ಬೆಳಗಾವಿ ಸುವರ್ಣ ವಿಧಾನಸೌಧ: ಘಟಪ್ರಭಾ ಬಲದಂಡೆ ಮುಖ್ಯ ಕಾಲುವೆಯಿಂದ ಒಟ್ಟಾರೆ 1,35,381 ಹೆಕ್ಟೇರ್ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಬಲದಂಡೆ ಕಾಲುವೆ ದುರಸ್ತಿ ಹಾಗೂ ಚಿಕ್ಕೋಡಿ ಶಾಖಾ ಕಾಲುವೆ ಆಧುನೀಕರಣ ಕಾಮಗಾರಿಗೆ ರೂ.1,722 ಕೋಟಿ ವೆಚ್ಚದಲ್ಲಿ ವಿಸ್ತøತ ಯೋಜನಾ ವರದಿಯನ್ನು ರೂಪಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಗಳವಾರ ವಿಧಾನಸಭೆಯಲ್ಲಿನ ಪ್ರಶ್ನೋತ್ತರ ಕಲಾಪದಲ್ಲಿ ಬೀಳಿಗಿ ಶಾಸಕ ಜಿ.ಟಿ.ಪಾಟೀಲ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿ ಅವರು ಮಾತನಾಡಿದರು.
ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಸರ್ಕಾರದ ಜಲಶಕ್ತಿ ಮಂತ್ರಾಲಯದ ಕೇಂದ್ರ ಜಲ ಆಯೋಗದ ಆಡಳಿತಾತ್ಮಕ ಅನುಮೋದನೆ ಕೋರಿ ಸಲ್ಲಿಸಲಾಗಿದ್ದು, ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಅನುಮೋದನೆ ದೊರೆತರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ 60:40 ಅನುಪಾತದಲ್ಲಿ ಕಾಮಗಾರಿಯನ್ನು ಅನುಷ್ಠಾನಗೊಳಿಸಲಿದೆ. ಅನುಮೋದನೆ ವಿಷಯವಾಗಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ಮನವಿ ಮಾಡಿದ್ದೇನೆ. ಸ್ಥಳೀಯ ಶಾಸಕರು ಹಾಗೂ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಕಾಮಾಗಾರಿ ಅನುಮೋದನೆ ತರಲು ಪ್ರಯತ್ನಿಸಬೇಕು. ಇದರಿಂದ ಕಾಲುವೆ ಕೊನೆಯ ಭಾಗದವರೆಗೆ ನೀರು ಹರಿಸಲು ಸಾಧ್ಯವಾಗಲಿದೆ. ಈಗಾಗಲೇ ಘಟಪ್ರಭಾ ಎಡದಂಡೆ ಮುಖ್ಯ ಕಾಲುವೆ ದುರಸ್ಥಿ ಕಾರ್ಯ ಪೂರ್ಣಗೊಂಡಿದೆ. ಕಾಲುವೆಯಿಂದ ಒಟ್ಟಾರೆ 1,61,258 ಹೆಕ್ಟೇರ್ ಜಮೀನಿಗೆ ನೀರಾವರೆ ಸೌಲಭ್ಯ ಕಲ್ಪಿಸಲಾಗಿದೆ. ಕಾಲುವೆ ಕೊನೆಯ ಭಾಗದವರೆಗೂ ನೀರು ಹರಿಸಲು ಯಾವುದೇ ತೊಂದರೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕಾಲುವೆಯಿಂದ ರೈತರು ಪಂಪ್ಸೆಟ್ಗಳ ಮೂಲಕ ಜಮೀನುಗಳಿಗೆ ನೀರು ಹರಿಸಲು ಅವಕಾಶವಿಲ್ಲ. ಸರ್ಕಾರ ಕರ್ನಾಟಕ ನೀರಾವರಿ ಅಧಿನಿಯಮ 2024 ಜಾರಿಗೆ ತಂದಿದ್ದು, ಸ್ಥಳೀಯ ಪೋಲಿಸರ ಮೂಲಕ ಅನಧಿಕೃತ ಪಂಪಸೆಟ್ ತೆರವಿಗೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟ ಪಡಿಸಿದರು.
**********
ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳ ರಸ್ತೆ ಅಭಿವೃದ್ಧಿಗೆ ರೂ.150.08 ಕೋಟಿ ಬಿಡುಗಡೆ: ಸಚಿವ ರಹಿಂ ಖಾನ್
ಬೆಳಗಾವಿ ಸುವರ್ಣ ವಿಧಾನಸೌಧ : ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳ ಪೌರಾಡಳಿತ ಪ್ರದೇಶಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವಿವಿಧ ಯೋಜನೆಗಳಡಿಯಲ್ಲಿ 2023 ಸಾಲಿನಿಂದ ಇಲ್ಲಿಯವರೆಗೆ ರೂ.150.08 ಕೋಟಿ ಬಿಡುಗಡೆಯಾಗಿದ್ದು, ರೂ.142.32 ಕೋಟಿ ವೆಚ್ಚವಾಗಿರುತ್ತದೆ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹಿಂ ಖಾನ್ ತಿಳಿಸಿದರು.
ಅವರು ವಿಧಾನ ಪರಿಷತ್ನಲ್ಲಿ ಸದಸ್ಯ ಕೆ.ವಿವೇಕಾನಂದ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.
ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 3.3 ಕಿ.ಮೀ ರಸ್ತೆಗಳು ಅಧಿಕ ಮಳೆಯಿಂದ ಹಾಳಾಗಿದ್ದು, ಈ ರಸ್ತೆಗಳನ್ನು ದುರಸ್ಥಿಪಡಿಸಲು ರೂ.330.00 ಲಕ್ಷಗಳ ಮೊತ್ತಕ್ಕೆ ಅಂದಾಜು ಸಿದ್ಧಪಡಿಸಲಾಗಿರುತ್ತದೆ. 15ನೇ ಹಣಕಾಸು ಆಯೋಗದ ಅನುದಾನ, ಎಸ್.ಎಫ್.ಸಿ ಅನುದಾನ ಹಾಗೂ ಸ್ಥಳೀಯ ಸಂಸ್ಥೆ ನಿಧಿಗಳಡಿ ಲಭ್ಯವಿರುವ ಅನುದಾನದಲ್ಲಿ ಸದರಿ ರಸ್ತೆಗಳನ್ನು ದುರಸ್ಥಿಪಡಿಸಲಾಗುತ್ತಿದೆ.
ಚಾಮರಾಜನಗರ ನಗರಸಭೆಯ ವ್ಯಾಪ್ತಿಯಲ್ಲಿ 13 ಕಿ.ಮೀ. ರಸ್ತೆ ದುರಸ್ತಿ ಕಾಮಗಾರಿಯನ್ನು 15ನೇ ಹಣಕಾಸು ಆಯೋಗದ ಅನುದಾನ, ಎಸ್.ಎಫ್.ಸಿ. ಅನುದಾನ ಹಾಗೂ ಸ್ಥಳೀಯ ಸಂಸ್ಥೆ ನಿಧಿಗಳಡಿ ಲಭ್ಯವಿರುವ ಒಟ್ಟು ಮೊತ್ತ ರೂ.277.50 ಲಕ್ಷಗಳಲ್ಲಿ ಕೈಗೊಳ್ಳಲಾಗುತ್ತಿದೆ.
ಮಂಡ್ಯ ನಗರಸಭೆ ವ್ಯಾಪ್ತಿಯಲ್ಲಿ 9 ಕಿ.ಮೀ ರಸ್ತೆ, ದುರಸ್ತಿ ಕಾಮಗಾರಿಯನ್ನು ಸ್ಥಳೀಯ ಸಂಸ್ಥೆ ನಿಧಿಯಡಿ ಲಭ್ಯವಿರುವ ರೂ. 50 ಲಕ್ಷಗಳಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
************
ಕಪ್ಪುತಲೆ ಹುಳುವಿನ ಸಮೀಕ್ಷೆ ಜನವರಿಯಿಂದ ಪುನಾರಂಭ: ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಭರವಸೆ
ಬೆಳಗಾವಿ ಸುವರ್ಣಸೌಧ : ಬರುವ 2026ರ ಜನವರಿಯಿಂದ ಕಪ್ಪುತಲೆ ಹುಳುವಿನ ಸಮೀಕ್ಷೆಯನ್ನು ಪುನಾರಂಭಿಸಿ ಬೇಗನೇ ಪೂರ್ಣಗೊಳಿಸಿ ಪರಿಹಾರ ಕಲ್ಪಿಸುವುದಾಗಿ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕಾ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರು ಭರವಸೆ ನೀಡಿದರು.
ಪರಿಷತ್ತಿನಲ್ಲಿ ಡಿ.09ರಂದು ಸದಸ್ಯ ಮಧು ಜಿ ಮಾದೇಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 30 (235)ರ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸಚಿವರು, ಕಪ್ಪುತಲೆಹುಳು ಬಾಧಿತ ತೆಂಗಿನ ಬೆಳೆಯ ವೈಜ್ಞಾನಿಕ ಸಮೀಕ್ಷೆಯನ್ನು ಜುಲೈ-2025ರ ಮಾಹೆಯ ಅವಧಿಯಲ್ಲಿಯೇ ಪೂರ್ಣಗೊಳಿಸಬೇಕಿತ್ತು. ಆದರೆ, ಮಳೆ ಹಾಗೂ ಇನ್ನಿತರ ಕಾರಣದಿಂದ ಸಮೀಕ್ಷೆ ಅಪೂರ್ಣವಾಗಿದೆ.
ಸಮೀಕ್ಷೆ ಕೈಗೊಳ್ಳಲು ಅನುದಾನದ ಅವಶ್ಯಕತೆ ಇರುವುದರಿಂದ ಸಮೀಕ್ಷೆಗೆ ಅಂದಾಜು 1.94 ಕೋಟಿ ರೂ ಬೇಕಿದೆ ಎಂದು ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯ ಸಹಮತಿಗೆ ಕಳುಹಿಸಿದ್ದೇವೆ.
ಜನವರಿಯಿಂದ ಮೇ ವರೆಗೂ ಹೆಚ್ಚಿನ ಉಷ್ಣಾಂಶದಿಂದ ಕಪ್ಪುತಲೆ ಹಾಗೂ ಬಿಳಿನೊಣದ ಹಾನಿ ಹೆಚ್ಚಾಗಲಿದ್ದು, ಈ ಅವಧಿಯಲ್ಲಿ ಸಮೀಕ್ಷೆ ಕೈಗೊಂಡಲ್ಲಿ ನಿಖರವಾದ ಮಾಹಿತಿ ಲಭ್ಯವಾಗಲಿದೆ.
ಸಮೀಕ್ಷೆಗೆ ಸರ್ವೇಯರ್ಗಳನ್ನು ನಿಯೋಜಿಸಲಾಗಿದೆ. ಪ್ರತಿ ತಾಕಿಗೆ ರೂ. 10 ರಂತೆ ಗೌರವಧನ ನೀಡಲಾಗುತ್ತದೆ. ಒಟ್ಟು ಕಪ್ಪುತಲೆ ಹುಳುವಿನಿಂದ 62,044 ಹೆಕ್ಟೇರ್ ಪ್ರದೇಶವನ್ನು ಹಾಗೂ ಬಿಳಿನೊಣದಿಂದ 3,24,259 ಹೆಕ್ಟೇರ್ ಪ್ರದೇಶ ಬಾಧಿತವಾಗಿರುವುದಾಗಿ ಅಂದಾಜಿಸಲಾಗಿದೆ.
ಬಿಳಿನೊಣದ ಬಾಧೆ ಹೆಚ್ಚಾದ ಬಗ್ಗೆ ಮುಖ್ಯಮಂತ್ರಿಗಳು ಸೂಚಿಸಿದಂತೆ ಹಾಗೂ ಸಂಬಂಧಪಟ್ಟ ಸ್ಥಳೀಯ ಜನಪ್ರತಿನಿಧಿಗಳ ಕೋರಿಕೆಯಂತೆ ಕಪ್ಪುತಲೆ ಹುಳುವಿನ ಜೊತೆಗೆ ಬಿಳಿನೊಣದ ಸಮೀಕ್ಷೆಯನ್ನು ಸಹ ಕೈಗೊಳ್ಳಬೇಕಾಗಿದೆ ಎಂದು ಸಚಿವರು ವಿವರಿಸಿದರು.
ಮೈಸೂರು, ತುಮಕೂರು, ಹಾಸನ, ಮಂಡ್ಯ, ಬೆಂಗಳೂರು ದಕ್ಷಿಣ, ಚಿಕ್ಕಮಗಳೂರು, ಚಿತ್ರದುರ್ಗ, ಚಾಮರಾಜನಗರ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಕಪ್ಪುತಲೆ ಹುಳುವಿನ ಬಾಧೆ ಕಾಣಿಸಿಕೊಂಡು ತೆಂಗಿನ ಇಳುವರಿ ಕುಸಿದಿದೆ. ಸಮೀಕ್ಷೆ ಪೂರ್ಣವಾಗುವವರೆಗೆ ಏನಾದರು ಪರಿಹಾರ ಕಲ್ಪಿಸಬೇಕು ಎಂದು ಸದಸ್ಯ ಮಧು ಜಿ ಮಾದೇಗೌಡ ಅವರು ಸರ್ಕಾರಕ್ಕೆ ಒತ್ತಾಯ ಮಾಡಿದರು.
**************
ಬೆಂಗಳೂರಿನಿಂದ ಹೊರಗಡೆ ಹಿಂದುಳಿದ ಪ್ರದೇಶಗಳಲ್ಲಿ ಕೈಗಾರಿಕೆಗಳ ಉತ್ತೇಜನೆ : ಸಚಿವ ಎಂ. ಬಿ. ಪಾಟೀಲ್
ಬೆಳಗಾವಿ ಸುವರ್ಣ ವಿಧಾನಸೌಧ : ರಾಜ್ಯದ 2025-30 ಕೈಗಾರಿಕಾ ನೀತಿಯು ರಾಜ್ಯದ ಸಮಗ್ರ ಅಭಿವೃದ್ಧಿ ಗುರಿಯೊಂದಿಗೆ ಬೆಂಗಳೂರಿನಿಂದ ಹೊರಗಡೆ ಹಿಂದುಳಿದ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ್ ತಿಳಿಸಿದರು.
ಅವರು ವಿಧಾನ ಪರಿಷತ್ ನಲ್ಲಿ ಸದಸ್ಯ ಹೆಚ್. ಎಸ್. ಗೋಪಿನಾಥ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.
ರಾಜ್ಯದಲ್ಲಿ ಹಿಂದುಳಿದ ತಾಲ್ಲೂಕುಗಳಲ್ಲಿ ಹೂಡಿಕೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೈಗಾರಿಕಾ ನೀತಿಯಲ್ಲಿ ರಾಜ್ಯದ ಜಿಲ್ಲೆಗಳನ್ನು ಮೂರು ವಲಯಗಳಾಗಿ ವರ್ಗಿಕರಿಸಿದೆ. ಕೈಗಾರಿಕೆಯಲ್ಲಿ ಹಿಂದುಳಿದ ತಾಲ್ಲೂಕುಗಳು/ಜಿಲ್ಲೆಗಳನ್ನು ವಲಯ-1 ಮತ್ತು ವಲಯ-2 ರಲ್ಲಿ ಹಾಗೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ವಲಯ-3 ರಲ್ಲಿ ವರ್ಗೀಕರಿಸಲಾಗಿದೆ.
ರಾಜ್ಯದ ಸಮತೋಲಿನ ಕೈಗಾರಿಕಾ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಕೈಗಾರಿಕೆಯಲ್ಲಿ ಹಿಂದುಳಿದ ಜಿಲ್ಲೆಗಳು/ತಾಲ್ಲೂಕುಗಳಲ್ಲಿ ಹೂಡಿಕೆಗಳನ್ನು ಆಕರ್ಷಿಸಲು ಹೆಚ್ಚಿನ ಪ್ರೋತ್ಸಾಹವನ್ನು ನೀಡಲಾಗುತ್ತಿದೆ.
ದೇಶ ವಿದೇಶಗಳ ಹಲವಾರು ಪ್ರತಿಷ್ಠಿತ ಕಂಪನಿಗಳೊಂದಿಗೆ ಕರ್ನಾಟಕದಲ್ಲಿ ಬಂಡವಾಳ ಹೂಡಲು ಸಭೆಗಳನ್ನು ನಡೆಸಲಾಗುತ್ತಿದೆ. ಕೈಗಾರಿಕೆಗಳನ್ನು ಪ್ರಾರಂಭಿಸಲು ಬೇಕಾಗಿರುವ ಭೂಮಿ ಖರೀದಿ ಪ್ರಕ್ರಿಯೆ ಸರಳೀಕರಣಗೊಳಿಸಲಾಗಿದೆ.
ಕೈಗಾರಿಕೆಗಳನ್ನು ಪ್ರಾರಂಭಿಸಲು ಬೇಕಾಗಿರುವ ರಾಜ್ಯದ ಎನ್.ಒ.ಸಿ/ಒಪ್ಪಿಗೆಗಳನ್ನು ಸ್ವಯಂಘೋಷಣ ಪತ್ರದ ಆಧಾರದ ಮೇಲೆ ಪಡೆಯಲು 3 ವರ್ಷಗಳವರೆಗೆ ವಿಸ್ತರಿಸಿ ಕರ್ನಾಟಕ ಕೈಗಾರಿಕೆಗಳ (ಸೌಲಭ್ಯ) ಅಧಿನಿಯಮ 2002ಕ್ಕೆ ತಿದ್ದುಪಡಿ ತರಲಾಗಿದೆ.
ಅಲ್ಲದೆ, ಕರ್ನಾಟಕ ಕ್ಲೀನ್ ಮೊಬಿಲಿಟಿ ಪಾಲಿಸಿ 2025-30 ಹಾಗೂ ಕರ್ನಾಟಕ ಏರೋಸ್ಪೇಸ್ & ಡಿಫೆನ್ಸ್ ಪಾಲಿಸಿ 2022-27 ನ್ನು ಸಹ ಹೊರತಂದಿದ್ದು, ಈ ನೀತಿಗಳಡಿ ವಲಯವಾರು ಕೈಗಾರಿಕೆಗಳಿಗೆ ಆಕರ್ಷಕ ರಿಯಾಯಿತಿ ಹಾಗೂ ಉತ್ತೇಜನಗಳನ್ನು ಒದಗಿಸಲಾಗುತ್ತಿದೆ. ಅನುಮೋದಿತ ಕೈಗಾರಿಕೆಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅನುಷ್ಠಾನಗೊಳ್ಳುತ್ತಿವೆ.
ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ (2022-23 ರಿಂದ ಅಕ್ಟೋಬರ್ -2025ರ ಅಂತ್ಯದವರೆಗೆ) ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಹಾಗೂ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಗಳಲ್ಲಿ ಒಟ್ಟು 1888 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇವುಗಳಿಂದ ರೂ. 5,03,539 ಕೋಟಿ ಮೊತ್ತದ ಬಂಡವಾಳ ಹೂಡಿಕೆಯಾಗಲಿದ್ದು ಮತ್ತು 6,92,591 ಜನರಿಗೆ ಉದ್ಯೋಗಾವಕಾಶಗಳನ್ನು ನಿರೀಕ್ಷಿಸಲಾಗಿದೆ.
ಅನುಮೋದಿತ ಯೋಜನೆಗಳ ಪೈಕಿ 67 ಯೋಜನೆಗಳು ಅನುಷ್ಠಾನಗೊಂಡಿದ್ದು ಇವುಗಳಿಂದ ರೂ. 66435.09 ಕೋಟಿ ಮೊತ್ತದ ಬಂಡವಾಳ ಹೂಡಿಕೆಯಾಗಿದೆ ಹಾಗೂ 93,925 ಸಂಖ್ಯೆಯ ಉದ್ಯೋಗ ಸೃಜನೆಯಾಗಿದೆ.
ಉಳಿದ ಯೋಜನೆಗಳು ವಿವಿಧ ಹಂತಗಳಲ್ಲಿದ್ದು, ಇವೆಲ್ಲವೂ ಬೃಹತ್ ಕೈಗಾರಿಕೆಗಳಾಗಿರುವುದರಿಂದ, ಕನಿಷ್ಠ 3-5 ವರ್ಷಗಳು ಬೇಕಾಗಿರುತ್ತದೆ ಎಂದರು.


