ತಿರುವನಂತಪುರ: ಕರ್ನಾಟಕದಂತೆ ಕೇರಳದಲ್ಲೂ ವಕ್ಫ್ ಭೂ ವಿವಾದ ರಾಜಕೀಯ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.
ಕೇರಳದ ಎರ್ನಾಕುಳಂ ಜಿಲ್ಲೆಯ ಮುನಂಬಮ್ನಲ್ಲಿ ವಕ್ಸ್ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಕ್ಯಾಥೋಲಿಕ್ ಚರ್ಚ್ನ ಬೆಂಬಲದೊಂದಿಗೆ ಸ್ಥಳೀಯ ನಿವಾಸಿಗಳು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಯಾರೊಬ್ಬರನ್ನೂ ಸ್ಥಳಾಂತರಿಸಬಾರದು ಎಂದು ಸಿಪಿಐ ಆಗ್ರಹಿಸಿದೆ.
ಮುನಂಬಮ್ ಗ್ರಾಮಗಳಲ್ಲಿ ತಲೆಮಾರುಗಳಿಂದ ಕ್ರಿಶ್ಚಿಯನ್ ಕುಟುಂಬಗಳಿಗೆ ಸೇರಿದ ಹಲವು ಆಸ್ತಿಗಳನ್ನು
ವಕ್ಫ್ ಮಂಡಳಿ ಕಾನೂನುಬಾಹಿರವಾಗಿ ಹಕ್ಕು ಸಾಧಿಸುತ್ತಿದೆ ಎಂದು ಚರ್ಚ್ ಆರೋಪ ಮಾಡಿದೆ.
‘ನೋಂದಾಯಿತ ಪತ್ರಗಳು, ಭೂ ತೆರಿಗೆ ಪಾಪತಿ ರಸೀದಿಗಳು ಇದ್ದ ಹೊರತಾಗಿಯೂ ಮಂಡಳಿಯು ನಮ್ಮ ಭೂಮಿ ಮತ್ತು ಆಸ್ತಿಗಳ ಮೇಲೆ ಕಾನೂನುಬಾಹಿರವಾಗಿ ಹಕ್ಕು ಪ್ರತಿಪಾದಿಸುತ್ತಿದೆ’ ಎಂದು ಎರ್ನಾಕುಳಂ ಜಿಲ್ಲೆಯ ಚೆರಾಯಿ ಮತ್ತು ಮುನಂಬಮ್ ಗ್ರಾಮಗಳ ನಿವಾಸಿಗಳು ದೂರಿದ್ದಾರೆ.
ಪ್ರತಿಭಟನೆ ನಡೆಸುತ್ತಿರುವ ನಿವಾಸಿಗಳ ಪ್ರಕಾರ, 1950ರಲ್ಲಿ ಅವರ ಜಮೀನನ್ನು ಕೋಯಿಕೋಡ್ನ ಫಾರೂಕ್ ಕಾಲೇಜಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ನೀಡಲಾಗಿತ್ತು. ಇದು ವಕ್ಫ್ ಭೂಮಿಯಲ್ಲ.
ಇದು ವಕ್ಸ್ ಭೂಮಿಯಲ್ಲ. ಅದಾಗ್ಯೂ ಈ ಭೂ ವಿವಾದಕ್ಕೆ ಸಂಬಂಧಿಸಿದ ಪ್ರಕರಣ ಕುರಿತು ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದರು.
ಆಡಳಿತಾರೂಢ ಎಲ್ಡಿಎಫ್ನ ಎರಡನೇ ಅತಿದೊಡ್ಡ ಪಾಲುದಾರ ಪಕ್ಷವಾದ ಸಿಪಿಐ, ಸಮಾಜದಲ್ಲಿ ಕೋಮು ವಿಭಜನೆ ಸೃಷ್ಟಿಸಲು ಪಟ್ಟಭದ್ರ ಹಿತಾಸಕ್ತಿಗಳು ಯತ್ನಿಸುತ್ತಿವೆ ಎಂದು ಎಚ್ಚರಿಕೆ ನೀಡಿದೆ.
‘ಮುನಂಬಮ್ನಿಂದ ಯಾರನ್ನೂ ಒಕ್ಕಲೆಬ್ಬಿಸಬಾರದು ಎಂಬುದು ಪಕ್ಷದ ನಿಲುವಾಗಿದೆ. ವಕ್ಫ್ ಭೂಮಿಯೇ ಆಗಲಿ, ದೇವಸ್ವಂ ಭೂಮಿಯೇ ಆಗಲಿ ಬಡವರನ್ನು ಸ್ಥಳಾಂತರಿಸಬಾರದು’ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ ‘ಫೇಸ್ಬುಕ್’ನಲ್ಲಿ ಮನವಿ ಮಾಡಿದ್ದಾರೆ.