ಬೆಳಗಾವಿ: ಮಹಾನಗರ ಪಾಲಿಕೆಯಲ್ಲಿ ಏಜೆಂಟರ ಹಾವಳಿ ತಪ್ಪಿಸುವಂತೆ ಆಗ್ರಹಿಸಿ ಇಂದು ನಗರ ಸೇವಕರಿಂದ ಪ್ರತಿಭಟನೆ ನಡೆಸಲಾಯಿತು.
ಇಂದು ಬೆಳಗಾವಿ ಮಹಾನಗರ ಪಾಲಿಕೆ ಕಾರ್ಯಾಲಯದ ಮೆಟ್ಟಿಲುಗಳ ಮೇಲೆ ವಿರೋಧ ಪಕ್ಷದ ನಗರ ಸೇವಕರು ಧರಣಿಯನ್ನು ಕೈಗೊಂಡರು. ಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆ ವಸೂಲಾತಿಯಲ್ಲಿ ಕಂದಾಯ ವಿಭಾಗ ಭ್ರಷ್ಟಾಚಾರದಲ್ಲಿ ಮುಳುಗಿ ಮಹಾನಗರ ಪಾಲಿಕೆ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುತ್ತಿದೆ. ಏಜೆಂಟರ ಮೂಲಕ ಕೆಲಸ ನಿರ್ವಹಿಸಿ ಜನರಿಗೆ ತೊಂದರೆ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಘೋಷಣೆಗಳನ್ನು ಕೂಗಿದರು.
ಆಸ್ತಿ ತೆರಿಗೆ ಪಾವತಿಸುವ ಪ್ರಕ್ರಿಯೆ ನಗರಸೇವಕರು ಅಥವಾ ಸಾರ್ವಜನಿಕರು ನೇರವಾಗಿ ಹೋದರೇ, 1-2 ತಿಂಗಳುಗಳ ಕಾಲ ಅಲೆದಾಡಿಸಲಾಗುತ್ತಿದೆ. ಹಣದ ಬೇಡಿಕೆಯನ್ನು ಇಡಲಾಗುತ್ತಿದೆ. ಅದೇ ಕೆಲಸ ಏಜೆಂಟ್’ಗಳ ಮೂಲಕ ಮಾಡಿಸಿದರೇ, ಕೇವಲ 1-2 ಗಂಟೆಗಳಲ್ಲಿ ಮಾಡಲಾಗುತ್ತಿದೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದರೇ, ಸುಮಾರು ಒಂದೂವರೆ ಕೋಟಿ ತೆರಿಗೆಯನ್ನು ಮಹಾನಗರ ಪಾಲಿಕೆ ಸಂಗ್ರಹಿಸಬಹುದಾಗಿದೆ ಎಂದರು.
ಹಲವಾರು ವರ್ಷಗಳಿಂದ ಬಾಕಿ ತೆರಿಗೆಯನ್ನು ಜನರಿಂದ ಮತ್ತು ಕಾರ್ಖಾನೆಗಳಿಂದ ವಸೂಲಿ ಮಾಡದೆ ಹಣ ಪಡೆದು, ಸೆಟ್ಲಮೆಂಟ್ ಮಾಡಿ ಮಹಾನಗರ ಪಾಲಿಕೆ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಲಾಗುತ್ತಿದೆ. ಇದರಿಂದಾಗಿ ಮಹಾನಗರ ಪಾಲಿಕೆಯ ಬಳಿ ಅಭಿವೃದ್ಧಿ ಕಾರ್ಯಗಳಿಗಾಗಿ ಅನುದಾನವಿಲ್ಲದಂತಾಗಿದೆ ಎಂದು ಆರೋಪಿಸಿದರು.
ನಗರ ಸೇವಕರಾದ ವೈಶಾಲಿ ಭಾತಕಾಂಡೆ, ಜ್ಯೋತಿ ಕಡೋಲಕರ, ಆಪ್ರೋಜ್ ಮುಲ್ಲಾ, ಖುರ್ಷಿದ್ ಮುಲ್ಲಾ, ಶಿವಾಜೀರಾವ್ ಮಂಡೋಳಕರ, ರವಿ ಸಾಳುಂಕೆ, ರೇಷ್ಮಾ ಭೈರಕದಾರ, ಅಸ್ಮಿತಾ ಪಾಟೀಲ್ ಸೇರಿದಂತೆ ಅನೇಕರು ಇದ್ದರು.