ಎಲ್ಲ ಜವಾಬ್ದಾರಿ ಸಮರ್ಥವಾಗಿ ನಿರ್ವಹಿಸುವ ಲಕ್ಷ್ಮೀ ಹೆಬ್ಬಾಳಕರ್ ಗೆ ಮುಂದಿನ ಕಾಂಗ್ರೆಸ್ ಸರಕಾರದಲ್ಲಿ ಉನ್ನತ ಸ್ಥಾನ – ಪೃಥ್ವಿರಾಜ ಚವ್ಹಾಣ
ಬೆಳಗಾವಿ :
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ ಚವ್ಹಾಣ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ್ ಪರ ಮಂಗಳವಾರ ಸಂಜೆ ಹಿಂಡಲಗಾದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ತನ್ಮೂಲಕ ಬಿಜೆಪಿ ಅಭ್ಯರ್ಥಿಯ ತವರಿನಲ್ಲೇ ಕಾಂಗ್ರೆಸ್ ಅದ್ಧೂರಿ ಶಕ್ತಿ ಪ್ರದರ್ಶನ ತೋರಿಸಿದೆ.
ಹಿಂಡಲಗಾ ಮಹಾಲಕ್ಷ್ಮೀ ಮಂದಿರದಿಂದ ರೋಡ್ ಶೋ ನಡೆಸಿದ ಪೃಥ್ವಿರಾಜ ಚವ್ಹಾಣ, ಬಿಜೆಪಿ ಸರಕಾರ ಶೇ.40ರಷ್ಟು ಕಮೀಷನ್ ಪಡೆದು ಕರ್ನಾಟಕವನ್ನು ವಿನಾಶದತ್ತ ಕೊಂಡೊಯ್ದಿದಿದೆ. ಚುನಾವಣೆ ಬಂದಾಗ ಜನ ಬಳಿ ಬರುತ್ತಿದ್ದಾರೆ. ನಾನು 2018ರಿಂದ ಲಕ್ಷ್ಮೀ ಹೆಬ್ಬಾಳಕರ್ ಅವರ ಕೆಲಸವನ್ನು ನೋಡುತ್ತಿದ್ದೇನೆ. ಸರಕಾರ ನಮ್ಮದಿಲ್ಲದಿದ್ದರೂ ಅಪಾರ ಪ್ರಮಾಣದಲ್ಲಿ ಅನುದಾನ ತಂದಿದ್ದಾರೆ. ಕ್ಷೇತ್ರವನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಹಿಂದಿನಿಂದಲೂ ಕಾಂಗ್ರೆಸ್ ಪಕ್ಷವಿರಲಿ, ಮತದಾರರಿರಲಿ ತಮಗೆ ವಹಿಸಿದ ಎಲ್ಲ ಜವಾಬ್ದಾರಿಗಳನ್ನು ಲಕ್ಷ್ಮೀ ಹೆಬ್ಬಾಳಕರ್ ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಾರೆ. ಮುಂದೆ ಕರ್ನಾಟಕದಲ್ಲಿ ಬರಲಿರುವ ಕಾಂಗ್ರೆಸ್ ಸರಕಾರದಲ್ಲೂ ಹೆಬ್ಬಾಳಕರ್ ಅವರಿಗೆ ದೊಡ್ಡ ಸ್ಥಾನ ಸಿಗಲಿದೆ ಎಂದು ಹೇಳಿದರು.
ಇದಕ್ಕೂ ಮೊದಲು ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೃಥ್ವಿರಾಜ ಚವ್ಹಾಣ, ಬಿಜೆಪಿಯದ್ದು ಡಬಲ್ ಎಂಜಿನ್ ಭ್ರಷ್ಟಾಚಾರದ ಸರಕಾರ ಎಂದು ಕುಟುಕಿದರು. ಲೋಕಸಭಾ ಚುನಾವಣೆಗೆ ಕೇವಲ ಒಂದು ವರ್ಷವಿರುವುದರಿಂದ ಕರ್ನಾಟಕದ ಈ ಚುನಾವಣೆ ದೇಶದ ಭವಿಷ್ಯದ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ. ಹಾಗಾಗಿ ಯೋಚಿಸಿ ಮತನೀಡಬೇಕು ಎಂದು ವಿನಂತಿಸಿದರು.
2018ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಜನಮತ ಬಂದಿತ್ತು. ಆದರೆ ಬಹುಮತವಿಲ್ಲದ ಕಾರಣ ಜೆಡಿಎಸ್ ಜೊತೆ ಸರಕಾರ ರಚಿಸಿತ್ತು. ಆದರೆ ಬಿಜೆಪಿ ವರ್ಷದಲ್ಲೇ ಸರಕಾರವನ್ನು ಹೈಜಾಕ್ ಮಾಡಿ ರಾಜ್ಯವನ್ನೇ ನಾಶ ಮಾಡಿತು ಎಂದು ಕಿಡಿಕಾರಿದರು.
ಗುತ್ತಿಗೆದಾರ ಸಂಘದವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು, ಕೇಂದ್ರ ಸಚಿವ ಗಿರಿರಾಜ ಸಿಂಗ್ಗೂ ಸಹ ಪತ್ರ ಬರೆದಿದ್ದರು. ಸಚಿವರಾದ ಕೆ.ಎಸ್.ಈಶ್ವರಪ್ಪ ಮೇಲೂ ಆರೋಪ ಬಂದಿತ್ತು. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಚಾರಣೆ ನಡೆದ ಬಳಿಕ ಕೆ.ಎಸ್.ಈಶ್ವರಪ್ಪಗೆ ಕ್ಲೀನ್ಚಿಟ್ ನೀಡಿದರು. ಕರ್ನಾಟಕದಲ್ಲಿ ಭ್ರಷ್ಟಾಚಾರ ಭುಗಿಲೆದ್ದಿದ್ದು ಬಹಿರಂಗವಾಗಿ 40 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದರು ಎಂದು ಆರೋಪಿಸಿದರು.
ಪ್ರಧಾನಿ ಮೋದಿ ಚುನಾವಣೆ ವೇಳೆ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಪ್ರವಾಹ ಬಂದಾಗ ಕರ್ನಾಟಕ ಪ್ರವಾಸ ಏಕೆ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದ ಪೃಥ್ವಿರಾಜ್, ಕರ್ನಾಟಕದ ಬಗ್ಗೆ ಪ್ರಧಾನಿ ಮೋದಿಗೆ ಎಷ್ಟು ಕಾಳಜಿ ಇದೆ ಎಂದು ಜನರಿಗೆ ಗೊತ್ತು. ಕರ್ನಾಟಕದಲ್ಲಿ ಆಪರೇಷನ್ ಕಮಲ ಮಾಡಲು ಪ್ರಮುಖ ಪಾತ್ರ ವಹಿಸಿದ್ದೇ ಪ್ರಧಾನಿ ಮೋದಿ. ಕಾಂಗ್ರೆಸ್ ಜನಾದೇಶ ಕದ್ದು, ಕರ್ನಾಟಕದಲ್ಲಿ ಬಿಜೆಪಿ ಕುದುರೆ ವ್ಯಾಪಾರ ಮಾಡಿತು. ಭಾರತದ ಪ್ರಜಾಪ್ರಭುತ್ವ ಒಡೆಯುವ ಕೆಲಸ ಆಯ್ತು. ಇದಕ್ಕೆಲ್ಲ ಹೊಣೆ ಪ್ರಧಾನಿ ಮೋದಿ ಎಂದು ಆರೋಪಿಸಿದರು.
ಶಾಸಕಿ, ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಹಾಗೂ ಹಲವಾರು ಮುಖಂಡರು ಇದ್ದರು.