ಸೂರಜ್ ಕುಂಡ್ : ಒಂದು ಸಣ್ಣ ಸಾಲಿನ ಫೇಕ್ ಸುದ್ದಿ ದೇಶದ ಭದ್ರತೆಗೆ ಸವಾಲು ಒಡ್ಡಲಿದೆ. ತಾಂತ್ರಿಕವಾಗಿ ಅದನ್ನು ನಿಭಾಯಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದ್ದಾರೆ.
ಹರ್ಯಾಣದ ಸೂರಜ್ ಕುಂಡನಲ್ಲಿ ನಡೆಯುತ್ತಿರುವ ರಾಜ್ಯಗಳ ಗೃಹ ಸಚಿವರ 2ದಿನಗಳ ಚಿಂತನ ಶಿಬಿರ ಉದ್ದೇಶಿಸಿ ಅವರು ಮಾತನಾಡಿದರು. ಸಾಮಾಜಿಕ ಜಾಲತಾಣದಲ್ಲಿ ಬರುವ ಮಾಹಿತಿ ಮತ್ತು ಸುದ್ದಿಗಳನ್ನು ಹಂಚುವ ಮೊದಲು ಅದು ನಿಜವೋ ಸುಳ್ಳೋ ಎಂಬ ಬಗ್ಗೆ ಅರಿವು ಮೂಡಿಸಬೇಕಿದೆ. ಜಾಲತಾಣಗಳಲ್ಲಿ ಬಿತ್ತರಗೊಂಡ ಒಂದು ಸಾಲಿನ ಸುಳ್ಳು ಸುದ್ದಿ ದೇಶದ ಭದ್ರತೆಗೆ ಸವಾಲು ಒಡ್ಡಲಿದೆ. ತಾಂತ್ರಿಕವಾಗಿಯೂ ಅದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಮಾಹಿತಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವ ಮೊದಲು ಹತ್ತು ಬಾರಿ ಯೋಚಿಸಬೇಕು. ಪ್ರತಿ ಜಾಲತಾಣದಲ್ಲಿ ಕೂಡ ಮಾಹಿತಿ ಸರಿಯೋ ತಪ್ಪೋ ಎಂದು ದೃಢಪಡಿಸಿಕೊಳ್ಳಲು ಸಾಧನಗಳಿವೆ. ವಿವಿಧ ಮಾಹಿತಿ ಮೂಲಗಳನ್ನು ಶೋಧಿಸಿದರೆ ಹೊಸ ಮಾದರಿಯಲ್ಲಿ ಖಚಿತ ಪಡಿಸುವ ಸಾಧನಗಳ ಪರಿಚಯವಾಗುತ್ತದೆ ಎಂದು ಮೋದಿ ಹೇಳಿದರು.
ಪೆನ್ನು ಹಿಡಿದ ನಕ್ಸಲರು ದೇಶ ಹೊಸ ತಲೆಮಾರಿನ ಜನರ ತಲೆಯನ್ನು ಕೆಡಿಸುತ್ತಿದ್ದಾರೆ. ಇಂಥವರಿಗೆ ವಿದೇಶಗಳಿಂದ ನೆರವು ಹರಿದು ಬರುತ್ತದೆ. ಇಂಥ ಕೆಲಸದಲ್ಲಿ ತೊಡಗಿದವರು ಬಂದೂಕು ಹಿಡಿದ ನಕ್ಸಲರಾಗಿಲಿ ಅಥವಾ ಪೆನ್ನು ಹಿಡಿದ ನಕ್ಸಲರು ಆಗಿರಲಿ. ಅವರನ್ನು ನಾವು ತಡೆಯುತ್ತೇವೆ. ಇಂದು ಅಪರಾಧ ಎಂಬುದು ಸ್ಥಳೀಯ ಮಟ್ಟಕ್ಕೆ ಸೀಮಿತವಾಗಿಲ್ಲ. ಅದು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಕ್ಕೂ ವಿಸ್ತರಣೆಯಾಗಿದೆ. ಅದನ್ನು ತಡೆಗಟ್ಟಲು ರಾಜ್ಯಗಳ ನಡುವೆ ಸಹಕಾರವಿರಬೇಕು. ಅಪರಾಧಗಳನ್ನು ತಡೆದರೆ ಮಾತ್ರ ರಾಜ್ಯಗಳ ಅಭಿವೃದ್ಧಿ ಸಾಧ್ಯವಿದೆ ಎಂದು ಮೋದಿ ಸಲಹೆ ನೀಡಿದರು.