ಬೆಂಗಳೂರು: ಅನುದಾನರಹಿತ ಖಾಸಗಿ ಶಾಲೆಗಳ ನವೀಕರಣಕ್ಕೆ ವಿಧಿಸಿರುವ ಷರತ್ತುಗಳಲ್ಲಿರುವ ಗೊಂದಲ ಸರಿಪಡಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು 15 ದಿನಗಳೊಳಗೆ ಈಡೇರಿಸಬೇಕು. ಇಲ್ಲದಿದ್ದರೆ ಆಗಸ್ಟ್ 21ರಿಂದ ರಾಜ್ಯಾದ್ಯಂತ ಖಾಸಗಿ ಅನುದಾನರಹಿತ ಶಾಲೆ ಗಳನ್ನು ಬಂದ್ ಮಾಡುವುದಾಗಿ ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಎಚ್ಚರಿಕೆ ನೀಡಿದೆ. ಸೋಮವಾರ ಪತ್ರಿಕಾಗೋಷ್ಠಿ ಯಲ್ಲಿ ರುಪ್ಸಾ ರಾಜ್ಯಾಧ್ಯಕ್ಷ ಡಾ. ಹಾಲನೂರು ಲೇಪಾಕ್ಷಿ, ಶಾಲಾ ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳ
ಅಭಿವೃದ್ಧಿಯನ್ನು ಕಡೆಗಣಿಸುತ್ತಿದೆ. ಖಾಸಗಿ ಶಾಲೆಗಳ ನವೀಕರಣಕ್ಕೆ ಇಲಾಖೆ ನಿಗದಿಪಡಿಸಿರುವ 64 ಅಂಶಗಳು ಅವೈಜ್ಞಾನಿಕವಾಗಿವೆ. ಶಾಲೆಗಳ ಪರವಾನಗಿ ನವೀಕರಣ ಅಸಾಧ್ಯವಾಗಿದ್ದು, ಕೂಡಲೇ ಷರತ್ತುಗಳನ್ನು ಸರಳೀಕರಿಸಬೇಕು ಎಂದು ಒತ್ತಾಯಿಸಿದರು. ಬಿಬಿಎಂಪಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಮಹಾನಗರ ಪಾಲಿಕೆ, ನಗರ ಸಭೆಗಳು ಸೇವಾ ತೆರಿಗೆ ಹಾಗೂ ಇತರೆ ತೆರಿಗೆಗಳನ್ನು ಖಾಸಗಿ ಶಾಲೆಗಳಿಂದ ಸಂಗ್ರಹಿಸುತ್ತಿವೆ. ಈ ಬಗ್ಗೆ ಇಲಾಖೆಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.