ಬೆಂಗಳೂರು :
2023-24 ಸಾಲಿನ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತೀರ್ಮಾನಿಸಿದೆ.
ಈ ಕಾರಣದಿಂದ ವಾರ್ಷಿಕ ಪರೀಕ್ಷೆಯ ಸಂಭವನೀಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಈ ಕುರಿತು ಎಸ್ ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಶಾಲಾ ಶಿಕ್ಷಣ ಮಂಡಳಿ ಪ್ರಕಟಣೆ ಹೊರಡಿಸಿದೆ.
ಹಾಲಿ ಪರೀಕ್ಷಾ ಪದ್ದತಿಯಲ್ಲಿ ವಿದ್ಯಾರ್ಥಿಗಳಿಗೆ ಒಂದು ವಾರ್ಷಿಕ ಪರೀಕ್ಷೆ ಮತ್ತು ಒಂದು ಪೂರಕ ಪರೀಕ್ಷೆಯನ್ನು ನಡೆಸುತ್ತಿದೆ. ಈ ರೀತಿಯ ಪರೀಕ್ಷೆಯು ವಿದ್ಯಾರ್ಥಿಗಳ ಮೇಲೆ ಹೆಚ್ಚು ಒತ್ತಡ ಮತ್ತು ಪರೀಕ್ಷಾ ಆತಂಕವನ್ನು ಸೃಷ್ಟಿಸುತ್ತಿದೆ. ಇದರಿಂದ ವಿದ್ಯಾರ್ಥಿಗಳ ಜ್ಞಾನದಾರಣೆ, ಅರ್ಥಪೂರ್ಣ ಕಲಿಕೆ, ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದೆ. ಹೀಗಾಗಿ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಬಗ್ಗೆ ಹೇಳಿದೆ.
ಪ್ರಸ್ತುತ ಇರುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ತಾವು ಗಳಿಸಿದ ಅಂಕಗಳಿಂದ ತೃಪ್ತರಾಗದಿದ್ದರೆ, ವಾರ್ಷಿಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ತಿರಸ್ಕರಿಸಲು ಅವಕಾಶವಿದೆ. ಹಿಂದಿನ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸದೆ ಪೂರಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಮಾತ್ರ ವಿದ್ಯಾರ್ಥಿಯ ಅಂತಿಮ ಅಂಕಗಳೆಂದು ಪರಿಗಣಿಸಲಾಗುತ್ತಿದೆ. ಈ ವ್ಯವಸ್ಥೆಯು ವಿದ್ಯಾರ್ಥಿ ಸ್ನೇಹಿಯಾಗಿರುವುದಿಲ್ಲ. ಏಕೆಂದರೆ ಎರಡು ಪರೀಕ್ಷೆಗಳಲ್ಲಿ ತನ್ನ ಅತ್ಯುತ್ತಮ ಅಂಕವನ್ನು ಉಳಿಸಿಕೊಳ್ಳಲು ವಿದ್ಯಾರ್ಥಿಗೆ ಆಯ್ಕೆ ಇರುವುದಿಲ್ಲ. ಹೀಗಾಗಿ ಸುಧಾರಣಾ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ 1, 2 ಮತ್ತು 3 ಪರೀಕ್ಷೆಗಳಲ್ಲಿ ಗಳಿಸಿದ ವಿಷಯವಾರು ಅಂಕವನ್ನು ಉಳಿಸಿಕೊಳ್ಳಲು ಅವಕಾಶವನ್ನು ಒದಗಿಸಿದಂತಾಗುತ್ತದೆ ಎಂದು ಅದು ತಿಳಿಸಿದೆ.
ವಿದ್ಯಾರ್ಥಿಗಳ ಕಲಿಕೆಯ ವೇಗ ಮತ್ತು ಶೈಲಿಯು ವಿಭಿನ್ನವಾಗಿದ್ದು, 1, 2 ಮತ್ತು 3 ಪರೀಕ್ಷೆಗಳನ್ನು ನಡೆಸುವುದರಿಂದ ಅವರ ಕಲಿಕೆಯ ವೇಗಕ್ಕೆ ಹೊಂದಿಕೊಳ್ಳಲು ಮತ್ತು ಸಮಯದ ನಿರ್ಬಂಧಗಳಿಂದ ಉಂಟಾಗುವ ಒತ್ತಡವನ್ನು ಕಡಿಮೆ ಮಾಡಲು ಅದು ಸಹಾಯವಾಗಬಹುದು ಎಂದು ವಾರ್ಷಿಕ ಪರೀಕ್ಷೆ ಶಾಲಾ ಶಿಕ್ಷಣ ಮಂಡಳಿ ಪ್ರಕಟಣೆ ಹೇಳಿದೆ.
ಪೂರಕ ಪರೀಕ್ಷೆ ಎಂಬ ಹೆಸರಿನ ಬದಲಿಗೆ ವಾರ್ಷಿಕ ಪರೀಕ್ಷೆ 1, 2 ಮತ್ತು 3 ಎಂದು ಮೂರು ಅವಕಾಶಗಳನ್ನು ನೀಡುವ ಮೂಲಕ ವಿದ್ಯಾರ್ಥಿಯ ಒಟ್ಟಾರೆ ಕಾರ್ಯಕ್ಷಮತೆಯನ್ನು ಮತ್ತು ಸಕಾರಾತ್ಮಕ ಮನೋಭಾವವನ್ನು ಉತ್ತೇಜಿಸಿದಂತಾಗುತ್ತದೆ.
ಈ ಹಿನ್ನಲೆಯಲ್ಲಿ ಮಂಡಳಿಯಿಂದ ಮೂರು ವಾರ್ಷಿಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ವಾರ್ಷಿಕ ಪರೀಕ್ಷೆ ಶಾಲಾ ಶಿಕ್ಷಣ ಮಂಡಳಿ ಪ್ರಕಟಣೆ ಹೇಳಿದೆ.
ಪರೀಕ್ಷೆಗಳ ಸಂಭವನೀಯ ವೇಳಾಪಟ್ಟಿ ಹೀಗಿದೆ.
ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯ ಸಂಭವನೀಯ ವೇಳಾಪಟ್ಟಿ
ಪರೀಕ್ಷೆ -1: ಮಾರ್ಚ್ 30 ರಿಂದ ಏಪ್ರಿಲ್ 15 (ಮೇ 8 ಕ್ಕೆ ಫಲಿತಾಂಶ, ಮೇ 23 ಕ್ಕೆ ಮೌಲ್ಯಮಾಪನ ಫಲಿತಾಂಶ ಪ್ರಕಟ)
ಪರೀಕ್ಷೆ -2: ಜೂನ್ 12 ರಿಂದ ಜೂನ್ 19 (ಜೂನ್ 29 ಕ್ಕೆ ಫಲಿತಾಂಶ ಪ್ರಕಟ, ಜುಲೈ 10 ರಂದು ಮರು ಮೌಲ್ಯಮಾಪನದ ಫಲಿತಾಂಶ ಪ್ರಕಟ)
ಪರೀಕ್ಷೆ -3: ಜೂನ್ 29 ರಿಂದ ಆಗಸ್ಟ್ 5 (ಆಗಸ್ಟ್ 19 ಫಲಿತಾಂಶ ಪ್ರಕಟ, ಆಗಸ್ಟ್ 26 ಮರುಮೌಲ್ಯಮಾಪನಾ ಫಲಿತಾಂಶ ಪ್ರಕಟ)
ದ್ವಿತೀಯ ಪಿಯುಸಿ ಪರೀಕ್ಷೆಯ ಸಂಭವನೀಯ ವೇಳಾಪಟ್ಟಿ
ಪರೀಕ್ಷೆ -1: ಮಾರ್ಚ್ 1 ರಿಂದ ಮಾರ್ಚ್ 25 ( ಏಪ್ರಿಲ್ 22 ಫಲಿತಾಂಶ ಪ್ರಕಟ, ಮೇ 10 ಮರುಮೌಲ್ಯಮಾಪನ ಫಲಿತಾಂಶ)
ಪರೀಕ್ಷೆ -2: ಮೇ 15 ರಿಂದ ಜೂನ್ 25 (ಜೂನ್ 21 ಫಲಿತಾಂಶ ಪ್ರಕಟ, ಜೂನ್ 29 ಮರುಮೌಲ್ಯಮಾಪನ ಫಲಿತಾಂಶ)
ಪರೀಕ್ಷೆ -3: ಜುಲೈ 12 ರಿಂದ ಜುಲೈ 30 (ಆಗಸ್ಟ್ 16 ಕ್ಕೆ ಫಲಿತಾಂಶ ಪ್ರಕಟ, ಮೇ.23 ಮರುಮೌಲ್ಯಮಾಪನದ ಫಲಿತಾಶ ಪ್ರಕಟ)