ಮೈಸೂರು:
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮತ್ತೆ ಕರುನಾಡಿಗೆ ಆಗಮಿಸುತ್ತಿದ್ದಾರೆ.
ದೇಶದಲ್ಲಿ ಹುಲಿ ಸಂರಕ್ಷಣೆಗಾಗಿ ಆರಂಭಿಸಲಾಗಿದ್ದ ಪ್ರಾಜೆಕ್ಟ್ ಟೈಗರ್ ಮತ್ತು ಬಂಡೀಪುರದ ಹುಲಿ ರಕ್ಷಿತಾರಣ್ಯಕ್ಕೆ 50 ವರ್ಷ ಪೂರೈಸಿದೆ, ಇದಕ್ಕಾಗಿ ಮೂರು ದಿನಗಳ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೈಸೂರಿನಲ್ಲಿ ರವಿವಾರ ನಡೆಯಲಿರುವ ಪ್ರಮುಖ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಲಿದ್ದಾರೆ.
ಹುಲಿ ಗಣತಿ ವರದಿ ಬಿಡುಗಡೆ, ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ಸಫಾರಿ ನಡೆಸಲಿದ್ದಾರೆ.
ಶನಿವಾರ ರಾತ್ರಿ 8.40ಕ್ಕೆ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಲಿದ್ದಾರೆ. ರವಿವಾರ ಬೆಳಗ್ಗೆ 6.25ಕ್ಕೆ ಮೈಸೂರು ಹೆಲಿಪ್ಯಾಡ್ನಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಹೆಲಿಪ್ಯಾಡ್ಗೆ ತೆರಳಲಿದ್ದಾರೆ. ಬಳಿಕ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯ ಪ್ರದೇಶಕ್ಕೆ ರಸ್ತೆ ಮೂಲಕ ತೆರಳಿ, ಕಾಡಿನಲ್ಲಿ ಸಫಾರಿ ನಡೆಸಲಿದ್ದಾರೆ. ಅನಂತರ ಅರಣ್ಯ ಸಿಬಂದಿಯೊಂದಿಗೆ ಸಂವಾದ ನಡೆಸಲಿದ್ದಾರೆ.