ರಾಹುಲ್ ಘರ್ಜನೆಗೆ ಬೆಪ್ಪಾದ ಬಿಜೆಪಿ
ಜನ ಜೀವಾಳ ಜಾಲ: ನವದಿಲ್ಲಿ/ಬೆಂಗಳೂರು: ಭಾರತ್ ಜೋಡೊ ಯಾತ್ರೆಯ ನಂತರ ಮೈಕೊಡವಿ ಎದ್ದ ರಾಹುಲ್, ಕೇಂದ್ರ ಸರಕಾರದ ಮೇಲೆ ಗದಾಪ್ರಹಾರ ಮಾಡಿದ್ದಾರೆ. ಸಂಸತ್ ಅಧಿವೇಶನದಲ್ಲಿ ಸಮರ್ಥ ಪ್ರತಿರೋಧ ತೋರಿರುವ ರಾಹುಲ್ ಗಾಂಧಿ ಅವರ ನಡೆ ದೇಶಾದ್ಯಂತ ಬೆಂಬಲ ಗಿಟ್ಟಿಸಿಕೊಂಡಿದೆ.
ಕಳೆದ 9 ವರ್ಷಗಳಿಂದ ಕಾಂಗ್ರೆಸ್ ಸಹಿತ ವಿಪಕ್ಷಗಳು ಸಂಸತ್ತಿನಲ್ಲಿ ಸಮರ್ಥ ಪ್ರತಿರೋಧದ ದನಿ ಕಳೆದುಕೊಂಡಿದ್ದರಿಂದ ಬಿಜೆಪಿಯ ಏಕಪಕ್ಷೀಯ ಆಡಳಿತ ದೇಶದಲ್ಲಿ ಗಮನ ಸೆಳೆದಿತ್ತು.
ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸದನದಲ್ಲಿ ರಾಹುಲ್ ಗಾಂಧಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು, ಬಿಜೆಪಿ ಪಕ್ಷವನ್ನು ಬೆಪ್ಪಾಗುವಂತೆ ಮಾಡಿದೆ.
ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರದ ನ್ಯೂನ್ಯತೆಗಳನ್ನು ಎಳೆಎಳೆಯಾಗಿ ಬಿಚ್ಚಿದ ರಾಹುಲ್, ವ್ಯಂಗ್ಯ ಧಾಟಿಯಲ್ಲಿ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದು ಜನಮೆಚ್ಚುಗೆಗೆ ಕಾರಣವಾಗಿದೆ. ಭಾರತ್ ಜೋಡೊ ಯಾತ್ರೆ ಮತ್ತು ಸಂಸತ್ತಿಲ್ಲಿ ರಾಹುಲ್ ಸಮರ್ಥ ವಾಕ್ಚಾತುರ್ಯ ಧಾಟಿ ಈಗ ರಾಜಕೀಯ ಚಿತ್ರಣವನ್ನೇ ಬದಲಿಸಿದ್ದು, ಒಮ್ಮೆಲೆ ಕಾಂಗ್ರೆಸ್ ನತ್ತ ಜನರ ಒಲವು ತಿರುಗಿದೆ.
ಮೋದಿ-ಅದಾನಿ ಇಬ್ಬರ ನಡುವಿನ ಸನಿಹದ ಒಡನಾಟ ಮತ್ತು ವ್ಯಾಪಾರ ವಹಿವಾಟುಗಳ ಬಗ್ಗೆ ರಾಹುಲ್ ಗಾಂಧಿ ತೆರೆದಿಟ್ಟ ಚಿತ್ರಣ ದೇಶವಾಸಿಗಳ ಗಮನ ಸೆಳೆದಿದೆ.
ಪ್ರಧಾನಿ ಮೋದಿ ಮತ್ತು ರಾಹುಲ್ ಇಬ್ಬರ ಆಂಗಿಕ ಭಾಷೆಯಲ್ಲಿಯೂ ಸಾಕಷ್ಟು ಬದಲಾವಣೆ ಆಗಿರುವುದು ಕಂಡುಬಂದಿದೆ.
ಆತ್ಮವಿಶ್ವಾಸ, ಗಟ್ಟಿತನ ಮತ್ತು ವಾಕ್ಚಾತುರ್ಯತೆ ರಾಹುಲ್ ನಡೆಯಲ್ಲಿ ಕಂಡುಬಂದರೆ, ಮೋದಿ ಸಮರ್ಥನೆಯಿಲ್ಲದೇ ಆಂಗಿಕವಾಗಿ ಕುಸಿದಿರುವುದು ಗಮನಾರ್ಹ. ಕಳೆದ 9 ವರ್ಷಗಳ ಜನಪ್ರಿಯತೆ ಪ್ರಧಾನಿ ಮೋದಿ ಹಾಗೆಯೇ ಉಳಿಸಿಕೊಂಡಿದ್ದಾರೆ ಎನ್ನುವಂತಿಲ್ಲ. ರಾಜಕೀಯ ಪಕ್ಷಗಳು ಮತ್ತು ಜನರ ಗೇಲಿ ಮಾತುಗಳಿಗೆ ಬಲಿಯಾಗುತ್ತಿದ್ದ ರಾಹುಲ್ ಈಗ ಮೊದಲಿನಂತೆ ಇಲ್ಲ. ಜನತೆ ರಾಹುಲ್ ಬಗ್ಗೆ ಅಪಾರ ಗೌರವಾದರದ & ನಂಬಿಕೆ ಬೆಳೆಸಿಕೊಂಡಿದ್ದಾರೆ.