ನವದೆಹಲಿ: ಉದಯೋನ್ಮುಖ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ನಿರ್ಭೀತ ಆಟ ಮತ್ತು ಸಾಮರ್ಥ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿರುವ ರಾಜಸ್ಥಾನ ರಾಯಲ್ಸ್ ತಂಡದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರು, ಈ ಪ್ರತಿಭಾನ್ವಿತ ಆಟಗಾರ ಪ್ರಚಾರದ ಗುಂಗಿನಲ್ಲಿ ಮೈಮರೆಯದಂತೆ ಎಚ್ಚರಿಕೆ ವಹಿಸಬೇಕೆಂದು ಕಿವಿಮಾತನ್ನೂ ಹೇಳಿದ್ದಾರೆ.
ಬುಧವಾರ ಸ್ಟಾರ್ ಸ್ಪೋರ್ಟ್ಸ್ ಹಮ್ಮಿಕೊಂಡ ಆನ್ಲೈನ್ ಸಂವಾದದಲ್ಲಿ ಭಾರತದ ತಂಡದ ದಿಗ್ಗಜ ಬ್ಯಾಟರ್ಗೆ
ಸೂರ್ಯವಂಶಿ ಕುರಿತಾದ ಪ್ರಶ್ನೆಗಳೇ ಹರಿದುಬಂದವು.
‘ಇನ್ನು ಮುಂದೆ ಕ್ರಿಕೆಟ್ ಜಗವು ಪ್ರತಿಭಾನ್ವಿತ ಆಟಗಾರನ ಬೆನ್ನುಬೀಳಲಿದ್ದು ಅವನಷ್ಟಕ್ಕೆ ಇರಲು ಬಿಡುವುದಿಲ್ಲ. ದಿನಬೆಳಗಾಗುವುದರೊಳಗೆ ದೊರಕಿದ ಈ ತಾರಾ ಪಟ್ಟವನ್ನು ನಿರ್ವಹಿಸಲು ಬಿಹಾರದ ಹದಿಹರೆಯದ ಆಟಗಾರ ದಾರಿಕಂಡುಕೊಳ್ಳಬೇಕು’ ಎಂದು ಹೇಳಿದರು.
‘ಜನರು ಅವನ ಬಗ್ಗೆ ಮಾತನಾಡುವುದನ್ನು ನಮಗೆ ನಿಯಂತ್ರಿಸಲಾಗದು. ನಾನು ಈ ಸಂವಾದಕ್ಕೆ ಬಂದರೆ ಇಲ್ಲೂ ವೈಭವ್ ಬಗ್ಗೆಯೇ ಪ್ರಶ್ನೆಗಳು ಎದುರಾಗುತ್ತಿವೆ’ ಎಂದರು.
‘ಇನ್ನು ಮುಂದೆ ವೈಭವ್ಗೆ ಸವಾಲುಗಳು ಎದುರಾಗಲಿವೆ. ಅದೇ ವೇಳೆ ಮುಂದೆ ಹೇಗೆ ಆಡುತ್ತಾನೆಂಬ ಕುತೂಹಲವೂ ಇರಲಿದೆ. ಆದರೆ ಹೊಗಳಿಕೆಯ ಸುರಿಮಳೆಯೊಡನೆ ಪ್ರಚಾರದಲ್ಲಿ ಕಳೆದುಹೋಗುವಂತೆ ಆಗಬಾರದು’ ಎಂದು ಎಚ್ಚರಿಕೆಯ ಧಾಟಿಯಲ್ಲಿ ಹೇಳಿದರು.
19 ವರ್ಷದೊಳಗಿನವರ ತಂಡದ ಕೋಚ್ ಆಗಿದ್ದ ದ್ರಾವಿಡ್ ಅವರು ರಿಷಭ್ ಪಂತ್, ಶುಭಮನ್ ಗಿಲ್, ಪೃಥ್ವಿ ಶಾ, ಯಶಸ್ವಿ ಜೈಸ್ವಾಲ್ ಅಂಥ ಅನೇಕ ಪ್ರತಿಭಾನ್ವಿತ ಆಟಗಾರರನ್ನು ಬೆಳೆಸಿದವರು.
ಸೂರ್ಯವಂಶಿ ಅವರಲ್ಲಿ ಕಂಡುಕೊಂಡ ವಿಶೇಷ ಪ್ರತಿಭೆಯ ಬಗ್ಗೆ ಕೇಳಿದ ಪ್ರಶ್ನೆಗೆ ದ್ರಾವಿಡ್ ಅವರು, ‘ಅವನ ನಿರ್ಭೀತ ಆಟ ಮತ್ತು ಸಂದರ್ಭವು ತನ್ನ ಆಟದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳುವ ರೀತಿ ಗಮನ ಸೆಳೆಯಿತು. ಅವನು ಪ್ರದರ್ಶಿಸಿದ ವೈವಿಧ್ಯಮಯ ಹೊಡೆತಗಳನ್ನು ಗಮನಿಸಿದರೆ ಇಷ್ಟೊಂದು ಎಳೆ ವಯಸ್ಸಿನಲ್ಲಿ ಈ ಸಾಮರ್ಥ್ಯದ ಆಟಗಾರ ನೋಡಲು ಸಿಗುವುದಿಲ್ಲ’ ಎಂದು ವಿಶ್ಲೇಷಿಸಿದರು.
‘ಅವನು ಇನ್ನಷ್ಟು ಉತ್ತಮ ಆಟಗಾರನಾಗುತ್ತಾನೆ. ಅವನು ಈಗಾಗಲೇ ಪೂರ್ಣಪ್ರಮಾಣದ ಆಟಗಾರನಾಗಿದ್ದಾನೆಂದು ಹೇಳಲಾಗದು. ಅವನನ್ನು ಈಗಾಗಲೇ ಇನ್ನೊಬ್ಬರ ಜೊತೆ ಹೋಲಿಸಬಾರದು. ಎದುರಾಳಿ ತಂಡಗಳು ಅವನಿಗೆ ಬೌಲಿಂಗ್ ಮಾಡುವಾಗ ಜಾಣೆ ವಹಿಸಬಹುದು. ಟಿ20 ಮಾದರಿಯಲ್ಲಿಬ ಇಂಥ ಆಟ ಕೆಲಸಕ್ಕೆ ಬರದೇ ಇರುವ ಸಂದರ್ಭ ಎದುರಾಗಬಹುದು’ ಎಂದೂ ದ್ರಾವಿಡ್ ಹೇಳಿದರು.
ಸೋಮವಾರ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ನ ಅನುಭವಿ ಬೌಲರ್ಗಳ ದಾಳಿಯನ್ನು ಹಿಗ್ಗಾಮುಗ್ಗ ದಂಡಿಸಿದ ಸೂರ್ಯವಂಶಿ ಆ ಪಂದ್ಯದಲ್ಲಿ ಸಿಕ್ಸರ್ಗಳನ್ನು ಅಟ್ಟುವ ಸಾಮರ್ಥ್ಯ ಪ್ರದರ್ಶಿಸಿದ್ದರು. 11 ಸಿಕ್ಸರ್ಗಳನ್ನು ಸಿಡಿಸಿದ್ದರು.
‘ಬ್ಯಾಟಿನ ವೇಗ, ಕಣ್ಣು-ಕೈ ಸಂಯೋಜನೆ ಅವನಿಗೆ ಅಂಥ ಶಕ್ತಿ ಕೊಟ್ಟಿದೆ. ಲೆಂತ್ ಗುರುತಿಸುವಲ್ಲಿ ಚುರುಕುತನ ನನಗೆ ಅಚ್ಚರಿ ಮೂಡಿಸಿತು. ಬೌಲರ್ಗಳ ಎಸೆತ ಶಾರ್ಟ್ ಆದರೆ, ಫುಲ್ ಆದರೆ ಅದನ್ನು ತಪ್ಪದೇ ಬಂಡವಾಳ ಮಾಡಿಕೊಳ್ಳುತ್ತಿದ್ದ. ಅವನಲ್ಲಿರುವ ಈ ಸಹಜ ಸಾಮರ್ಥ್ಯ ಆ ಪಂದ್ಯದ ಸಂದರ್ಭದಲ್ಲಿ ನಮಗೆ ನೆರವಾಯಿತು’ ಎಂದು ಹೇಳಿದರು.
ಸಂವಾದದ ವೇಳೆ ಸೂರ್ಯವಂಶಿಯ ಆಟದ ವಿಡಿಯೊ ದೃಶ್ಯಾವಳಿಗಳನ್ನು ಪ್ರದರ್ಶಿಸಲಾಯಿತು. ಅಲ್ಲಿ ತಮ್ಮನ್ನು ಉತ್ತಮ ಆಟಗಾರನಾಗಿ ರೂಪುಗೊಳಿಸಿದ ದ್ರಾವಿಡ್ ಬಗ್ಗೆ ಸೂರ್ಯವಂಶಿ ಮೆಚ್ಚುಗೆ ಸೂಚಿಸುತ್ತಿದ್ದ ಕ್ಲಿಪ್ಪಿಂಗ್ ಕೂಡ
ಇತ್ತು. ಆದರೆ ಈ ದೃಶ್ಯಾವಳಿ ಮುಗಿದ ತಕ್ಷಣ ಮಾತು ಮುಂದುವರಿಸಿದ ದ್ರಾವಿಡ್, ‘ಅವನ ಈ ಏಳಿಗೆಯಲ್ಲಿ ನನ್ನ ಪಾತ್ರ ಅಷ್ಟೇನೂ ಇರಲಿಲ್ಲ’ ಎಂದು ಹೇಳಿಬಿಟ್ಟರು.
‘ಅವನ ತಂದೆ ಅವನಿಗೆ ಬೆಂಬಲವಾಗಿ ನಿಂತಿದ್ದಾರೆ.
ರಾಜಸ್ಥಾನ ರಾಯಲ್ಸ್ ಬೆಂಬಲವೂ ಅವನಿಗಿದೆ.
ಹಲವರು ವೈಭವ್ ಆಟ ಈ ಮಟ್ಟಕ್ಕೆ ಬೆಳೆಯುವಲ್ಲಿ ಭಾಗಿಯಾಗಿದ್ದಾರೆ’ ಎಂದರು.