ಬೆಂಗಳೂರು :
ಹೆಸರಾಂತ ಚಲನಚಿತ್ರ ನಟ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನಕ್ಕೆ ಇಂದಿಗೆ ಭರ್ತಿ 1 ವರ್ಷ. ಅವರ ನಿಧನ ಅಪಾರ ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ.
ಕರ್ನಾಟಕ ಸರಕಾರ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ರಾಜ್ಯೋತ್ಸವದಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಿದೆ. ಇಲ್ಲಿಯವರೆಗೆ 8ಜನರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದು, 2009 ರ ನಂತರ ಯಾರಿಗೂ ನೀಡಿಲ್ಲ. ಕನ್ನಡ ಚಿತ್ರರಂಗ, ಭಾಷೆ-ಸಂಸ್ಕೃತಿಗೆ ಪುನೀತ್ ನೀಡಿರುವ ಕೊಡುಗೆ ಗಮನಿಸಿ ರಾಜ್ಯ ಸರ್ಕಾರ ಪ್ರಶಸ್ತಿ ಪ್ರದಾನ ಮಾಡಲಿದೆ.
ರಾಜ್ ಕುಮಾರ್ ಅವರ ಮಡಿಲಲ್ಲೇ ಇರುವ ಪುನೀತ್ ರಾಜ್ ಕುಮಾರ್ ಅವರ ಸಮಾಧಿಗೆ ನಮಿಸಲು ಸಾವಿರಾರು ಜನ ಕಂಠೀರವ ಸ್ಟುಡಿಯೋಕ್ಕೆ ಹೋಗುತ್ತಿದ್ದಾರೆ. ವರ್ಷ ಕಳೆದರೂ ಈ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಪ್ರತಿದಿನ ಐದರಿಂದ ಹತ್ತು ಸಾವಿರ ಜನ ಸಮಾಧಿಗೆ ಭೇಟಿ ನೀಡುತ್ತಿದ್ದಾರೆ. ಇಂದು ಈ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲಿ ಹೆಚ್ಚುವ ಸಾಧ್ಯತೆಯಿದೆ.
ಕಳೆದ ವರ್ಷದ ಅಕ್ಟೋಬರ್ 29 ಅವರ ಅಭಿಮಾನಿಗಳಿಗೆ ಕರಾಳ ದಿನವಾಯಿತು. ಬರಸಿಡಿಲಿನಂತೆ ಪುನೀತ್ ರಾಜ್ ಕುಮಾರ್ ಅವರ ನಿಧನದ ಸುದ್ದಿ ಬಂದೊದಗಿತು.
ಪುನೀತ್ ನಮ್ಮನ್ನಗಲಿ ಬರೋಬ್ಬರಿ 1ವರ್ಷವಾಗಿದೆ. ಅವರ ಅಭಿಮಾನಿಗಳು ಇನ್ನೂ ನೋವಿನಲ್ಲೇ ದಿನ ಕಳೆಯುತ್ತಿದ್ದಾರೆ. ಆದರೆ ಪುನೀತ್ ರಾಜ್ ಕುಮಾರ್ ಅವರು ಕನ್ನಡ ಚಲನಚಿತ್ರರಂಗ ಹಾಗೂ ಸಮಾಜಕ್ಕೆ ಸಲ್ಲಿಸಿದ ಸೇವೆ ಚಿರಂತನ.