ಬೆಂಗಳೂರು:‘ ಪ್ರಧಾನಿ ನರೇಂದ್ರ ಮೋದಿ ಅವರು ಮಾತೆತ್ತಿದರೆ ನಾ ಖಾವೂಂಗಾ, ನಾ ಖಾನೇದೂಂಗ ಎಂದು ಹೇಳುತ್ತಾರೆ. ಆದರೆ ಅವರ ಪ್ರವಾಸದ ಹೆಸರಲ್ಲಿ ರಾಜ್ಯ ಬಿಜೆಪಿ ನಾಯಕರು ಮೋದಿ ಟೂರ್ ಡೀಲ್ ನಡೆಸಿದ್ದಾರೆ. ಇದರಲ್ಲಿ 40 % ಅಲ್ಲ 300 % ಲೂಟಿ ಮಾಡಿದ್ದಾರೆ. ’ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಶುಕ್ರವಾರ ಮಾತನಾಡಿದ ಸುರೇಶ್ ಅವರು, ‘ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು 7 ಬಾರಿ ರಾಜ್ಯ ಪ್ರವಾಸ ಮಾಡಿದ್ದು, ಅವರ ಈ ಪ್ರವಾಸದ ಕಾರ್ಯಕ್ರಮಗಳಲ್ಲಿ ಬಿಜೆಪಿ ನಾಯಕರು ಕೋಟಿ, ಕೋಟಿ ಲೂಟಿ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೆಂಪೇಗೌಡ ಪ್ರತಿಮೆ ವೆಚ್ಚ 59 ಕೋಟಿ. ಉದ್ಘಾಟನೆ ಕಾರ್ಯಕ್ರಮಕ್ಕೆ ಸರ್ಕಾರ 30 ಕೋಟಿ ರೂ. ಖರ್ಚು ಮಾಡಿ, ಲೂಟಿ ಹೊಡೆದಿದೆ. ರಾಜ್ಯದ ಇತರ ಭಾಗಗಳ ಕಾರ್ಯಕ್ರಮಗಳಲ್ಲಿ ಎಷ್ಟು ಲೂಟಿ ಮಾಡಲಾಗಿದೆಯೋ? ಮೋದಿ ಅವರ ಸರ್ಕಾರಿ ಕಾರ್ಯಕ್ರಮಗಳಿಗೆ ಆಗಿರುವ ವೆಚ್ಚದ ಬಗ್ಗೆ ಮಾಧ್ಯಮಗಳು ಹಾಗೂ ಆರ್ಟಿಐ ಕಾರ್ಯಕ್ರತರು ಮಾಹಿತಿ ಹೊರತೆಗೆಯಬೇಕು’ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು;
‘ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಪ್ರಧಾನ ಮಂತ್ರಿಗಳು, ಬಿಜೆಪಿ ರಾಷ್ಟ್ರೀಯ ನಾಯಕರು ದಂಡಯಾತ್ರೆ ಮಾಡುತ್ತಿದ್ದಾರೆ. ಈಗಾಗಲೇ ಪ್ರಧಾನಿಗಳು 7 ಬಾರಿ ರಾಜ್ಯಕ್ಕೆ ಬಂದಿದ್ದಾರೆ. ಇಂದು ರಾಜ್ಯದಲ್ಲಿ ಪ್ರಧಾನಮಂತ್ರಿಗಳ ಟೂರ್ ಡೀಲ್ ನಡೆಯುತ್ತಿದೆ. ಸರ್ಕಾರದಿಂದ ಪ್ರಧಾನಮಂತ್ರಿಗಳ ಪ್ರವಾಸದ ಡೀಲ್ ನಡೆಯುತ್ತಿದೆ. ಇದು 40% ಅಲ್ಲ 200% ಡೀಲ್ ನಡೆಯುತ್ತಿದೆ. ಪ್ರದಾನಿಗಳು ಇಲ್ಲಿ ತಕ್ಕಡಿ ಏಳಿಸಲು ರಾಜ್ಯಕ್ಕೆ ಆಗಮಿಸುತ್ತಿದ್ದರೆ, ಅವರ ಪ್ರವಾಸದ ಹೆಸರು ಹೇಳಿಕೊಂಡು ಬಿಜೆಪಿ ಸರ್ಕಾರ ಡೀಲ್ ಮಾಡುತ್ತಿದೆ.
ಪ್ರಧಾನಮಂತ್ರಿಗಳು ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ಬಂದಾಗ ಇವರಿಗೆ ಕೆಂಪೇಗೌಡರ ಮೇಲೆ ಅಭಿಮಾನವಿದೆ ಎಂದು ಭಾವಿಸಿದ್ದೆವು. ಆದರೆ ಇವರು ಕೆಂಪೇಗೌಡರ ಹೆಸರಲ್ಲಿ ಡೀಲ್ ಮಾಡಿದ್ದಾರೆ. ಇವರು ಎಲ್ಲಿ ಕೈ ಹಾಕಿದರೂ ಡೀಲು, ಕಾಸು ಮಾಡುವುದಾಗಿದೆ. ಕೇವಲ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ 30 ಕೋಟಿ ಬಿಲ್ ಮಾಡಿದ್ದಾರೆ. ಒಂದು ಕಾರ್ಯಕ್ರಮಕ್ಕೆ ಇಷ್ಟಾದರೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಮಂತ್ರಿಗಳ ಪ್ರವಾಸ ಹೆಸರಲ್ಲಿ ಎಷ್ಟು ಲೂಟಿ ಮಾಡಲು ಇವರು ಸಜ್ಜಾಗಿದ್ದಾರೆ. ಯಾರಿಗೂ ತಿನ್ನಲು ಬಿಡುವುದಿಲ್ಲ ಎಂದ ಪ್ರಧಾನಿ ಹೆಸರಿನಲ್ಲೇ ಲೂಟಿ ಮಾಡಿದ್ದಾರೆ. ಏರ್ ಪೋರ್ಟ್ ರಸ್ತೆ ಅಭಿವೃದ್ಧಿ ಮಾಡಲು ಅದು ರಾಜ್ಯ ಸರ್ಕಾರ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಅದಕ್ಕೆ 8.50 ಕೋಟಿ ರೂ. ವೆಚ್ಚ ಮಾಡಿದ್ದಾರೆ. ಈ ರಸ್ತೆ ಎಂದಾದರೂ ಗುಂಡಿ ಬಿದ್ದಿತ್ತಾ? ಪ್ರಧಾನಮಂತ್ರಿಗಳು ಆ ರಸ್ತೆಯಲ್ಲಿ ಸಂಚಾರ ಮಾಡಿದರಾ?
ವಿಮಾನದಲ್ಲಿ ಬಂದು, ಕಾರ್ಯಕ್ರಮದಲ್ಲಿ ಭಾಗವಹಿಸಿ ಮತ್ತೆ ವಿಮಾನದಲ್ಲಿ ಪ್ರಯಾಣ ಮಾಡಿದರು. ಇಲ್ಲಿ ರಸ್ತೆ ಅಭಿವೃದ್ಧಿ ಹೆಸರಲ್ಲಿ ಲೂಟಿ ಮಾಡಿದವರು ಯಾರು? ಈ ಹಣ ಸರ್ಕಾರದ್ದು, ಜನಸಾಮಾನ್ಯರ ತೆರಿಗೆ ಹಣ.
ಪ್ರಧಾನಿ ಕಾರ್ಯಕ್ರಮದ ಪೆಂಡಾಲ್ ಹಾಕಲು 12 ಕೋಟಿ ಖರ್ಚು ಮಾಡಿದ್ದಾರೆ. ಈ ಹಣದಲ್ಲಿ 2 ಹೊಸ ಸೆಟ್ ಪೆಂಡಾಲ್ ಖರೀದಿ ಮಾಡಬಹುದಿತ್ತು. ಅಲ್ಲಿ ಬಂದ ಜನರೆಗೆ ನೀರಿನ ವ್ಯವಸ್ಥೆಗೆ 1 ಕೋಟಿ ಖರ್ಚು ಮಾಡಿದ್ದಾರೆ. ಎಷ್ಟು ಜನ ಬಂದಿದ್ದರು, ಬಂದದ್ದವರು, ಎಷ್ಟು ಲೀಟರ್ ನೀರು ಕುಡಿದರು? ಕನ್ನಡಿಗರ ಹಣವನ್ನು ಪ್ರಧಾನಿ ಮೋದಿ ಅವರ ಹೆಸರಲ್ಲಿ ಲೂಟಿ ಮಾಡಿ ಮತಯಾಚನೆ ಮಾಡುತ್ತಿದ್ದಾರೆ. ಇಂತಹ ಭ್ರಷ್ಟ ವ್ಯವಸ್ಥೆ ಇರಬೇಕಾ? ಇನ್ನು ಕಾರ್ಯಕ್ರಮಕ್ಕೆ ಜನ ಕರೆತರಲು ಬಸ್ ವ್ಯವಸ್ಥೆಗೆ 6.50 ಕೋಟಿ ಖರ್ಚು ಮಾಡಿದ್ದಾರೆ. ಈ ಹಣ ಯಾರದ್ದು? ಇದು ಕೇವಲ 1 ಕಾರ್ಯಕ್ರಮದ ಉದಾಹರಣೆ. ರಾಜ್ಯದಲ್ಲಿ ಪ್ರಧಾನಿಗಳು 7 ಬಾರಿ ದಂಡಯಾತ್ರೆ ಮಾಡಿದ್ದು, ಎಷ್ಟು ಲೂಟಿ ಮಾಡಿದ್ದಾರೆ ಹೇಳಿ. ಕಾರ್ಯಕ್ರಮದಲ್ಲಿ ಅಡುಗೆ ಮನೆ ನಿರ್ಮಾಣಕ್ಕೆ 50 ಲಕ್ಷ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 77 ಲಕ್ಷ ಖರ್ಚು ಮಾಡಿದ್ದಾರೆ. ಇದು ಬಿಜೆಪಿಯ ಭರವಸೆ. ಈ ಬಗ್ಗೆ ಉರಿಗೌಡ, ನಂಜೇಗೌಡರನ್ನು ಇಟ್ಟುಕೊಂಡು ಒಕ್ಕಲಿಗರನ್ನು ಕೊಲೆಗಡುಕರು ಎಂದು ಬಿಂಬಿಸಲು ಪ್ರಯತ್ನಿಸಿದ ಅಸ್ವಸ್ಥ ನಾರಾಯಣ ಅವರ ಕೃಪಾಕಟಾಕ್ಷದಲ್ಲಿ 30 ಕೋಟಿ ಲೂಟಿ ಮಾಡಲಾಗಿದೆ.
ಎಲ್ಲೆಲ್ಲಿ ಪ್ರಧಾನಿಗಳು ಭೇಟಿ ನೀಡಿದ್ದಾರೆ, ಅಲ್ಲಿನ ಕಚೇರಿಗಳ ಬಾಗಿಲು ತಟ್ಟಿ ಎಷ್ಟು ಖರ್ಚು ಮಾಡಿದ್ದಾರೆ ಎಂದು ಪರಿಶೀಲಿಸಿ. ಇದು ಕೇವಲ ಪ್ರಧಾನಿ ಅವರ ಹೆಸರಲ್ಲಿ ಆಗಿರುವ ಲೂಟಿ. ಇನ್ನು ಅಮಿತ್ ಶಾ ಅವರ ಹೆಸರಲ್ಲಿ ಎಷ್ಟು ಲೂಟಿ ಮಾಡಿದ್ದಾರೋ ಗೊತ್ತಿಲ್ಲ. ಅಮಿತ್ ಶಾ ಅವರು 9 ಬಾರಿ ಬಂದಿದ್ದಾರೆ. ಪ್ರಧಾನಮಂತ್ರಿಗಳ ದಾವಣಗೆರೆ ಕಾರ್ಯಕ್ರಮಕ್ಕೆ ನಳೀನ್ ಕುಮಾರ್ ಕಟೀಲ್ ಅವರು ಎಷ್ಟು ಖರ್ಚು ಮಾಡಿದ್ದರು? ಇಲ್ಲಿ ಯಾಕೆ 30 ಕೋಟಿ ಬಿಲ್ ಮಾಡಿದ್ದಾರೆ? ಪ್ರಧಾನಮಂತ್ರಿಗಳು ಎಂಬ ಕಾರಣಕ್ಕೆ ಇವರ ಕಮಿಷನ್ ಪರ್ಸೆಂಟೇಜ್ ಹೆಚ್ಚಾಯ್ತಾ? ಚುನಾವಣಾ ಪ್ರಚಾರಕ್ಕೆ ಪರ್ಸೆಂಟೇಜ್ ಹೆಚ್ಚಾಯ್ತಾ?
ಕೆಂಪೇಗೌಡ ಪ್ರತಿಮೆಗೆ 58 ಕೋಟಿ ಖರ್ಚಾಗದ್ದು, ಉದ್ಘಾಟನೆಗೆ 30 ಕೋಟಿ ಖರ್ಚು ಮಾಡಿದ್ದಾರೆ. ಇವರು ಪ್ರತಿಮೆ ಮಾಡುತ್ತಿರುವುದೇ ಈ ರೀತಿ ಲೂಟಿ ಮಾಡಲು. ರಾಜ್ಯದ ಮಹನೀಯರ ಪ್ರತಿಮೆ ಹೆಸರಲ್ಲಿ ಬಿಜೆಪಿ ಸರ್ಕಾರ ಲೂಟಿ ಮಾಡುತ್ತಿದೆ. ಮಾಧ್ಯಮಗಳು ಈ ವಿಚಾರವಾಗಿ ತನಿಖೆ ಮಾಡಬೇಕು. ರಾಜ್ಯದ ಎಲ್ಲ ಕಡೆ ಕಾರ್ಯಕ್ರಮಗಳಲ್ಲಿ ಎಷ್ಟೆಷ್ಟು ಲೂಟಿ ಮಾಡಿದ್ದಾರೆ ಎಂದು ದಾಖಲೆ ಪಡೆಯಿರಿ ಎಂದು ಆರ್ ಟಿಐ ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ.’
ಈ ಸಂದರ್ಭದಲ್ಲಿ ಬಿಜೆಪಿಯವರು ಒಕ್ಕಲಿಗರನ್ನು ಬಿಜೆಪಿಯವರು ಟಾರ್ಗೆಟ್ ಮಾಡುತ್ತಿದ್ದು, ಒಕ್ಕಲಿಗ ಸಮುದಾಯ ಅವರ ಜತೆ ಹೋಗುತ್ತದಾ ಎಂದು ಮಾಧ್ಯಮಗಳು ಕೇಳಿದಾಗ, ‘ಕೆಂಪೇಗೌಡರ ಹೆಸರಲ್ಲಿ ಇವರು ಎಷ್ಟು ಲೂಟಿ ಮಾಡಿದ್ದಾರೆ ಎಂಬುದನ್ನು ಮಾಹಿತಿ ನೀಡಿದ್ದೇನೆ. ಒಕ್ಕಲಿಗರಲ್ಲ ಯಾವುದೇ ಸಮುದಾಯದವರು ಕೂಡ ಬಿಜೆಪಿಯವರ ಜತೆ ಹೋಗುವುದಿಲ್ಲ. ರಾಜ್ಯದ ಇತಿಹಾಸದಲ್ಲೇ ಇಷ್ಟು ದೊಡ್ಡ ಭ್ರಷ್ಟಾಚಾರ ನಡೆದಿರಲಿಲ್ಲ. ಅವರು ಪ್ರತಿ ಹುದ್ದೆಗಳಿಗೆ ಹಣ ನಿಗದಿ ಮಾಡಿದ್ದಾರೆ’ ಎಂದು ಹೇಳಿದರು.
*ಸಚಿವ ಮುನಿರತ್ನ ಬಂಧನಕ್ಕೆ ಆಗ್ರಹ*
ಸಚಿವ ಮುನಿರತ್ನ ಅವರು ಆರ್ ಆರ್ ನಗರ ಕ್ಷೇತ್ರದಲ್ಲಿ ತಮಿಳಿಗರನ್ನು ಕನ್ನಡಿಗರ ವಿರುದ್ಧ ಎತ್ತಿಕಟ್ಟಿ ದ್ವೇಷವನ್ನು ಸಾರುತ್ತಿದ್ದಾರೆ. ಯಾರೇ ಮತ ಕೇಳಿಕೊಂಡು ಬಂದರೂ ಅವರನ್ನು ಹೋಡೆಯಿರಿ, ಸಾಯಿಸಿರಿ ಎಂದು ಕನ್ನಡಿಗ ಹಾಗೂ ಒಕ್ಕಲಿಗ ಹೆಣ್ಣುಮಗಳ ವಿರುದ್ಧ ಪ್ರಚೋದನೆ ನೀಡಿ ಚುನಾವಣೆ ಗೆಲ್ಲಲು ಕ್ಷೇತ್ರದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ.
‘ಚುನಾವಣೆ ಸಮಯದಲ್ಲಿ ಪ್ರಚೋದನಕಾರಿ ಹೇಳಿಕೆ ಭಯದ ವಾತಾವರಣ ಸೃಷ್ಟಿಸುತ್ತಿರುವ ಸಚಿವ ಮುನಿರತ್ನ ಅವರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಕೂಡಲೇ ಬಂಧಿಸಬೇಕು.
‘ಕನ್ನಡಿಗರು ಸ್ವಾಭಿಮಾನಿಗಳು, ಶಾಂತಿ ಪ್ರಿಯರು, ಅಭಿವೃದ್ಧಿಗಾಗಿ ಕರ್ನಾಟಕ ಒಂದು ಎಂದು ಸಾರಿ ಹೇಳಿದ್ದಾರೆ. ಆದರೆ ಚುನಾವಣೆಯಲ್ಲಿ ತಮ್ಮ ರಾಜಕೀಯ ಲಾಭಕ್ಕೆ ತಮಿಳಿಗರನ್ನು ಕನ್ನಡಿಗರ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನ ಮಾಡಲಾಗುತ್ತಿದೆ. ಒಕ್ಕಲಿಗರನ್ನು ಗುರಿಯಾಗಿಸಿ ಸಿನಿಮಾ ತೆಗೆದು ಹಣ ಮಾಡಲು ಮುಂದಾಗುವ ಮುನಿರತ್ನ, ಪೊಲೀಸ್ ಅಧಿಕಾರಿಗಳ ಮುಂದೆ ಸಚಿವರು ಎಲ್ಲರೂ ಫೋನ್ ಆಫ್ ಮಾಡಿ, ಯಾರೂ ವಿಡಿಯೋ ಮಾಡಬೇಡಿ ಎಂದು ಹೇಳಿ, ಇಲ್ಲಿಗೆ ಯಾರೇ ಮತ ಕೇಳಿಕೊಂಡು ಬಂದರೂ ಅವರನ್ನು ಹೊಡೆದು, ಬಡೆದು ಸಾಯಿಸಿ. ನಾಳೆ ನಾನು ಅಧಿಕಾರಕ್ಕೆ ಬಂದ ನಂತರ ನಿಮ್ಮನ್ನು ರಕ್ಷಣೆ ಮಾಡುತ್ತೇನೆ ಎಂದು ಅಭಯ ನೀಡಿದ್ದಾರೆ. ಆಮೂಲಕ ಕನ್ನಡಿಗ ಹಾಗೂ ಒಕ್ಕಲಿಗ ಹೆಣ್ಣು ಮಗಳ ಮೇಲೆ ಹಲ್ಲೆ ಮಾಡಲು ಸಚಿವರು ಪ್ರಚೋದಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರು ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಗಮನಿಸಬೇಕಾಗಿದೆ. ವಿರೋಧ ಪಕ್ಷಗಳು ಕೆಲಸ ಮಾಡಲು ಬಿಡುತ್ತಿಲ್ಲ. 2013ರಲ್ಲಿ ಇವರ ವಿರುದ್ಧ ಅಧಿಕಾರಿಗಳ ಮೇಲೆ ಹಲ್ಲೆ ಪ್ರಕರಣ, 2018ರಲ್ಲೂ ಇದೇ ಪ್ರಸಂಗವಾಗಿದೆ. ಈಗ ಈ ಚುನಾವಣೆಯಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿ, ವಿರೋಧ ಪಕ್ಷ ಹತ್ತಿಕ್ಕಲು, ಅಲ್ಲಿ ಒಕ್ಕಲಿಗ ಹೆಣ್ಣು ಮಗಳು ಸ್ಪರ್ಧಿಸುತ್ತಿದ್ದಾರೆ ಎಂಬ ಭಯದಿಂದ ತಮಿಳರನ್ನು ಎಲ್ಲಿ ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ.
ಈ ಹಿಂದಿನಿಂದ ತಮಿಳಿಗರು ಕನ್ನಡಿಗರ ಜತೆ ಬಹಳ ವಿಶ್ವಾಸದಿಂದ ಬದುಕುತ್ತಿದ್ದಾರೆ. ವ್ಯಾಪಾರ, ಹಣ ಮಾಡಲು ರಾಜಕೀಯ ಮಾಡಲು ಮುನಿರತ್ನ ಇಲ್ಲಿ ಇಲ್ಲಿಗೆ ಬಂದಿದ್ದಾರೆ. ಆದರೂ ಸಚಿವರ ವಿರುದ್ದ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕುಸುಮಾ ಅವರು ಈಗಾಗಲೇ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರು ಅವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಕಾರ್ಯಕರ್ತರು ಪ್ರತಿಭಟನೆ ಮಾಡಿದರೆ 10 ಕೆಸ್ ಹಾಕಿ ಬಂಧಿಸುತ್ತಾರೆ. ಬೆಂಗಳೂರಿನಲ್ಲಿ ಭಾಷೆ ಸಾಮರಸ್ಯ ಕದಡುವವರ ವಿರುದ್ಧ ಇಷ್ಟು ಹೊತ್ತಿಗೆ ಸುಮೋಟೋ ಪ್ರಕರಣ ದಾಖಲಿಸಿಬೇಕಿತ್ತು. ಆದರೆ ಈ ಪ್ರಕರಣದಲ್ಲಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಕರ್ನಾಟಕದ ಪೊಲೀಸ್ ಗೆ ಅದರದೇ ಆದ ಖ್ಯಾತಿ ಇತ್ತು. ಆದರೆ ಇದನ್ನು ಬಿಜೆಪಿ ಸರ್ಕಾರ ನಾಶ ಮಾಡುತ್ತಿದೆ. ಪೊಲೀಸರನ್ನು ಮುಂದಿಟ್ಟುಕೊಂಡು ಏನುಬೇಕಾದರೂ ಮಾಡಬಹುದು ಎಂಬ ಹಂತಕ್ಕೆ ತೆಗೆದುಕೊಂಡು ಬಂದಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ.
ರಾಜ್ಯಪಾಲರು, ಮುಖ್ಯಮಂತ್ರಿಗಳು ಇವರ ಬಂಧನಕ್ಕೆ ಸೂಚಿಸುವಂತೆ ಆಗ್ರಹಿಸುತ್ತೇನೆ. ಇವರು ಹೊರಗಡೆ ಇದ್ದರೆ ಸಮಾಜದಲ್ಲಿ ಶಾಂತಿಗೆ ಭಂಗವುಂಟಾಗಲಿದೆ. ಇವರ ವಿರುದ್ಧ ದೆಹಲಿ ಚುನಾವಣಾ ಆಯೋಗಕ್ಕೂ ಕಳುಹಿಸಿಕೊಡುತ್ತೇವೆ. ಹೀಗಾಗಿ ಅವರ ಬಂಧನ ಹಾಗೂ ಸೂಕ್ತ ಕ್ರಮಕ್ಕೆ ಆಗ್ರಹಿಸುತ್ತೇನೆ.
*ಪ್ರಶ್ನೋತ್ತರ:*
ಯಾರಿಗೆ ಧಮಕಿ ಹಾಕಿದ್ದಾರೆ ಎಂದು ಮಾಧ್ಯಮಗಳು ಕೇಳಿದಾಗ, ‘ಯಾರೇ ಬಂದು ಮತ ಕೇಳಿದರೂ ಹೊಡೆದು ಕಳುಹಿಸಿ ಎಂದು ಹೇಳಿದ್ದಾರೆ. ನಾನು ಹೋಗಿ ಮತ ಕೇಳಿದರೂ ಹೊಡೆದು ಕಳಿಸುವಂತೆ ಹೇಳಿದ್ದಾರೆ. ಕುಸುಮಾ ಅವರನ್ನು ಸೇರಿಸಿ ಹೇಳಿದ್ದಾರೆ. ಒಕ್ಕಲಿಗ ಹೆಣ್ಣುಮಗಳ ಮೇಲೆ ಇವರಿಗೆ ಅಷ್ಟರ ಮಟ್ಟಿಗೆ ಭಯ ಬಂದಿದೆ’ ಎಂದು ಹೇಳಿದರು.
ವಿರೋಧ ಪಕ್ಷಗಳು ಎಂದರೆ ಬೇರೆ ಪಕ್ಷಗಳು ಇವೆ, ನಿಮಗೆ ಎಂದು ಹೇಗೆ ಹೇಳುತ್ತೀರಿ ಎಂದು ಕೇಳಿದಾಗ, ‘ಅವರು ಯಾರಿಗೆ ಹೇಳಿದ್ದಾರೆ, ಯಾರನ್ನು ಉದ್ದೇಶಿಸಿ ಹೇಳಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಮಾಧ್ಯಮಗಳು ಬೇರೆ ಪಕ್ಷಗಳನ್ನು ಮಧ್ಯೆ ತಂದು ಇದನ್ನು ತಿರುಚಬೇಡಿ. ಪ್ರಮುಖ ವಿರೋಧ ಪಕ್ಷವನ್ನು ಗುರಿಯಾಗಿಸಿ ಹೇಳಿಕೆ ನೀಡುತ್ತಾರೆ ಹೊರತು ಹಾದಿ ಬೀದಿಯಲ್ಲಿ ಹೋಗುವವರನ್ನು ಕೇಳುವುದಿಲ್ಲ. ಒಂಬ್ಬ ಮಂತ್ರಿ ಯಾರನ್ನೇ ಗುರಿಯಾಗಿಸಿ ಈ ರೀತಿ ಹೇಳುವುದು ಸರಿಯಲ್ಲ. ಇಷ್ಟು ಹೊತ್ತಿಗೆ ಅವರನ್ನು ಬಂಧಿಸಿ ಅವರ ಮೇಲೆ ಪ್ರಕರಣ ದಾಖಲಿಸಬೇಕಿತ್ತು. ನನ್ನ ಪ್ರಕಾರ ಅದು ಸರ್ಕಾರದ ಆದೇಶವಾಗಿದೆ’ ಎಂದು ತಿಳಿಸಿದರು.
ಸಚಿವ ಮುನಿರತ್ನ ಆರ್ ಆರ್ ನಗರ ಕ್ಷೇತ್ರವನ್ನು ತಮ್ಮ ರಿಪಬ್ಲಿಕ್ ಮಾಡಿಕೊಂಡಿದ್ದಾರಾ ಎಂದು ಕೇಳಿದ ಪ್ರಶ್ನೆಗೆ, ‘ಯಾರೇ ಮತ ಕೇಳಿಕೊಂಡು ಬಂದರು ಅವರನ್ನು ಹೊಡಿಯಿರಿ, ಬಡಿಯಿರಿ, ಸಾಯಿಸಿರಿ ಎಂದು ಹೇಳಿದ್ದಾರೆ. ನಾಳೆ ನಾನು ಅಧಿಕಾರಕ್ಕೆ ಬಂದ ಮೇಲೆ ನಿಮಗೆ ರಕ್ಷಣೆ ನೀಡುತ್ತೇನೆ. ನಿಮಗೆ ಏನು ಬೇಕೋ ಅದನ್ನು ಮಾಡಿಕೊಡುತ್ತೇನೆ ಎಂದು ಅಭಯ ನೀಡುತ್ತಿದ್ದಾರೆ. ಆಮೂಲಕ ಕ್ಷೇತ್ರದಲ್ಲಿ ಭಯದ ವಾತಾವರಣ ಸೃಷ್ಟಿಸಿ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಇಷ್ಟೆಲ್ಲಾ ಆದ ನಂತರ ಅವರು ಕ್ಷೇತ್ರವನ್ನು ತಮ್ಮ ರಿಪಬ್ಲಿಕ್ ಮಾಡಿಕೊಂಡಿದ್ದಾರೋ ಇಲ್ಲವೋ ನೀವೇ ವ್ಯಾಖ್ಯಾನಿಸಿ’ ಎಂದು ತಿಳಿಸಿದರು.
ಕಾನೂನು ಪ್ರಕ್ರಿಯೆ ಜತೆ ಕ್ಷೇತ್ರದಲ್ಲಿ ಈ ಬಗ್ಗೆ ಹೋರಾಟಮಾಡುತ್ತೀರಾ ಎಂದು ಕೇಳಿದಾಗ, ‘ನಮ್ಮ ಅಭ್ಯರ್ಥಿ ಚುನಾವಣೆಗೆ ಸಜ್ಜಾಗಿದ್ದು, ನಾವು ಚುನಾವಣಾ ತಂತ್ರಗಾರಿಕೆ ಮಾಡುತ್ತಿದ್ದೇವೆ. ಮತದಾರರ ಮನವೊಲಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ಸರ್ಕಾರದ ಅವಧಿಯಲ್ಲಿನ ಕೆಲಸದ ಬಗ್ಗೆ ಪ್ರಚಾರ ಮಾಡುತ್ತಿದ್ದೇವೆ’ ಎಂದು ಹೇಳಿದರು.
ಇಂತಹ ಪರಿಸ್ಥಿತಿಯಲ್ಲಿ ಕುಸುಮಾ ಅವರಿಗೆ ಹೇಗೆ ಧೈರ್ಯ ತುಂಬುತ್ತೀರಿ ಎಂದು ಕೇಳಿದಾಗ, ‘ನಾನು ಕುಸುಮಾ ಅವರಿಗೆ ಧೈರ್ಯ ಕೊಟ್ಟಿದ್ದೀನಿ, ಮುಂದಿನ ದಿನಗಳಲ್ಲೂ ನೀಡುತ್ತೇನೆ. ಕೇವಲ ಅವರಿಗೆ ಮಾತ್ರವಲ್ಲ. ಕ್ಷೇತ್ರದ ಪ್ರತಿಯೊಬ್ಬ ಮತದಾರರ ರಕ್ಷಣೆ ಮಾಡುತ್ತೇನೆ. ಎಲ್ಲರೂ ಧೈರ್ಯದಿಂದ ಚುನಾವಣೆ ಎದುರಿಸಿ, ನಿನ್ನೆ 12 ಗಂಟೆಗೆ ಮುನಿರತ್ನನ ಎಲ್ಲಾ ನಾಟಕ ಬಂದ್ ಆಗಿದೆ ಎಂದು ಹೇಳಿದ್ದೇನೆ’ ಎಂದು ತಿಳಿಸಿದರು.