ಬೆಳಗಾವಿ : ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದಿಂದ ಎಮರ್ಜಿಂಗ್ ಯುನಿವರ್ಸಿಟಿ ಪ್ರಶಸ್ತಿಯನ್ನು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಮುಂಬೈನ ಐಐಟಿಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಅವರು ಸಮಾಜದ ಅಂಚಿನಲ್ಲಿರುವ ಕಟ್ಟಕಡೆಯ ವಿದ್ಯಾರ್ಥಿಯನ್ನು ಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಅವರ ಭವಿಷ್ಯವನ್ನು ರೂಪಿಸುವುದಕ್ಕಾಗಿ ಶ್ರಮಿಸುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗದರ್ಶನದಲ್ಲಿ ವಿಶ್ವವಿದ್ಯಾಲಯ ಮುನ್ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ನಮ್ಮ ಸಿಬ್ಬಂದಿಗಳು ಸದಾ ಕಾರ್ಯಪ್ರವೃತ್ತರಾಗುತ್ತಿದ್ದಾರೆ. ರಾಚವಿ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅವರ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿ ಶ್ಲಾಘಿಸಿದರು. ಅವರ ಕಾರ್ಯತತ್ಪರತೆ ಮತ್ತು ಸಿಂಡಿಕೇಟ್ ಸದಸ್ಯರು, ವಿದ್ಯಾ ವಿಷಯಕ ಪರಿಷತ್ತಿನ ಸದಸ್ಯರ ಅವಿರತ ಪ್ರಯತ್ನದಿಂದ ಇಂಥ ಒಂದು ಪ್ರತಿಷ್ಠಿತ ಪ್ರಶಸ್ತಿಗೆ ಇಂದು ಭಾಜನರಾದೇವು ಎಂದರು.
ಇದೇ ಸಂದರ್ಭದಲ್ಲಿ ಸಂಶೋಧನೆ , ಸಮಾಜ ಸೇವೆ, ಆಡಳಿತ, ಶಿಕ್ಷಣ, ಪರಿಸರ ಸಂರಕ್ಷಣೆ ಮುಂತಾದ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು. ಎಲ್ಲಾ ಪ್ರಶಸ್ತಿಗಳನ್ನು ಇಸ್ರೋ ಮಾಜಿ ಅಧ್ಯಕ್ಷರಾದ ಪದ್ಮಶ್ರೀ ಡಾ. ಕಿರಣ ಕುಮಾರ ಅವರು ಪ್ರದಾನ ಮಾಡಿದರು.
ಕರ್ನಾಟಕದಲ್ಲಿ ಇಲ್ಲಿಯವರೆಗೆ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿರುವುದು ಕೇವಲ ಎರಡು ಸಂಸ್ಥೆಗಳು ಮಾತ್ರ. ಒಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಎರಡನೆಯದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ. ಸ್ವಾತಂತ್ರ್ಯ ಹೋರಾಟದ ಬೆಳ್ಳಿ ಚುಕ್ಕಿಯಾದ, ವೀರವನಿತೆ ರಾಣಿ ಚನ್ನಮ್ಮನ ನಾಮಧೇಯ ಹೊಂದಿದ ಉತ್ತರ ಕರ್ನಾಟಕದ ಹೆಮ್ಮೆಯ ಶಿಕ್ಷಣ ಸಂಸ್ಥೆಯಾದ ರಾಣಿ ವಿಶ್ವವಿದ್ಯಾಲಯಕ್ಕೆ ಬಂದಿರುವುದು ಅತ್ಯಂತ ಸಂತಸ ತಂದಿದೆ. ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು, ವಿವಿಯ ಸಂಯೋಜಿತ ಕಾಲೇಜಿನ ಸಿಬ್ಬಂದಿಗಳು ಹರ್ಷವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ರಾಚವಿ ಭೂಗೋಳಶಾಸ್ತ್ರ ವಿಭಾಗದ ಪ್ರೊ. ಬಸವರಾಜ ಬಗಾಡೆ ಅವರು “ನ್ಯಾಷನಲ್ ಜಿಯೋಸ್ಪೆಷಿಯಲ್ ಎಮರ್ಜಿಂಗ್ ಫ್ಯಾಕಲ್ಟಿ ಫೆಲೋ ಅವಾರ್ಡ್” ಗೆ ಭಾಜನರಾದರು.
ಈ ರಾಷ್ಟ್ರ ಮಟ್ಟದ ಗೌರವದೊಂದಿಗೆ ಫೋಸ್ಸೀ ಜಿಐಎಸ್ (ಎನ್ಎಂಇಐಸಿಟಿ) ಯೋಜನೆಯ ಹಲವಾರು ಪ್ರಯೋಜನಗಳನ್ನು ಇನ್ನೂ ಮುಂದೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಸಂಬಂಧಿತ ಕಾಲೇಜುಗಳು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ಗಳಿಗೆ ಮುಕ್ತವಾಗಲಿವೆ.
ಈ ಪ್ರಶಸ್ತಿ ಕಾರ್ಯಕ್ರಮವನ್ನು ಐಐಟಿ ಬಾಂಬೆಯ ಫೋಸ್ಸೀ (ಜಿಐಎಸ್) ಯೋಜನೆ ಹಾಗೂ ICT ಮೂಲಕ ಶಿಕ್ಷಣಕ್ಕಾಗಿ ರಾಷ್ಟ್ರೀಯ ಮಿಷನ್ (NMEICT), ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.