ನು ಸಂವಿಧಾನದ ರಕ್ಷಣೆಗೆ ಬಳಸಿಕೊಳ್ಳಬೇಕು ಎಂಬುದು ಸಾಮಾನ್ಯ ಜನರ ಅಭಿಪ್ರಾಯ” ಎಂದರು.
“ಮುಖ್ಯಮಂತ್ರಿಗಳ ವಿರುದ್ಧ ಯಾವುದೇ ಪೂರಕ ದಾಖಲೆಗಳಿಲ್ಲ. ಕುಮಾರಸ್ವಾಮಿ ಅವರು ಸೇರಿದಂತೆ ಮೂರು ಜನ ಮಂತ್ರಿಗಳ ವಿರುದ್ಧ ದಾಖಲೆ ಇದ್ದರೂ ರಾಜ್ಯಪಾಲರು ಪಕ್ಷಪಾತ ಏಕೆ ಮಾಡಿದರು. ರಾಜ್ಯಪಾಲರ ಕಚೇರಿ ಸಮಾನತೆ ಹೆಸರಾಗಿರಬೇಕು. ಸಾಂವಿಧಾನಿಕ ಪೀಠಕ್ಕೆ ಇರುವ ಗೌರವ ಉಳಿಯಬೇಕು. ಎಂದು ನಾವು ರಾಜಭವನ ಚಲೋ ಮಾಡಿದ್ದೇವೆ. ನ್ಯಾಯದ ಪರವಾಗಿ ಧ್ವನಿ ಎತ್ತಲು ನಾವು ಮುಂದಾಗಿದ್ದೇವೆ.” ಎಂದು ಹೇಳಿದರು.
“ನಾವ್ಯಾರು ಇಲ್ಲಿ ಶಾಶ್ವತವಲ್ಲ. ರಾಜ್ಯಪಾಲರ ಭವನ ರಾಜಕೀಯ ಕಚೇರಿ ಆಗಬಾರದು ಎಂಬುದಷ್ಟೇ ನಮ್ಮ ಕಾಳಜಿ. ರಾಜ್ಯಪಾಲರ ಸ್ಥಾನ ನ್ಯಾಯಯುತವಾದ ಪೀಠ. ಸರ್ಕಾರವನ್ನು ರಚನೆ ಮಾಡುವ ಪೀಠ. ನ್ಯಾಯಾಲಯದ ಸ್ಥಾನಮಾನ ಹೊಂದಿರುವ ಪೀಠ. ರಾಜ್ಯಪಾಲರ ಕಚೇರಿ ಬಳಸಿಕೊಂಡು, ಬಹುಮತದಿಂದ ಆಯ್ಕೆಯಾದ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಹುನ್ನಾರ ಮಾಡಲಾಗುತ್ತಿದೆ. ಕರ್ನಾಟಕ ತಾನು ಬೆಳೆದು ಅನೇಕ ರಾಜ್ಯಗಳ ಬೆಳವಣಿಗೆಗೂ ಸಹಾಯ ಮಾಡುತ್ತಿದೆ. ಇಂತಹ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ರಾಜ್ಯಪಾಲರ ಕಚೇರಿಯಿಂದ ಆಗಬಾರದು ಎಂಬುದಷ್ಟೇ ನಮ್ಮ ಕಾಳಜಿ” ಎಂದರು.
“ನಾಲ್ಕು ಜನರ ವಿರುದ್ಧ ವಿಚಾರಣೆಗೆ ಅನುಮತಿ ನೀಡಬೇಕು. ರಾಜ್ಯಪಾಲರ ಕಚೇರಿ ಘನತೆಯನ್ನು ಉಳಿಸಿಕೊಳ್ಳಬೇಕು. ಕಾನೂನನ್ನು ಉಳಿಸಬೇಕು, ರಾಜ್ಯಪಾಲರ ಹುದ್ದೆಗೆ ಇರುವ ಘನತೆ, ಗೌರವವನ್ನು ಉಳಿಸಬೇಕು. ಪಕ್ಷಪಾತ ಧೋರಣೆ ಮಾಡದೆ ಕೆಲಸ ಮಾಡಬೇಕು ಎಂದು ಮನದಟ್ಟು ಮಾಡಿದ್ದೇವೆ. ಹಾಗೂ ನನ್ನ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯ ನಿರ್ಧಾರಗಳನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದ್ದೇವೆ” ಎಂದರು.
“ನನ್ನ ಬಳಿ ಯಾವುದೇ ಪ್ರಕರಣಗಳ ಬಾಕಿ ಇಲ್ಲ ಎಂದು ರಾಜ್ಯಪಾಲರು ತಿಳಿಸಿದ್ದಾರೆ. ರಾಜ್ಯಪಾಲರು ಏಕೆ ಹೀಗೆ ಹೇಳುತ್ತಿದ್ದಾರೆ ಎಂದು ಮತ್ತೊಮ್ಮೆ ಪರಿಶೀಲನೆ ಮಾಡಲಾಗುವುದು. ಇದು ನಿಜವೋ ಸುಳ್ಳೋ ಕಳಿಸಿರುವುದು ನಿಜವೋ, ಸುಳ್ಳು ಎಂದು ಪರಿಶೀಲಿಸಲಾಗುವುದು. ಅಥವಾ ಒಂದಷ್ಟು ವಿಚಾರದಲ್ಲಿ ಅವರು ಸ್ಪಷ್ಟನೆ ಕೇಳಿರಬಹುದು ಇದನ್ನು ಸಹ ನಾವು ಪರಿಶೀಲಿಸುತ್ತೇವೆ” ಎಂದು ತಿಳಿಸಿದರು.
“ಸಿದ್ದರಾಮಯ್ಯ ಅವರ ಕೇಸಿನ ವಿಚಾರದಲ್ಲಿ ನಾವು ರಾಜಭವನ ಚಲೋ ಹಮ್ಮಿಕೊಂಡಿಲ್ಲ. ಈ ಪ್ರಕರಣ ನ್ಯಾಯಾಲಯದಲ್ಲಿ ಇದ್ದು. ಅಲ್ಲಿ ನಮ್ಮ ಹೋರಾಟವನ್ನು ಮಾಡುತ್ತಾ ಇದ್ದೀವೆ. ಅಲ್ಲಿ ತೀರ್ಮಾನವಾದ ನಂತರ ಪ್ರತಿಕ್ರಿಯೆ ನೀಡುತ್ತೇವೆ” ಎಂದರು.
*ಪ್ರಾಸಿಕ್ಯೂಷನ್ ಗೆ ಅನುಮತಿ ನೀಡದೆ ಬೇರೆ ದಾರಿ ಇಲ್ಲ*
ರಾಜ್ಯಪಾಲರ ಸ್ಪಂದನೆಯಿಂದ ನ್ಯಾಯ ದೊರೆಯುತ್ತದೆ ಎನ್ನುವ ಭರವಸೆ ಮೂಡಿದೆಯೇ ಎಂದು ಕೇಳಿದಾಗ “ನಾವು ನಮ್ಮ ಕರ್ತವ್ಯವನ್ನು ಮಾಡಿದ್ದೇವೆ. ನಾವು ರಾಜ್ಯದ ಜನತೆಯ ಹಿತಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ರಾಜ್ಯಪಾಲರ ಬಳಿ ಪರ್ಯಾಯ ದಾರಿಗಳಿಲ್ಲ. ಅವರು ನಾಲ್ವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲೇಬೇಕು” ಎಂದರು.
ಅರ್ಜಿಗಳು ಇತ್ಯರ್ಥ ಆಗಿದ್ದಾವೆ ಎಂದು ರಾಜ್ಯಪಾಲರು ನಿಮಗೆ ತಿಳಿಸಿದ್ದಾರೆಯೇ ಎಂದಾಗ “ಒಳಗಿನ ವಿಚಾರವನ್ನು ನಾನು ನಿಮ್ಮ ಬಳಿ ಚರ್ಚೆ ಮಾಡುವುದಿಲ್ಲ. ಅವರು ನನ್ನ ಬಳಿ ಯಾವುದೇ ಅರ್ಜಿಗಳಿಲ್ಲ ಎಂದು ಹೇಳಿದ್ದಾರೆ ಅದನ್ನು ನಾವು ಪರಿಶೀಲಿಸುತ್ತೇವೆ” ಎಂದರು.