ಚೆನ್ನೈ: ತಮಿಳುನಾಡಿನ ರಾಮೇಶ್ವರಂಗೆ ಸಂಪರ್ಕ ಕಲ್ಪಿಸಲು ನಿರ್ಮಾಣ ಮಾಡಲಾಗಿರುವ ದೇಶದ ಮೊದಲ ಲಿಫ್ಟ್ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ರಾಮನವಮಿಯ ದಿನ ರವಿವಾರ ಉದ್ಘಾಟಿಸಲಿದ್ದಾರೆ. ಶ್ರೀಲಂಕಾದಿಂದ ರಾಮೇಶ್ವರಂಗೆ ಬರಲಿರುವ ಮೋದಿ ಸೇತುವೆ ಜತೆಗೆ 8,300 ಕೋಟಿ ರೂ. ಮೌಲ್ಯದ ಯೋಜನೆಗಳಿಗೂ ಚಾಲನೆ ನೀಡಲಿದ್ದಾರೆ.
ಸೇತುವೆ ಉದ್ಘಾಟನೆಯ ಜತೆಗೆ ರಾಮೇಶ್ವರಂ-ತಂಬರಂ (ಚೆನ್ನೈ) ನಡುವಿನ ಹೊಸ ರೈಲು ಸೇವೆ ಹಾಗೂ ಈ ಸೇತುವೆ ಮೇಲೆ ಸಾಗುವ ಕರಾವಳಿ ಕಾವಲು ಪಡೆ ಹಡಗಿನ ಓಡಾಟಕ್ಕೆ ಮೋದಿ ಹಸುರು ನಿಶಾನೆ ತೋರಲಿದ್ದಾರೆ. 550 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಾಣ ಮಾಡಲಾಗಿದ್ದು, ಇದು ರಾಮೇಶ್ವರಂ ದ್ವೀಪಕ್ಕೆ ತಮಿಳುನಾಡಿನಿಂದ ರೈಲು ಸಂಪರ್ಕವನ್ನು ಒದಗಿಸುತ್ತದೆ.
ದೇಗುಲಕ್ಕೆ ಮೋದಿ ಭೇಟಿ: ರಾಮೇಶ್ವರಂನಲ್ಲಿನ ನವೀಕರಿಸಲಾಗಿರುವ ರಾಮನಾಥ ಸ್ವಾಮಿ ದೇಗುಲಕ್ಕೂ ಭೇಟಿ ನೀಡಲಿರುವ ಮೋದಿ, ಪೂಜೆ ಸಲ್ಲಿಸಲಿದ್ದಾರೆ. ಬಳಿಕ 8,300 ಕೋಟಿ ರೂ. ಮೌಲ್ಯದ ವಿವಿಧ ರೈಲು ಹಾಗೂ ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎನ್ನಲಾಗಿದೆ.
ರಾಮೇಶ್ವರಂಗೆ ರೈಲು ಸಂಪರ್ಕ ಕಲ್ಪಿಸಲು ನಿರ್ಮಾಣ ಮಾಡಲಾಗಿರುವ ಸೇತುವೆಯಲ್ಲಿ ವರ್ಟಿಕಲ್ ಲಿಫ್ಟ್ ತಂತ್ರಜ್ಞಾನದ ಬದಲು ಸೇತುವೆಯನ್ನೇ ಎತ್ತರಕ್ಕೆ ನಿರ್ಮಿಸಬಹುದಿತ್ತು ಎಂಬ ಪ್ರಶ್ನೆಗಳೂ ಮೂಡಿವೆ. ಇದಕ್ಕೆ ಉತ್ತರಿಸಿರುವ ಪಂಬನ್ ಸೇತುವೆಯ ಓರ್ವ ವಿನ್ಯಾಸಕಾರ, ಕರಾವಳಿ ಪ್ರದೇಶದಲ್ಲಿ ಗಂಟೆಗೆ 40 ಕಿ.ಮೀ.ಗೂ ಹೆಚ್ಚಿನ ವೇಗದಲ್ಲಿ ಗಾಳಿ ಬೀಸುತ್ತಿರುತ್ತದೆ. ಹೀಗಾಗಿ ಎತ್ತರದಲ್ಲಿ ಸೇತುವೆ ನಿರ್ಮಾಣ ಮಾಡುವುದು ಅಪಾಯಕಾರಿಯಾಗಬಹುದು ಎಂದು ಹೇಳಿದ್ದಾರೆ.
ಸೇತುವೆಯ ಮೇಲೆ ರೈಲಿನ ವೇಗ 80 ಕಿ.ಮೀ.
ಸುರಕ್ಷತೆಯ ದೃಷ್ಟಿಯಿಂದ ಹಳೆಯ ಸೇತುವೆಯಲ್ಲಿ ರೈಲುಗಳ ವೇಗದ ಮಿತಿ ಗಂಟೆಗೆ 10 ಕಿ.ಮೀ. ನಿಗದಿಪಡಿಸಲಾಗಿತ್ತು. ಆದರೆ ನೂತನ ಸೇತುವೆಯಲ್ಲಿ ರೈಲುಗಳು ಗಂಟೆಗೆ 80 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ.
ಹಳೆಯ ಪಂಬನ್ ಸೇತುವೆಗೆ ಪರ್ಯಾಯ
ನೂತನ ಪಂಬನ್ ಸೇತುವೆಯು 1914ರಲ್ಲಿ ಬ್ರಿಟಿಷರಿಂದ ನಿರ್ಮಾಣವಾಗಿದ್ದ ಹಳೆಯ ಪಂಬನ್ ಸೇತುವೆಗೆ ಪರ್ಯಾಯವಾಗಿ ನಿರ್ಮಾಣವಾಗಿದೆ. ಹಳೆಯ ಸೇತುವೆಯು ಕಾಲದ ಹೊಡೆತಕ್ಕೆ ಸಿಲುಕಿ ಜರ್ಜರಿತವಾಗಿದ್ದು, ನಿರ್ವಹಣ ವೆಚ್ಚವೂ ಅಧಿಕವಾಗಿದ್ದರಿಂದ 2019ರಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಚಾಲನೆ ದೊರೆತಿತ್ತು.