ಬೆಳಗಾವಿ: ನಾವು ಮಾಡುವ ಕೆಲಸದಿಂದ ನಮ್ಮ ವ್ಯಕ್ತಿತ್ವ ಪರಿಚಯವಾಗಬೇಕು. ನಾವು ಎಷ್ಟು ದಿವಸ ಕೆಲಸ ಮಾಡಿದ್ದೇವೆ ಎನ್ನುವುದು ಮುಖ್ಯವಲ್ಲ ; ನಮ್ಮ ಕೆಲಸದಿಂದ ನಮ್ಮ ವ್ಯಕ್ತಿತ್ವ ಮತ್ತು ಸಂಸ್ಥೆ ಎಷ್ಟು ಎತ್ತರಕ್ಕೆ ಏರಿದೆ ಎಂಬುದು ಮುಖ್ಯ. ವ್ಯಕ್ತಿಯ ಕಾಯಕದಲ್ಲಿ ಸಂಸ್ಥೆಯ ಭವಿಷ್ಯ ಅಡಗಿದೆ ಎಂದು ವಿಶ್ರಾಂತ ಕುಲಪತಿ ಪ್ರೊ. ಎಂ. ರಾಮಚಂದ್ರಗೌಡ ಹೇಳಿದರು.
ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮತ್ತು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಬೋಧಕೇತರ ನೌಕರರ ಸಂಘದ ಸಹಯೋಗದಲ್ಲಿ ಫೆ. 22 ರಂದು ಸಂಗೊಳ್ಳಿ ರಾಯಣ್ಣ ಕಾಲೇಜಿನ ಸಭಾಂಗಣದಲ್ಲಿ ಶೈಕ್ಷಣಿಕ ಮತ್ತು ಆಡಳಿತ ಸುಧಾರಣೆಗಳು ಎಂಬ ವಿಷಯದ ಕುರಿತು ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವವಿದ್ಯಾಲಯ ಬಹುಮುಖ್ಯವಾಗಿ ಅವಲಂಬನೆಯಾಗಿರುವುದು ಬೋಧಕೇತರ ಸಿಬ್ಬಂದಿ ಮೇಲೆ. ವಿಶ್ವವಿದ್ಯಾಲಯದ ಶ್ರೇಯೋಭಿವೃದ್ಧಿಯು ಬೋಧಕೇತರ ಸಿಬ್ಬಂದಿ ಮೇಲೆ ನಿಂತಿದೆ. ಬೋಧಕೇತರ ಸಿಬ್ಬಂದಿ ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ಕಾನೂನಿನ ನೀತಿ ನಿಯಮಗಳಿಗೆ ಬದ್ದರಾಗಿ ಕೆಲಸ ನಿರ್ವಹಿಸಬೇಕು. ಬೋಧಕೇತರ ಸಿಬ್ಬಂದಿಗಳು ವಾಹನದ ಚಕ್ರಗಳಿದ್ದಂತೆ. ಚಕ್ರಗಳು ಇಲ್ಲದೇ ವಾಹನ ಹೇಗೆ ಚಲಿಸಲು ಸಾಧ್ಯವಿಲ್ಲವೋ ಹಾಗೇ ಬೋಧಕೇತರ ಸಿಬ್ಬಂದಿಗಳಿಲ್ಲದೆ ವಿಶ್ವವಿದ್ಯಾಲಯವಾಗಲಿ, ಒಂದು ಸಂಸ್ಥೆಯಾಗಲಿ ಚಲಿಸಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕುಲಪತಿ ಸಿ. ಎಂ. ತ್ಯಾಗರಾಜ ಅವರು ರಾಜ್ಯದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅತಿ ದೊಡ್ಡ ವಿಶ್ವವಿದ್ಯಾಲಯ. ಬೇರೆ ವಿಶ್ವವಿದ್ಯಾಲಯಕ್ಕೆ ಹೋಲಿಸಿದರೆ ನಮ್ಮ ವಿಶ್ವವಿದ್ಯಾಲಯದಲ್ಲಿ ಅತೀ ಹೆಚ್ಚು ಬೋಧಕೇತರ ಸಿಬ್ಬಂದಿಗಳ ನೇಮಕವಾಗಿದೆ. ಬೋಧಕೇತರ ಸಿಬ್ಬಂದಿಗಳು ಕೇವಲ ಕೆಲಸದ ಬಗ್ಗೆ ಮಾತ್ರ ಕಾಳಜಿ ವಹಿಸದೇ ತಮ್ಮ ಆರೋಗ್ಯದ ಬಗ್ಗೆಯು ಸ್ವಲ್ಪ ಕಾಳಜಿ ವಹಿಸುವುದು ಬಹಳ ಮುಖ್ಯ. ಪ್ರತಿಯೊಬ್ಬ ಸಿಬ್ಬಂದಿಯು ತಾನು ಮಾಡುವ ಕೆಲಸದಲ್ಲಿ ತೃಪ್ತಿಯ ಮನೋಭಾವ ಹೊಂದಬೇಕು. ಇಂದಿನ ಕಾಯಕವನ್ನು ಇಂದೇ ಮಾಡಿ ಮುಗಿಸುತ್ತೇನೆ ಎಂಬ ಸಂಕಲ್ಪ ಹೊಂದಿರಬೇಕು. ನಾವು ಕೆಲಸ ಮಾಡಿ ಬಿಟ್ಟು ಹೋದ ಮೇಲೆಯೂ ನಮ್ಮ ಕೆಲಸಗಳು ನಮ್ಮನ್ನು ನೆನಪಿಸಬೇಕು ಎಂದು ಹೇಳಿದರು.
ಕುಲಸಚಿವ ಸಂತೋಷ ಕಾಮಗೌಡ ಮಾತನಾಡಿ, ಬೋಧಕೇತರ ಸಿಬ್ಬಂದಿಗಳು ಹೊಸ ಬದಲಾವಣೆಗೆ ಒಗ್ಗಿಕೊಳ್ಳಬೇಕು. ಅದರ ಜೊತೆಗೆ ಹೊಸ ತಂತ್ರಜ್ಞಾನವನ್ನು ಕರಗತ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದರು.
ಉಪಕುಲಸಚಿವ ಡಾ ಡಿ. ಕೆ. ಕಾಂಬಳೆ ಪ್ರಾಸ್ತಾವಿಕ ನುಡಿಗಳನ್ನಾಡಿ, ಉತ್ತಮ ಜ್ಞಾನ ಮತ್ತು ಕೌಶಲ್ಯ ಹೊಂದಿದ ಸಿಬ್ಬಂದಿ ವರ್ಗವಿದ್ದಲ್ಲಿ ಆಡಳಿತ ಯಂತ್ರ ಸುಲಲಿತವಾಗಿ ಸಾಗುತ್ತದೆ ಎಂದರು.
ಹಣಕಾಸು ಅಧಿಕಾರಿ ಎಂ. ಎ. ಸಪ್ನಾ, ಸಿಂಡಿಕೇಟ್ ಸದಸ್ಯರಾದ ವಿನೀತ ಜೋಶಿ, ಮಹಾಂತೇಶ ಕಂಬಾರ, ಸಂಗೊಳ್ಳಿ ರಾಯಣ್ಣ ಕಾಲೇಜಿನ ಪ್ರಾಚಾರ್ಯ ಎಂ. ಜಿ. ಹೆಗಡೆ ಉಪಸ್ಥಿತರಿದ್ದರು. ಕುವೆಂಪು, ಬಾಗಲಕೋಟೆ, ಶಿವಮೊಗ್ಗ, ತುಮಕೂರು, ಮೈಸೂರು ಹಾಗೂ ಇನ್ನಿತರ ವಿಶ್ವವಿದ್ಯಾಲಯದ ಆಡಳಿತ ಅಧಿಕಾರಿಗಳು ಮತ್ತು ಬೋಧಕತೇತರ ಸಿಬ್ಬಂದಿಗಳು ಹಾಗೂ ರಾಚವಿ ಸಂಯೋಜಿತ ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳ ಕಾಲೇಜುಗಳ ಬೋಧಕೇತರ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.
ಸಹಾಯಕ ಕುಲಸಚಿವೆ ಡಾ. ರಶ್ಮಿ ಪೈ ಪ್ರಾರ್ಥಿಸಿದರು, ಉಪ ಕುಲಸಚಿವೆ ಗೌರಮ್ಮ ಪಾಟೀಲ ವಂದಿಸಿದರು, ಸಿಬ್ಬಂದಿ ರವಿ ಒಂಟಗೋಡಿ ಸ್ವಾಗತಿಸಿದರು, ಶೀತಲ ಅಕ್ಕೋಳೆ ನಿರೂಪಿಸಿದರು.