ಕೋಲ್ಕತ್ತ/ನವದೆಹಲಿ : ಗುಜರಾತ್ನ ಗಾಂಧಿನಗರದಲ್ಲಿ ತಾಯಿ ಹೀರಾಬೆನ್ ಅಂತ್ಯಸಂಸ್ಕಾರ ನೆರವೇರಿಸಿ ಪ್ರಧಾನಿ ನರೇಂದ್ರ ಮೋದಿ ಕರ್ತವ್ಯಕ್ಕೆ ಮರಳಿದ್ದಾರೆ.
ಹೌರಾ ಮತ್ತು ನ್ಯೂ ಜಲಪಾಯ್ಗುರಿ ನಡುವಿನ ‘ವಂದೇ ಭಾರತ್ ಎಕ್ಸ್ಪ್ರೆಸ್’ ರೈಲಿಗೆ ಚಾಲನೆ ಸೇರಿದಂತೆ ಪಶ್ಚಿಮ ಬಂಗಾಳದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.
ಇಂದು ಬೆಳಿಗ್ಗೆ ಅವರು ₹7,800 ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಬೇಕಿತ್ತು. ತಾಯಿ ನಿಧನದ ಹಿನ್ನೆಲೆಯಲ್ಲಿ ಅವರು ದಿಢೀರ್ ಅಹಮದಾಬಾದ್ಗೆ ತೆರಳಿದ್ದರು.
‘ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ನಿಗದಿತ ಕಾರ್ಯಕ್ರಮಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನೆರವೇರಿಸಲಿದ್ದಾರೆ. ರಾಷ್ಟ್ರೀಯ ಗಂಗಾ ಪರಿಷತ್ ಸಭೆ ಮತ್ತು ಪ್ರಮುಖ ಸಾರಿಗೆ ಸಂಪರ್ಕಕ್ಕೆ ಸಂಬಂಧಿಸಿದ ಕಾಮಗಾರಿಗಳ ಉದ್ಘಾಟನೆಯಲ್ಲಿ ಮೋದಿ ಭಾಗವಹಿಸಲಿದ್ದಾರೆ’ ಎಂದು ಪ್ರಧಾನಿ ಸಚಿವಾಲಯ ಟ್ವೀಟಿಸಿದೆ.
ಇದರಲ್ಲಿ ₹2,550 ಕೋಟಿ ವೆಚ್ಚದ ಒಳಚರಂಡಿ ಮೂಲಸೌಕರ್ಯ ಯೋಜನೆಗಳು ಸೇರಿವೆ.
ಕೋಲ್ಕತ್ತಾ ಮೆಟ್ರೋ ರೈಲು ಪರ್ಪಲ್ ಲೈನ್ನ ಜೋಕಾ-ತಾರಾಟಾಲಾ ವಿಸ್ತರಣೆ ಮತ್ತು ನ್ಯೂ ಜಲಪಾಯ್ಗುರಿ ರೈಲು ನಿಲ್ದಾಣದಲ್ಲಿ ಪುನರಾಭಿವೃದ್ಧಿ ಕೆಲಸಗಳು ಸೇರಿದಂತೆ ಇತರೆ ರೈಲ್ವೆ ಯೋಜನೆಗಳು ಉದ್ಘಾಟನೆಗೊಳ್ಳಲಿವೆ.
ಬಿಜೆಪಿಯ ವಿಚಾರವಾದಿ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಹೆಸರಿನ ರಾಷ್ಟ್ರೀಯ ನೀರು ಮತ್ತು ನೈರ್ಮಲ್ಯ ಸಂಸ್ಥೆ ಉದ್ಘಾಟನೆಯಾಗಲಿದೆ.
ಮೋದಿ ಅವರು ಕೋಲ್ಕತ್ತಾದಲ್ಲಿ ರಾಷ್ಟ್ರೀಯ ಗಂಗಾ ಪರಿಷತ್ತಿನ (ಎನ್ಜಿಸಿ) ಎರಡನೇ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ಅಗ್ನಿ ಸ್ಪರ್ಶ ಮಾಡಿದ ಪ್ರಧಾನಿ ನರೇಂದ್ರ ಮೋದಿ :
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹಿರಾಬೆನ್ ಅವರ ಅಂತ್ಯ ಸಂಸ್ಕಾರ ಗಾಂಧಿನಗರದಲ್ಲಿರುವ ಚಿತಾಗಾರದಲ್ಲಿ ನೆರವೇರಿತು. ತಾಯಿಯ ಪಾರ್ಥಿವ ಶರೀರದ ಅಂತಿಮ ಯಾತ್ರೆ ವೇಳೆ ಹೆಗಲು ಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರು ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.
ಶತಾಯುಷಿ ಹೀರಾಬೆನ್ (100) ಅವರು ಅನಾರೋಗ್ಯದಿಂದಾಗಿ ಶುಕ್ರವಾರ ಬೆಳಗಿನ ಜಾವ 3.39ಕ್ಕೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಅಹಮದಾಬಾದ್ನ ಯು.ಎನ್.ಮೆಹ್ತಾ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಆ್ಯಂಡ್ ರೀಸರ್ಚ್ ಸೆಂಟರ್ ಆಸ್ಪತ್ರೆಗೆ ಬುಧವಾರ ದಾಖಲಿಸಲಾಗಿತ್ತು.
ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಗಾಂಧಿನಗರದ ಹೊರವಲಯದಲ್ಲಿರುವ ರಾಯ್ಸನ್ ಗ್ರಾಮಕ್ಕೆ ಆಗಮಿಸಿದ ಮೋದಿ ಅವರು, ಅಂತಿಮ ದರ್ಶನ ಪಡೆದರು.
‘ನೂರು ವರ್ಷಗಳ ಶ್ರೇಷ್ಠ ಪ್ರಯಾಣ ಮುಗಿದಿದೆ. ಅಮ್ಮನಲ್ಲಿ ನಾನು ತ್ರಿಮೂರ್ತಿಗಳನ್ನು ಕಂಡಿದ್ದೇನೆ. ಅವರ ಜೀವನವು ತಪಸ್ವಿಯ ಪ್ರಯಾಣವಾಗಿತ್ತು. ನಿಷ್ಕಾಮ ಕರ್ಮಯೋಗಿಯ ಜೀವನ ಮತ್ತು ಮೌಲ್ಯಗಳಿಗೆ ಬದ್ಧವಾದ ಬದುಕಿನ ಸಂಕೇತವಾಗಿದ್ದರು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, ಅವರ (ಅಮ್ಮನ) 100ನೇ ವರ್ಷದ ಹುಟ್ಟುಹಬ್ಬದಂದು ಭೇಟಿಯಾಗಿದ್ದಾಗ, ಸದಾ ನೆನಪಿನಲ್ಲಿ ಉಳಿಯುವಂತಹ ಮಾತನ್ನು ಹೇಳಿದ್ದರು. ‘ನಿನ್ನ ತಲೆಯಿಂದ ಕೆಲಸ ಮಾಡು. ಜೀವನವನ್ನು ಶುದ್ಧತೆಯೊಂದಿಗೆ ಬದುಕು’ ಎಂದಿದ್ದರು ಎಂದು ಸ್ಮರಿಸಿದ್ದಾರೆ.
ನೂರು ವರ್ಷಗಳ ಶ್ರೇಷ್ಠ ಪ್ರಯಾಣ ಮುಗಿದಿದೆ. ಅಮ್ಮನಲ್ಲಿ ನಾನು ತ್ರಿಮೂರ್ತಿಗಳನ್ನು ಕಂಡಿದ್ದೇನೆ. ಅವರ ಜೀವನವು ತಪಸ್ವಿಯ ಪ್ರಯಾಣವಾಗಿತ್ತು. ನಿಷ್ಕಾಮ ಕರ್ಮಯೋಗಿಯ ಜೀವನ ಮತ್ತು ಮೌಲ್ಯಗಳಿಗೆ ಬದ್ಧವಾದ ಬದುಕಿನ ಸಂಕೇತವಾಗಿದ್ದರು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.