ಬೆಳಗಾವಿ:
ಡಿಸೆಂಬರ್ 23ರಂದು ನಡೆಸಲು ಉದ್ದೇಶಿಸಿದ್ದ 545 ಪಿಎಸ್ಐ ಹುದ್ದೆಗಳ ಮರು ಪರೀಕ್ಷೆಯನ್ನು ಸರ್ಕಾರ ಒಂದು ತಿಂಗಳ ಕಾಲ ಮುಂದೂಡಿದ್ದು, 2024ರ ಜನವರಿ 23ಕ್ಕೆ ನಡೆಸಲಾಗುತ್ತದೆ ಎಂದು ಗೃಹ ಸಚಿವ ಡಾ. ಪರಮೇಶ್ವರ ಪ್ರಕಟಿಸಿದ್ದಾರೆ.
545 ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸಲು ಹೈಕೋರ್ಟ್ ಆದೇಶ ನೀಡಿತ್ತು. ನಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಇದೇ ಡಿಸೆಂಬರ್ 23ಕ್ಕೆ ಮರು ಪರೀಕ್ಷೆ ನಡೆಸುವುದಾಗಿ ಪ್ರಕಟಿಸಿತ್ತು.
ಆದರೆ ಹಲವು ಅಭ್ಯರ್ಥಿಗಳು ಮತ್ತು ಪ್ರತಿಪಕ್ಷವಾದ ಬಿಜೆಪಿ ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿದ್ದವು. ವಿಧಾನಸಭೆಯಲ್ಲಿ ಸೋಮವಾರ ಶೂನ್ಯವೇಳೆಯಲ್ಲಿ ವಿಚಾರ ಪ್ರಸ್ತಾವಿಸಿದ ಬಿಜೆಪಿಯ ಬಸನ ಗೌಡ ಪಾಟೀಲ್ ಯತ್ನಾಳ್, ಪಿಎಸ್ಐ ಹುದ್ದೆಗಳಿಗೆ ಡಿ.23ರಂದು ಮರುಪರೀಕ್ಷೆ ನಡೆಸುವುದಾಗಿ ವೇಳಾಪಟ್ಟಿ ಪ್ರಕಟಿಸಿದ್ದೀರಿ. ಆದರೆ ಮರು ಪರೀಕ್ಷೆಗೆ ತಯಾರಿ ನಡೆಸಬೇಕಿದೆ, ಸಮಯಾವಕಾಶ ಕೊಡಿ ಎಂದು ಅಭ್ಯರ್ಥಿಗಳು ಕೇಳುತ್ತಿದ್ದಾರೆ. ಹೀಗಾಗಿ ಪರೀಕ್ಷೆ ಮುಂದೂಡಿ ಎಂದು ಆಗ್ರಹಿಸಿದರು.
ಮರು ಪರೀಕ್ಷೆಯನ್ನು ಮುಂದೂಡುವಂತೆ ಆಡಳಿತ ಮತ್ತು ವಿಪಕ್ಷಗಳ ಸದಸ್ಯರು ಆಗ್ರಹಿಸಿದ ಹಿನ್ನೆಲೆಯಲ್ಲಿ ಪಿಎಸ್ ಐ ನೇಮಕಾತಿ ಮರು ಪರೀಕ್ಷೆಯನ್ನು ಡಿಸೆಂಬರ್ 23ರ ಬದಲು ಜನವರಿ 23ಕ್ಕೆ ನಡೆಸುವುದಾಗಿ ಬೆಳಗಾವಿಯ ಸುವರ್ಣಸೌಧದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಪ್ರಕಟಿಸಿದರು.
ಪೊಲೀಸ್ ಇಲಾಖೆ ಈ ಹಿಂದೆ ನಡೆಸಿದ್ದ ಪರೀಕ್ಷೆಗೆ ಅರ್ಹತೆ ಪಡೆದ ಎಲ್ಲರಿಗೂ ಮರು ಪರೀಕ್ಷೆ ಬರೆಯಲು ಅವಕಾಶ ನೀಡಿದ್ದು, ಪರೀಕ್ಷೆ ಬೆಂಗಳೂರಿನಲ್ಲಿ ಮಾತ್ರ ನಡೆಯಲಿದೆ.