ಜನ ಜೀವಾಳ ಜಾಲ: ಬೆಳಗಾವಿ : ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಮೂರು ವರ್ಷಗಳ ಅವಧಿ ಇದೆ. ಆದರೆ, ಕೆಲವು ರಾಜಕೀಯ ಬೆಳವಣಿಗೆಗಳು ಆರಂಭವಾಗಿದ್ದು ಈಗಲೇ ಕೆಲ ಕ್ಷೇತ್ರಗಳ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಕಾಂಗ್ರೆಸ್ ಯುವನಾಯಕ ರಾಹುಲ್ ಜಾರಕಿಹೊಳಿ ಅವರು ಇದೀಗ ರಾಜ್ಯ ಯುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಲೇ ಅವರ ಮುಂದಿನ ಭವಿಷ್ಯದ ಬಗ್ಗೆ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗಳು ಆರಂಭವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅವರು ಹುಕ್ಕೇರಿ ವಿಧಾನಸಭಾ ಚುನಾವಣೆಯಿಂದ ಕಣಕ್ಕಿಳಿಯಬಹುದು ಎಂಬ ಚರ್ಚೆ ಶುರುವಾಗಿದೆ.
ತಂದೆ ಸತೀಶ ಜಾರಕಿಹೊಳಿ ಅವರು ಯಮಕನಮರಡಿ ವಿಧಾನಸಭಾ ಮತಕ್ಷೇತ್ರ, ಸಹೋದರಿ ಪ್ರಿಯಾಂಕಾ ಜಾರಕಿಹೊಳಿ ಅವರು ಚಿಕ್ಕೋಡಿ ಲೋಕಸಭೆಯಿಂದ ಈಗಾಗಲೇ ಆಯ್ಕೆಯಾಗಿದ್ದಾರೆ. ಆದರೆ, ಹುಕ್ಕೇರಿ ಮತಕ್ಷೇತ್ರದಲ್ಲಿ ಕತ್ತಿ ಕುಟುಂಬ ಮೊದಲಿನಿಂದಲೂ ಪ್ರಾಬಲ್ಯ ಸಾಧಿಸಿದೆ. ಇಲ್ಲಿ ಕಾಂಗ್ರೆಸ್ ಪಕ್ಷ ಬಲಹೀನಗೊಂಡಿದ್ದು ನಿರಂತರವಾಗಿ ಸೋಲು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ರಾಹುಲ್ ಜಾರಕಿಹೊಳಿ ಅವರನ್ನು ಸಜ್ಜುಗೊಳಿಸಲಾಗುತ್ತಿದೆಯೇ ಎಂಬ ಚರ್ಚೆಗಳು ಈಗಾಗಲೇ ಆರಂಭಗೊಂಡಿರುವುದಂತೂ ನಿಜ.