ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ವತಿಯಿಂದ ಕನ್ನಡ ಕಾದಂಬರಿ ಲೋಕದ ಮೇರು ಪರ್ವ, ಪದ್ಮಭೂಷಣ, ಸರಸ್ವತಿ ಸಮ್ಮಾನ ಪುರಸ್ಕೃತ ಪ್ರೊ.ಎಸ್. ಎಲ್. ಭೈರಪ್ಪನವರ ನಿಧನಕ್ಕೆ ಸಂತಾಪ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ವಿಭಾಗದ ಮುಖ್ಯಸ್ಥ ಡಾ ಮಹೇಶ ಗಾಜಪ್ಪನವರ ಅವರು ಭೈರಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸಾರಸ್ವತ ಲೋಕದ ಅನರ್ಘ ರತ್ನ ಎಸ್. ಎಲ್. ಭೈರಪ್ಪ ಅವರ ಅಗಲಿಕೆಗೆ ಇಡೀ ಭಾರತವೇ ಸಂತಾಪವನ್ನು ವ್ಯಕ್ತಪಡಿಸಿದೆ. ಕನ್ನಡ ಸಾಹಿತ್ಯದಲ್ಲಿ ಮಾತ್ರವಲ್ಲ, ಇಡೀ ಭಾರತದಲ್ಲಿ ಭೈರಪ್ಪನವರ ಕಾದಂಬರಿಗಳಿಗೆ ವ್ಯಾಪಕವಾದ ಜನಪ್ರಿಯತೆ ಇರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಭಾರತದ ಎಲ್ಲ ಭಾಷೆಗಳಿಗೂ ಅವರ ಕಾದಂಬರಿಗಳು ಅನುವಾದಗೊಂಡಿದ್ದು, ಸಮಸ್ತ ಭಾರತ ಅವರನ್ನು ಕಾದಂಬರಿಗಳ ಮೂಲಕ ಮುಖಾಮುಖಿಯಾಗಿದೆ. ತಮ್ಮ ಕೃತಿಗಳ ಮೂಲಕ ಕನ್ನಡ ಸಾಂಸ್ಕೃತಿಕ ಲೋಕವನ್ನು ಇಡೀ ಭಾರತಕ್ಕೆ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಆಪ್ತ ಬಳಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ನುಡಿ ನಮನ ಅರ್ಪಿಸಿದರು.
ವಿಭಾಗದ ಅಧ್ಯಾಪಕರಾದ ಪ್ರೊ. ಗುಂಡಣ್ಣ ಕಲಬುರ್ಗಿ, ಡಾ. ಗಜಾನನ ನಾಯ್ಕ, ಡಾ. ಶೋಭಾ ನಾಯಕ, ಡಾ. ಪಿ. ನಾಗರಾಜ, ಡಾ ಹನುಮಂತಪ್ಪ ಸಂಜೀವಣ್ಣನವರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.