ನವದೆಹಲಿ: ಬಾಂಗ್ಲಾದೇಶದಲ್ಲಿ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ನೀತಿಗಳ ಬಗ್ಗೆ ಆಡಳಿತ ಮತ್ತು ವ್ಯಾಪಾರ ವಲಯದಲ್ಲಿ ರಾತ್ರೋರಾತ್ರಿ ವ್ಯಾಪಕ ಪ್ರತಿಭಟನೆಗಳು ಮತ್ತು ತೀವ್ರ ಅಸಮಾಧಾನ ಭುಗಿಲೆದ್ದಿದೆ.
ಸಚಿವಾಲಯದ ಸಿಬ್ಬಂದಿ, ರಾಷ್ಟ್ರೀಯ ಕಂದಾಯ ಮಂಡಳಿಯ ಅಧಿಕಾರಿಗಳು ಮತ್ತು ಢಾಕಾ ದಕ್ಷಿಣ ನಗರ ಪಾಲಿಕೆ ನೌಕರರ ಪ್ರತಿಭಟನೆಗಳನ್ನು ಉಲ್ಲೇಖಿಸಿ ‘ಪ್ರೊಥಮ್ ಆಲೊ’ ಪತ್ರಿಕೆ ವರದಿಯನ್ನು ಪ್ರಕಟಿಸಿದೆ.
1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಬುದ್ಧಿಜೀವಿಗಳನ್ನು ಹತ್ಯೆ ಮಾಡಿದ ರೀತಿಯಲ್ಲಿಯೇ ದೇಶದಲ್ಲಿ ಉದ್ಯಮಿಗಳನ್ನು ಕೊಲ್ಲಲಾಗುತ್ತಿದೆ ಎಂದು
ಎಂದು ಬಾಂಗ್ಲಾದೇಶ ಟೆಕ್ಸ್ಟೈಲ್ಸ್ ಮಿಲ್ಸ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಉದ್ಯಮಿ ಶೌಕತ್ ಅಜೀಜ್ ರಸ್ಸೆಲ್ ಹೇಳಿದ್ದಾರೆ. ಹೆಚ್ಚಿನ ಜನರು ನಿರುದ್ಯೋಗಿಗಳಾಗುವುದರಿಂದ ಕ್ಷಾಮದಂತಹ ಪರಿಸ್ಥಿತಿಯು ತಲೆದೋರಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
‘ಈದ್-ಉಲ್-ಅಧಾಕ್ಕೆ ಮುಂಚಿತವಾಗಿ ನಾವು ಕಾರ್ಮಿಕರಿಗೆ ಬೋನಸ್ ಮತ್ತು ವೇತನ ಹೇಗೆ ಪಾವತಿಸುವುದೆಂದು ನಮಗೆ ದಾರಿ ತೋಚುತ್ತಿಲ್ಲ. ಕಳೆದ ಎಂಟು ತಿಂಗಳಲ್ಲಿ ಬಾಂಗ್ಲಾದೇಶ ಹೂಡಿಕೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಒಬ್ಬನೇ ಒಬ್ಬ ಹೂಡಿಕೆದಾರನನ್ನು ಕರೆತರಲು ಸಾಧ್ಯವಾಗಿಲ್ಲ’ ಎಂದು ರಸ್ಸೆಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಏತನ್ಮಧ್ಯೆ, ಉದ್ದೇಶಿತ ಸರ್ಕಾರಿ ಸೇವೆ (ತಿದ್ದುಪಡಿ) ಸುಗ್ರೀವಾಜ್ಞೆ 2025ರ ವಿರುದ್ಧ ಬಾಂಗ್ಲಾದೇಶ ಸಚಿವಾಲಯದೊಳಗೆ ಸರ್ಕಾರಿ ನೌಕರರು ಎರಡು ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆ ಭಾನುವಾರವೂ ಮುಂದುವರಿಯಿತು.
ಏತನ್ಮಧ್ಯೆ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ತಮ್ಮ ಮೂಲವೇತನ ಮರು ನಿಗದಿಪಡಿಸುವುದು ಸೇರಿ ಪ್ರಮುಖ ಮೂರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರದಿಂದ ಅನಿರ್ದಿಷ್ಟಾವಧಿಗೆ ಕರ್ತವ್ಯಕ್ಕೆ ಗೈರುಹಾಜರಾಗುವ ಎಚ್ಚರಿಕೆ ನೀಡಿದ್ದಾರೆ.