ಬೆಳಗಾವಿ: ಹುಕ್ಕೇರಿ ತಾಲುಕಿನ ಇಂಗಳಿ ಗ್ರಾಮದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಹೊಡೆದ ಪ್ರಕರಣಕ್ಕೆ ಸಂಬಂಧಿಸಿ ಎಸ್ಪಿ ಡಾ.ಭೀಮಾಶಂಕರ ಗುಳೇದ ಅವರು ಹುಕ್ಕೇರಿ ಪಿಎಸ್ಐ ನಿಖಿಲ್ ಕಾಂಬಳೆ ಅವರನ್ನು ಅಮಾನತು ಮಾಡಿ ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಶ್ರೀರಾಮ ಸೇನೆ ಕಾರ್ಯಕರ್ತರು ಜೂನ್ 26 ರಂದು ಗೋವು ಸಾಗಿಸುತ್ತಿದ್ದ ವಾಹನ ಹಿಡಿದು ಠಾಣೆಗೆ ತಂದಿದ್ದರು. ಪೊಲೀಸರು ಗೋವುಗಳನ್ನು ಗೋ ಶಾಲೆಗೆ ಸಾಗಿಸಿದ್ದರು. ಆದರೆ, ಪ್ರಕರಣ ಕುರಿತು ಎಫ್ಐಆರ್ ದಾಖಲಿಸಿಲ್ಲ. ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ಸಹಾ ತಂದಿರಲಿಲ್ಲ. ಬೆಳಗಾವಿ ಜಿಲ್ಲೆಯಿಂದ ಕಲಬುರಗಿ ಜಿಲ್ಲೆಗೆ ಗಡೀಪಾರಾಗಿದ್ದ ಶ್ರೀರಾಮ ಸೇನೆಯ ಕಾರ್ಯಕರ್ತ ರೌಡಿಶೀಟರ್ ಮಹಾವೀರ ಎಂಬಾತನನ್ನು ಹಾಗೇ ಬಿಟ್ಟು ಕಳಿಸಿದ್ದಾರೆ. ಇದನ್ನು ಕರ್ತವ್ಯ ಲೋಪ ಎಂದು ಪರಿಗಣಿಸಿ ಅಮಾನತು ಮಾಡಲಾಗಿದೆ.
ಈ ನಡುವೆ ಶ್ರೀರಾಮ ಸೇನೆ ತನ್ನ ಸಂಘಟನೆಯ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿಹಾಕಿ ಹೊಡೆದ ಪ್ರಕರಣದ ಎಲ್ಲಾ ಆರೋಪಿಗಳ ಬಂಧನ ಮಾಡಬೇಕು ಎಂದು ಒತ್ತಾಯಿಸಿ ಗುರುವಾರ ಜುಲೈ ಮೂರರಂದು ಇಂಗಳಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದೆ.