ಪ್ರಯಾಗರಾಜ್: ಭಾರತದ ಸರಾಸರಿ ತಾಪಮಾನವು ಹೆಚ್ಚುತ್ತಿರುವ ಬೆನ್ನಲ್ಲೇ, ಧಾರ್ಮಿಕ ಮುಖಂಡರು ಕೂಡ ಮಹಾ ಕುಂಭದಲ್ಲಿ ಪರಿಸರ ಉಳಿಸುವ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮೊದಲ ಬಾರಿಗೆ ಕುಂಭಮೇಳದಲ್ಲಿ ಪರಿಸರ ಸಂರಕ್ಷಣೆ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಧಾರ್ಮಿಕ ಕ್ಷೇತ್ರಗಳಲ್ಲಿ ಹಸಿರು ಇಂಧನದ ಬಳಕೆ, ಸಮರ್ಪಕ ತ್ಯಾಜ್ಯ ನಿರ್ವಹಣೆ, ನದಿಗಳು ಹಾಗೂ ಅರಣ್ಯ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಭಾನುವಾರ ಇಲ್ಲಿ ನಡೆದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ‘ಜಾಗತಿಕ ತಾಪಮಾನ ಬದಲಾವಣೆಗೆ ಇಂಗಾಲದ ಡೈ ಆಕ್ಸೆಡ್ ಪ್ರಮುಖ ಕಾರಣ. ಇದರಿಂದ, ಭೂಮಿಯ ಜೀವಸೆಲೆಯಾದ ನದಿಗಳು ಬತ್ತಿಹೋಗುತ್ತಿವೆ. ಸ್ವಹಿತಾಶಕ್ತಿಗಾಗಿ ನದಿಗಳನ್ನು ಮಲಿನಗೊಳಿಸುತ್ತಿದ್ದೇವೆ’ ಎಂದು ತಿಳಿಸಿದರು.
‘ಕಳೆದ 33 ದಿನಗಳಲ್ಲಿ ಲಕ್ಷಾಂತರ ಮಂದಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಇದಕ್ಕಾಗಿ ಬಹಳ ತಿಂಗಳ ಹಿಂದೆಯೇ ತಯಾರಿ ನಡೆಸಲಾಗಿತ್ತು. ನದಿಯ ಕಾಲುವೆಗಳನ್ನು ಅಗಲಗೊಳಿಸಿ, ಸ್ವಚ್ಛಗೊಳಿಸಲಾಗಿತ್ತು.
ಭಕ್ತಾದಿಗಳು ಭೇಟಿ ನೀಡುವ ವೇಳೆ ಗರಿಷ್ಠ ಪ್ರಮಾಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿತ್ತು. ಗಂಗಾ ನದಿಯಲ್ಲಿ 10 ರಿಂದ 12 ಸಾವಿರ ಕ್ಯುಸೆಕ್ ನೀರು ಇರುವಂತೆ ನೋಡಿಕೊಳ್ಳಲಾಗಿದೆ’ ಎಂದು ತಿಳಿಸಿದರು.
‘ರಾಜ್ಯದ ಅರಣ್ಯ ಇಲಾಖೆಯು ಕೆಲವು ವರ್ಷಗಳಿಂದ ಈಚೆಗೆ 210 ಕೋಟಿಗೂ ಗಿಡಗಳನ್ನು ನೆಟ್ಟಿದೆ. ಈ ಮೂಲಕ ಮಹಾಕುಂಭವು ನಮ್ಮ ನಂಬಿಕೆಯನ್ನು ಉಳಿಸಿಕೊಳ್ಳುವ ಜೊತೆಗೆ ಪರಿಸರ ಸಂರಕ್ಷಣೆಯನ್ನು ಮಾಡುವುದಾಗಿದೆ’ ಎಂದು ಯೋಗಿ ತಿಳಿಸಿದರು.