ಜನಜೀವಾಳ ಜಾಲ: ಬೆಳಗಾವಿ : ಬೆಂಗಳೂರಿನಿಂದ ಹುಬ್ಬಳ್ಳಿವರೆಗೆ ಸಂಚರಿಸುತ್ತಿದ್ದ ಅತಿ ವೇಗವಾಗಿ ಸಂಚರಿಸುವ ವಂದೇ ಭಾರತ್ ರೈಲು ವರ್ಷದ ಹಿಂದೆ ಬೆಳಗಾವಿವರೆಗೂ ಬರುತ್ತಿತ್ತು. ಆದರೆ, ತಾಂತ್ರಿಕ ಕಾರಣದಿಂದ ಬೆಳಗಾವಿಗೆ ಬರುವುದನ್ನು ನಿಲ್ಲಿಸಿ ಕೇವಲ ಧಾರವಾಡಕ್ಕೆ ಸೀಮಿತಗೊಳಿಸಲಾಗಿದೆ. ಆದರೆ, ಇದೀಗ ಹೊಸದಾಗಿ ಪುಣೆಯಿಂದ ಬೆಳಗಾವಿ ಮೂಲಕ ಹುಬ್ಬಳ್ಳಿವರೆಗೂ ವಂದೇ ಭಾರತ್ ರೈಲು ಸಂಚರಿಸಲಿದೆ. ಇದು ಬೆಳಗಾವಿ ಜನತೆಯಲ್ಲಿ ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಪುಣೆಯಿಂದ ಬೆಳಗಾವಿ ಮೂಲಕವಾಗಿಯೇ ಹುಬ್ಬಳ್ಳಿ- ಧಾರವಾಡಕ್ಕೆ ವಂದೇ ಭಾರತ್ ರೈಲು ಸಂಚಾರ ಸಾಧ್ಯವಾಗುತ್ತಿದ್ದರೆ, ಬೆಂಗಳೂರಿನಿಂದ ಹುಬ್ಬಳ್ಳಿ- ಧಾರವಾಡ ಮೂಲಕ ಬೆಳಗಾವಿವರೆಗೂ ವಂದೇ ಭಾರತ್ ಸಂಚಾರ ಏಕೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಯಾವ ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ ಎಂದು ಜನ ಸಾಮಾಜಿಕ ಜಾಲತಾಣದಲ್ಲಿ ಇದೀಗ ರೈಲ್ವೆ ಸಚಿವಾಲಯಕ್ಕೆ ಮೇಲಿಂದ ಮೇಲೆ ಪ್ರಶ್ನೆಗಳನ್ನು ಹಾಕುತ್ತಿದ್ದಾರೆ.
ವಂದೇ ಭಾರತ್ ಕೆಲ ತಿಂಗಳ ಹಿಂದೆ ಬೆಂಗಳೂರಿನಿಂದ ಬೆಳಗಾವಿವರೆಗೂ ಸಂಚರಿಸುತ್ತಿತ್ತು. ಆದರೆ, ಅದನ್ನು ತಾಂತ್ರಿಕ ಕಾರಣವೊಡ್ಡಿ ನಿಲ್ಲಿಸಲಾಗಿದೆ. ಇದರ ಹಿಂದೆ ಹುಬ್ಬಳ್ಳಿ-ಧಾರವಾಡದ ರಾಜಕಾರಣಿಗಳ ನೇರ ಕೈವಾಡ ಇದೆ ಎಂದು ಆಗ ಬೆಳಗಾವಿ ಜನತೆ ಗಂಭೀರ ಆರೋಪ ಮಾಡಿದ್ದರು. ಇದು ಈಗ ನಿಜವಾದಂತಿದೆ.
ಈ ನಿಟ್ಟಿನಲ್ಲಿ ಈಗ ಆಗಿರುವ ಲೋಪವನ್ನು ಸರಿಪಡಿಸುವ ದೆಸೆಯಲ್ಲಿ ಬೆಳಗಾವಿಯ ಸಂಸದ ಜಗದೀಶ ಶೆಟ್ಟರ್ ದಿಟ್ಟ ಹೆಜ್ಜೆ ಇಡುವರೋ ಕಾದುನೋಡಬೇಕಾಗಿದೆ. ಪುಣೆಯಿಂದ ಹುಬ್ಬಳ್ಳಿವರೆಗೆ ವಂದೇ ಭಾರತ್ ರೈಲು ಸಂಚರಿಸಲು ಯಾವುದೇ ಅಡ್ಡಿ- ಆತಂಕ ಇಲ್ಲವಾಗಿದ್ದರೆ, ಅದೇ ರೈಲ್ವೆ ಮಾರ್ಗದಲ್ಲಿ ಬರುವ ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲನ್ನು ಮತ್ತೆ ಪುನರ್ ಆರಂಭಿಸಲು ಜಗದೀಶ ಶೆಟ್ಟರ್ ಆಸಕ್ತಿ ವಹಿಸಿ ಬೆಳಗಾವಿ ಜನತೆಯ ಋಣ ತೀರಿಸಲು ಮುಂದಾಗಲಿ ಎನ್ನುವುದು ಗಡಿನಾಡ ಜನತೆಯ ಆಗ್ರಹವಾಗಿದೆ.