ಅರಬ್ ಸಂಯುಕ್ತ ಸಂಸ್ಥಾನದ (ಯುಎಇ) ರಾಜಧಾನಿ ಅಬುಧಾಬಿಯಲ್ಲಿ ಭವ್ಯವಾಗಿ ನಿರ್ಮಾಣಗೊಂಡಿರುವ ‘ಬೋಚಾಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ ’(ಬಿಎಪಿಎಸ್) ಹಿಂದೂ ದೇವಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಪಶ್ಚಿಮ ಏಷ್ಯಾದಲ್ಲಿಯೇ ಯುಎಇಯಲ್ಲಿ ಕಲ್ಲಿನಿಂದ ನಿರ್ಮಿಸಲಾಗಿರುವ ಮೊದಲ ಹಿಂದೂ ದೇವಾಲಯವಿದು.
ದೇವಸ್ಥಾನದ ಸ್ವಾಮೀಜಿಗಳು, ಅರ್ಚಕರು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು. ಕೆಲಹೊತ್ತು ಮೋದಿ ಸ್ವಾಮಿಗಳ ಜೊತೆ ಆತ್ಮೀಯವಾಗಿ ಮಾತನಾಡಿದರು. ಬಳಿಕ ದೇವಸ್ಥಾನದೊಳಗೆ ಪ್ರವೇಶಿಸಿ ಆರತಿ ಬೆಳಗಿ ಪೂಜೆ ಸಲ್ಲಿಸಿದರು. ಈ ಕುರಿತು ಸುದ್ದಿಸಂಸ್ಥೆ ಎಎನ್ಐ ಟ್ವೀಟ್ ಮಾಡಿದೆ. ಪ್ರಧಾನಿ ಮೋದಿ ಅವರು ಎರಡು ದಿನ ಕತಾರ್ ಹಾಗೂ ಯುಎಇ ಪ್ರವಾಸ ಕೈಗೊಂಡಿದ್ದರು. ಇಂದು ಸಂಜೆ ದೆಹಲಿಗೆ ವಾಪಸ್ ಆಗಲಿದ್ದಾರೆ.
ಅಬುಧಾಬಿ :
ಭಾರತದಲ್ಲಿ 500 ವರ್ಷಗಳ ಬಳಿಕ ಆಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೊಂಡಿದ್ದರೆ, ಅತ್ತ ಅರಬ್ ಸಂಸ್ಥಾನ ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಸ್ಥಾನ ಉದ್ಘಾಟನೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅಮೃತಹಸ್ತದಿಂದ ಬೋಚಾಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ ಮಂದಿರವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ವಿಶ್ವದ 3ನೇ ಅತೀ ದೊಡ್ಡ ಹಿಂದೂ ದೇಗುಲವನ್ನು ಬರೋಬ್ಬರಿ 700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ಬಾಪ್ಸ್ ಮಂದಿರದ ಒಳ ಪ್ರವೇಶಕ್ಕೂ ಮೊದಲು ಗಂಗಾ ಜಲವನ್ನು ಸಮರ್ಪಿಸಿದ ಪ್ರಧಾನಿ ಮೋದಿ ಬಳಿಕ ಪೂಜ್ಯ ಸಂತರ ಜೊತೆ ಮಂದಿ ಪ್ರವೇಶಿಸಿದರು. ಮಂದಿರ ಪ್ರವೇಶದ್ವಾರದಲ್ಲಿ ಮಹಾಂತ ಸ್ವಾಮಿ ಮಹರಾಜ್ ಗುರುಗಳಿಗೆ ವಂದಿಸಿದ ಪ್ರಧಾನಿ ಮೋದಿ ಭವ್ಯ ಮಂದಿರ ಒಳ ಪ್ರವೇಶಿಸಿದರು. ಬಳಿಕ ಮಹಾಂತ ಸ್ವಾಮಿ ಮಹಾರಾಜ್ ಸಂತರ ಜೊತೆ ಮಂದಿರ ಉದ್ಘಾಟಿಸಿದರು.
ಸಂತರು, ಸ್ವಾಮೀಜಿಗಳ ಜೊತೆ ಕುಳಿತು ಮಂತ್ರ ಪಠಿಸಿದ ಪ್ರಧಾನಿ ಮೋದಿಗೆ ಸಂತ ಮಹಾರಾಜ ಸ್ವಾಮಿ ಕುಂಕುಮವಿಟ್ಟು, ಲೋಕಾರ್ಪಣೆ ಸಂಕಲ್ಪ ಕೈಗೊಂಡರು. ಬಳಿಕ ವೈಷ್ವಿಕ ಆರತಿ ಬೆಳಗಿದ ಪ್ರಧಾನಿ ಮೋದಿ ಹಾಗೂ ಸಂತರು ಭವ್ಯ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ವಿಶೇಷ ಅಂದರೆ ಲಾಸ್ ಎಂಜಲ್ಸ್ ಸೇರಿದಂತೆ ಅಮೆರಿಕ 6 ಕ್ಕೂಹೆಚ್ಚು ಹಿಂದೂ ಮಂದಿರ, ಕೆನಾಡದಲ್ಲಿನ 2 ಹಿಂದೂ ಮಂದಿರ, ಫ್ರಾನ್ಸ್, ಜರ್ಮನಿ, ಆಸ್ಟ್ರಿಯಾ, ಲಂಡನ್, ಸೌತ್ ಆಫ್ರಿಕಾ, ಬೋಟ್ಸವಾನ, ಜಾಂಬಿಯಾ ಸೇರಿದಂತೆ ವಿಶ್ವದ ಇತರ ದೇಶಗಳಲ್ಲಿರುವ ಹಿಂದೂ ಮಂದಿರದಲ್ಲಿ ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಅಕ್ಷರ ಪುರುಷೋತ್ತಮ ಚರಣಗಳಿಗೆ ಪುಷ್ಪ ಸಮರ್ಪಿಸಿದ ಪ್ರಧಾನಿ ಮೋದಿ, ರಾಧಾ ಕೃಷ್ಣ ಮೂರ್ತಿಗಳಿಗೆ ಪುಷ್ಪ ಸಮರ್ಪಿಸಿದರು. ಬಳಿಕ ಪ್ರಧಾನಿ ನರೇಂದ್ರ ಮೋದಿಗೆ ಮಹಾಂತ ಸ್ವಾಮೀತಿ ಕಮಲ ಪುಷ್ಪಗಳ ಹೂವಿನ ಮಾಲೆ ಮೂಲಕ ಗೌರವ ಸಮರ್ಪಿಸಿದರು.
ಇಲ್ಲಿ ಕೃಷ್ಣ- ರಾಧೆ, ಶಿವ- ಪಾರ್ವತಿ ಮತ್ತು ಸೀತೆ, ರಾಮ, ಲಕ್ಷ್ಮಣ ಹಾಗೂ ಹನುಮಂತ ಸೇರಿ ಬಹುತೇಕ ಎಲ್ಲ ಹಿಂದೂ ದೇವರುಗಳನ್ನು ಪೂಜಿಸಲಾಗುತ್ತದೆ. ಮಂದಿರವು 108 ಅಡಿ ಎತ್ತರ, 262 ಅಡಿ ಉದ್ದ ಮತ್ತು ಮತ್ತು 180 ಅಡಿ ಅಗಲವಿದೆ.ಒಟ್ಟು 27 ಏಕರೆ ಪ್ರದೇಶದಲ್ಲಿ ಈ ಮಂದಿರಕ್ಕಾಗಿ ಯಎಇ ಸರ್ಕಾರ ನೀಡಿದೆ. ಈ ಪೈಕಿ 17 ಏಕರೆ ಪ್ರದೇಶದಲ್ಲಿ ಭವ್ಯ ಮಂದಿರ ನಿರ್ಮಾಣಗೊಂಡಿದೆ. 20000 ಟನ್ ಕಲ್ಲಿನಿಂದ ಈ ಮಂದಿರ ನಿರ್ಮಾಣ ಮಾಡಲಾಗಿದೆ. ಆಯೋಧ್ಯೆ ರಾಮ ಮಂದಿರ ರೀತಿ, ಕಬ್ಬಿಣ ಸೇರಿದಂತೆ ಇತರ ಲೋಹಗಳನ್ನು ಬಳಸಿಲ್ಲ. ದೇಗುಲದ ನಿರ್ಮಾಣ ಕಾರ್ಯದಲ್ಲಿ 2,000 ಭಾರತೀಯ ಶಿಲ್ಪಿಗಳು ಕೆತ್ತನೆ ಕೆಲಸ ಮಾಡಿದ್ದರು.