ಬೆಂಗಳೂರು:
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾಷಾ ಶಾಸ್ತ್ರಜ್ಞರಿಗಾಗಿ ಮೀಸಲಿಟ್ಟಿರುವ ಡಾ. ಟಿ.ವಿ.ವೆಂಕಟಾಚಲಶಾಸ್ತ್ರೀ ವಿದ್ವತ್ ಪ್ರಶಸ್ತಿ ಪ್ರಕಟಿಸಲಾಗಿದೆ. ೨೦೨೨ ಹಾಗೂ ೨೦೨೩ನೆಯ ಸಾಲಿನ ಪ್ರಶಸ್ತಿಗಾಗಿ ಭಾಷಾಶಾಸ್ತ್ರದ ಮೂಲಕ ನಾಡಿನಲ್ಲಿ ಗಣನೀಯ ಸಾಧನೆ ಮಾಡಿದ ಸಾಹಿತಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ೧೦,೦೦೦(ಹತ್ತು ಸಾವಿರ)ರೂ. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಕನ್ನಡದ ಹಿರಿಯ ವಿದ್ವಾಂಸ ಡಾ. ಟಿ. ವಿ. ವೆಂಕಟಾಚಲಶಾಸ್ತ್ರೀ ಅವರ ಅಭಿಮಾನಿಗಳು ಹಾಗೂ ಅವರ ಬಂಧುಗಳು ಅವರ ಹೆಸರಿನಲ್ಲಿ ಈ ದತ್ತಿನಿಧಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಳೆಗನ್ನಡ ಸಾಹಿತ್ಯ, ಛಂದಸ್ಸು, ವ್ಯಾಕರಣ, ನಿಘಂಟು ರಚನೆ, ಗ್ರಂಥ ಸಂಪಾದನೆ, ಅನುವಾದ, ಭಾಷಾ ಶಾಸ್ತ್ರ ಶಾಸ್ತ್ರಸಾಹಿತ್ಯ ಮೊದಲಾದ ಭಾಷಾಶಾಸ್ತ್ರಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಹಿರಿಯ ಸಾಹಿತಿಗಳಿಗಾಗಿಯೇ ಈ ಪ್ರಶಸ್ತಿಯನ್ನು ದತ್ತಿ ದಾನಿಗಳು ಮೀಸಲಿಟ್ಟಿರುತ್ತಾರೆ. ಅದರಂತೆ ಕಳೆದ ೧೨ ವರ್ಷಗಳಿಂದ ನಿರಂತರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿಯನ್ನು ಈ ಕ್ಷೇತ್ರದ ಸಾಧಕರಿಗೆ ನೀಡುತ್ತ ಬಂದಿರುತ್ತದೆ. ದಾನಿಗಳ ಮೂಲ ಉದ್ದೇಶದಂತೆ ಕರ್ನಾಟಕದಲ್ಲಿ ಕನ್ನಡ ಸಾರಸ್ವತಲೋಕದಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿರುವ ಭಾಷಾಶಾಸ್ತ್ರಜ್ಞರನ್ನು ಗುರುತಿಸಿ ಡಾ. ಟಿ. ಬಿ. ವೆಂಕಟಾಚಲಶಾಸ್ತ್ರೀ ವಿದ್ವತ್ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ಇದುವರೆಗೆ ಕರೋನಾ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ಯಾವುದೇ ಕಾರ್ಯಕ್ರಮ ನಡೆಯದೇ ಇರುವ ಹಿನ್ನೆಲೆಯಲ್ಲಿ ಎರಡು ಸಾಲಿನ ಪ್ರಶಸ್ತಿಯ ಪ್ರಕಟಣೆ ಬಾಕಿ ಇತ್ತು. ಪ್ರಸ್ತುತ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷ ಅವಧಿಯಲ್ಲಿ ಬಾಕಿ ಉಳಿದಿದ್ದ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದೆ.
೨೦೨೨ನೆಯ ಸಾಲಿನ ʻಡಾ. ಟಿ.ವಿ.ವೆಂಕಟಾಚಲಶಾಸ್ತ್ರೀ ವಿದ್ವತ್ ಪ್ರಶಸ್ತಿಯನ್ನು ಹಿರಿಯ ಭಾಷಾಶಾಸ್ತ್ರಜ್ಞೆ ಮೈಸೂರಿನ ಡಾ. ವೈ. ಸಿ. ಭಾನುಮತಿ ಹಾಗೂ ʻ೨೦೨೩ನೆಯ ಪ್ರಶಸ್ತಿಗಾಗಿ ಭಾಷಾಶಾಸ್ತ್ರಜ್ಞ ಪ್ರೊ. ಜಿ. ಅಶ್ವತ್ಥನಾರಾಯಣ ಅವರನ್ನು ಸಮಿತಿ ಆಯ್ಕೆಮಾಡಿರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ನೀಡುವ ʻಡಾ. ಟಿ.ವಿ.ವೆಂಕಟಾಚಲಶಾಸ್ತ್ರೀ ವಿದ್ವತ್ ಪ್ರಶಸ್ತಿ ಹಿರಿಯ ಭಾಷಾಶಾಸ್ತ್ರಜ್ಞರಿಗೆ ನೀಡುವ ಅತೀ ಮಹತ್ವವಾದ ಪುರಸ್ಕಾರವಾಗಿರುತ್ತದೆ. ಈ ಬಾರಿ ಆಯ್ಕೆಯಾಗಿರುವ ಡಾ. ವೈ. ಸಿ. ಭಾನುಮತಿ ಹಾಗೂ ಪ್ರೊ. ಜಿ. ಅಶ್ವತ್ಥನಾರಾಯಣ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸುತ್ತದೆ ಎಂದು ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ, ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ಡಾ. ಟಿ.ವಿ.ವೆಂಕಟಾಚಲಶಾಸ್ತ್ರೀ ಅವರ ಮಗಳಾದ ಶ್ರೀಮತಿ ಟಿ.ವಿ.ಚಿತ್ಕಲಾ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷ ಡಾ. ಬಿ.ಎಂ. ಪಟೇಲ್ ಪಾಂಡು ಉಪಸ್ಥಿತರಿದ್ದರು.