ಬೆಂಗಳೂರು: ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ. ಎಲ್ಲರ ಸಹಕಾರದಿಂದ ಗೃಹಲಕ್ಷ್ಮೀ ಯೋಜನೆ ಯಶಸ್ವಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ 2024ನೇ ಸಾಲಿನ ಪ್ರೆಸ್ ಕ್ಲಬ್ ವಿಶೇಷ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಚಿವರು, ಗೃಹಲಕ್ಷ್ಮೀ ಯೋಜನೆಯ ಯಶಸ್ಸಿನಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು. ಕರ್ನಾಟಕದ ಮುಖ್ಯವಾಹಿನಿಯಾಗಿ ಬೆಂಗಳೂರು ಪ್ರೆಸ್ ಕ್ಲಬ್ ಕಾರ್ಯನಿರ್ವಹಿಸುತ್ತಿದೆ ಎಂದರು.
ನನಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡಿ, ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲೇ ಅತೀ ದೊಡ್ಡದಾಗಿರುವ ಗೃಹ ಲಕ್ಷ್ಮೀ ಯೋಜನೆ ಜಾರಿಗೊಳಿಸುವ ಭಾಗ್ಯವನ್ನು, ಅವಕಾಶವನ್ನು ಒದಗಿಸಿಕೊಟ್ಟ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯವರಿಗೆ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅವರು ಈ ಅವಕಾಶ ನೀಡಿರದಿದ್ದರೆ ಇಂದು ನನಗೆ ಈ ಪ್ರಶಸ್ತಿ ಪಡೆಯುವ ಅವಕಾಶ ಬರುತ್ತಲೇ ಇರಲಿಲ್ಲ ಎಂದರು.
ಸುಮಾರು 70 ವರ್ಷಗಳ ಇತಿಹಾಸ ಹೊಂದಿರುವ ಬೆಂಗಳೂರು ಪ್ರೆಸ್ ಕ್ಲಬ್ ಬಹಳ ಉತ್ತಮವಾಗಿ ಕಾರ್ಯನಿರ್ವಹಿಸುತ್ತ ಬಂದಿರುವುದನ್ನು ಕೇಳಿದ್ದೇನೆ. ಪ್ರೆಸ್ ಕ್ಲಬ್ ಪ್ರತಿಷ್ಠಿತ ಪ್ರಶಸ್ತಿ ಪಡೆಯುವ ಸೌಭಾಗ್ಯ ನನಗೆ ಒದಗಿ ಬಂದಿದೆ. ಇದರಿಂದ ನನ್ನ ಜವಾಬ್ದಾರಿ ಹೆಚ್ಚಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಗೃಹಲಕ್ಷ್ಮೀ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದನ್ನು ಗುರುತಿಸಿ, ಎಲ್ಲ ಮಾಧ್ಯಮಗಳ ಪ್ರಾತಿನಿಧಿಕ ಸಂಸ್ಥೆಯಾಗಿರುವ ಪ್ರೆಸ್ ಕ್ಲಬ್ ಇಂತಹ ಪ್ರಶಸ್ತಿಯನ್ನು ಕೊಡುತ್ತಿರುವುದು, ಅದನ್ನು ಸ್ವೀಕರಿಸುತ್ತಿರುವುದು ನನ್ನ ಜೀವನದಲ್ಲಿ ಎಂದೂ ಮರೆಯಲಾರದ ಸಂದರ್ಭ ಎಂದೇ ಭಾವಿಸುತ್ತೇನೆ ಎಂದರು.
ಪ್ರತಿ ನಿತ್ಯ ಎಲ್ಲೇ ಹೋದರೂ ಮಾಧ್ಯಮ ಪ್ರತಿನಿಧಿಗಳು ನನ್ನ ಮುಂದೆ ಮೈಕ್ ಹಿಡಿದು ಮೇಡಂ ಗೃಹಲಕ್ಷ್ಮೀ ಹಣ ಯಾವಾಗ ಹಾಕ್ತೀರಿ, ಮೇಡಮ್ 2 ತಿಂಗಳ ಗೃಹಲಕ್ಷ್ಮೀ ಹಣ ಬಂದಿಲ್ಲ, ಮೇಡಮ್ ಗೃಹಲಕ್ಷ್ಮೀ ಯೋಜನೆ ನಿಲ್ಲಿಸ್ತೀರಂತೆ ನಿಜಾನಾ, ಮೇಡಮ್ ಗೃಹಲಕ್ಷ್ಮೀ ಹಣ ಅವರಿಗೆ ಬಂದಿಲ್ಲ, ಇವರಿಗೆ ಬಂದಿಲ್ಲ… ಹೀಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದರು. ವಿರೋಧ ಪಕ್ಷಗಳ ವ್ಯಾಪಕ ಟೀಕೆಗಳ ನಡುವೆಯೂ ಗೃಹಲಕ್ಷ್ಮೀ ಯೋಜನೆ ಇಂದು ಯಶಸ್ವಿಯಾಗಿದೆ ಎಂದು ಸಚಿವರು ತಿಳಿಸಿದರು.
ಎಲ್ಲ ಸವಾಲುಗಳನ್ನೂ ಎದುರಿಸಿ, ಈಗ 15 ತಿಂಗಳುಗಳ ಕಾಲ ನಿರಂತರ ಯಶಸ್ವಿಯಾಗಿ 1.26 ಕೋಟಿ ಮಹಿಳೆಯರ ಖಾತೆಗೆ ಹಣ ಜಮಾ ಆಗಿದೆ. ಜೊತೆಗೆ, ರಾಜ್ಯದ ಮೂಲೆ ಮೂಲೆಗಳಿಂದ ಗೃಹ ಲಕ್ಷ್ಮೀ ಯೋಜನೆಯ ಸದುಪಯೋಗದ ಸುದ್ದಿಗಳು ದಿನನಿತ್ಯ ಬರತೊಡಗಿವೆ. ಗೃಹಲಕ್ಷ್ಮೀ ಯೋಜನೆ ಕೋಟ್ಯಂತರ ಮಹಿಳೆಯರ ಪಾಲಿಗೆ ಸಂಜೀವಿನಿಯಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಮಾಧ್ಯಮಗಳ ಈ ರೀತಿಯ ಪ್ರೋತ್ಸಾಹಿಸುವ, ಒಳ್ಳೆಯ ಕೆಲಸವನ್ನು ಗುರುತಿಸುವ ಕೆಲಸ ಮುಂದುವರಿಯಲಿ, ಆಗಲೇ ನಮಗೂ ಇನ್ನಷ್ಟು ಉತ್ತಮ ಕೆಲಸ ಮಾಡುವುದಕ್ಕೆ ಉತ್ಸಾಹ ಬರುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಕೆ.ಎಚ್.ಮುನಿಯಪ್ಪ, ಶಾಸಕ ರಿಜ್ವಾನ್ ಅರ್ಷದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಆಯೇಷಾ ಖಾನಂ, ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಪದಾಧಿಕಾರಿಗಳು, ಪ್ರಶಸ್ತಿ ಪುರಸ್ಕೃತರು ಉಪಸ್ಥಿತರಿದ್ದರು.
ಸತ್ಯ ಬರೆಯೋಕೆ ಟ್ರೈ ಮಾಡಿ ನೋಡೋಣ: ಮಾಧ್ಯಮದವರಿಗೆ ಸಿಎಂ ಕರೆ
ಬೆಂಗಳೂರು :
ಎಲ್ಲಾ ಆರೋಗ್ಯಕರ ಟೀಕೆಗಳನ್ನು ಸ್ವಾಗತಿಸುತ್ತೇನೆ. ತಿದ್ದಿಕೊಳ್ಳುತ್ತೇನೆ. ಆದರೆ ರಾಜಕೀಯ ಕಾರಣಕ್ಕೆ ಸುಳ್ಳು ಸುಳ್ಳೇ ಟೀಕಿಸಿದರೆ ಐ ಡೋಂಟ್ ಕೇರ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಆಗಿ ನುಡಿದರು.
ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಕೊಡಮಾಡುವ 2024ನೇ ಸಾಲಿನ ವರ್ಷದ ವ್ಯಕ್ತಿ, ವಿಶೇಷ ಪ್ರಶಸ್ತಿ, ಸುವರ್ಣ ಮಹೋತ್ಸವ ಪ್ರಶಸ್ತಿ ಹಾಗೂ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದರು.
ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದ ಬಿಜೆಪಿಯವರೇ ನಮ್ಮ ಗ್ಯಾರಂಟಿಗಳನ್ನು ಕಾಪಿ ಮಾಡಿದ್ದಾರೆ. ನಮ್ಮ ಗ್ಯಾರಂಟಿಗಳನ್ನು ಬೇರೆ ಹೆಸರಲ್ಲಿ ಅವರು ಘೋಷಿಸಿದ್ದಾರೆ. ಆದರೂ ಮಹಾರಾಷ್ಟ್ರ ಚುನಾವಣೆ ವೇಳೆ ಕರ್ನಾಟಕದಲ್ಲಿ ಗ್ಯಾರಂಟಿಗಳು ಜಾರಿಯೇ ಆಗಿಲ್ಲ ಎಂದು ಸುಳ್ಳು ಜಾಹಿರಾತು ನೀಡಿದರು ಎಂದು ಸಿಎಂ ವ್ಯಂಗ್ಯವಾಡಿದರು.
ಇವತ್ತು “ಊಹಾ ಪತ್ರಿಕೋದ್ಯಮ ವ್ಯಾಪಕವಾಗುತ್ತಿದೆ. ಇದು ಅಪಾಯಕಾರಿ. ನಾನು ಇವತ್ತಿನವರೆಗೂ ಯಾವ ಮಾಧ್ಯಮದವರಿಗೂ ಯಾಕೆ ಹೀಗೆ ಬರಿದ್ರಿ ಅಂತ ಕೇಳಿಲ್ಲ. ಆದರೆ ನೀವು ಜನರ ಧ್ವನಿಯಾಗಿ ಕೆಲಸ ಮಡಬೇಕು. ಸಾಧ್ಯವಾದರೆ ಸತ್ಯ ಬರೆಯೋಕೆ ಟ್ರೈ ಮಾಡಿ ನೋಡೋಣ ಎಂದರು.
ಮನಸಾಕ್ಷಿಗೆ ತಕ್ಕಂತೆ ಮಾಧ್ಯಮಗಳು ವರದಿ ಮಾಡಿದರೆ ಸಮಾಜಕ್ಕೆ ಅದಕ್ಕಿಂತ ದೊಡ್ಡ ಸೇವೆ ಇಲ್ಲ. ಸುದ್ದಿಗಳನ್ನು ವೈಭವೀಕರಿಸುವುದು, ಮೂಡ ನಂಬಿಕೆಗಳನ್ನು ಬೆಂಬಲಿಸೋಕೆ ಹೋಗಬೇಡಿ. ನನ್ನ ಕಾರು ಮೇಲೆ ಕಾಗೆ ಕುಳಿತಿದ್ದಕ್ಕೆ ಜ್ಯೋತಿಷಿಗಳನ್ನು ಚಾನಲ್ ಗಳಿಗೆ ಕರೆಸಿ ಏನೆಲ್ಲಾ ಹೇಳಿಸಿದಿರಿ. ನಾನು 5 ವರ್ಷ ಮುಖ್ಯಮಂತ್ರಿಯಾಗಿ ಪೂರ್ಣಗೊಳಿಸಲ್ಲ ಎಂದು ತೋರಿಸಿದಿರಿ. ಆದರೆ ನಾನು ಐದು ವರ್ಷ ಪೂರೈಸಿ ಎರಡನೇ ಬಾರಿ ಸಿಎಂ ಆದೆ. ಈಗ ಹೇಳಿ ಕಾಗೆ ಸುದ್ದಿಯಿಂದ ಮಾಧ್ಯಮಗಳ ವಿಶ್ವಾಸಾರ್ಹತೆ ಕಡಿಮೆ ಆಯ್ತೋ ಇಲ್ವೋ ಎಂದು ಪ್ರಶ್ನಿಸಿದರು.
ನಾವು ಜನಪರ ಕೆಲಸ ಮಾಡದಿದ್ದಾಗ, ಕೊಟ್ಟ ಮಾತು ಈಡೇರಿಸದಿದ್ದಾಗ ಅದನ್ನು ಬರೆದು ಜನರ ಕಣ್ಣು ತೆರೆಸುವ ಹಕ್ಕು ಜವಾಬ್ದಾರಿ ಮಾಧ್ಯಮದವರ ಮೇಲಿದೆ. ಅದನ್ನು ನಿಭಾಯಿಸಿ ಎಂದು ಕರೆ ನೀಡಿದರು.
ನಾವು ಊಟಕ್ಕೆ ಸೇರಿ ಏನೋ ಮಾತಾಡಿರ್ತೀವಿ. ಆದರೆ ಮಾಧ್ಯಮಗಳೇ ಡೈಲಾಗ್ ಬರೆದು ಬಿಡ್ತಾರೆ. ನಮಗೆ ಗೊತ್ತೇ ಇರದ ವಿಷಯವನ್ನು ಅವರೇ ಡೈಲಾಗ್ ಬರೆದು ತೋರಿಸಿದ್ದಾರೆ ಎಂದು ಟೀಕಿಸಿದರು.
ಬುದ್ದ, ಬಸವ, ಅಂಬೇಡ್ಕರ್ ಹೇಳಿದ ಸಮ ಸಮಾಜದ ಆಶಯ ಈಡೇರಿಸುವ ದಿಕ್ಕಿನಲ್ಲಿ ವೃತ್ತಿಪರತೆ ನಿರ್ವಹಿಸಿದರೆ ಅದು ಸಮಾಜಕ್ಕೆ ಉಪಯೋಗವಾಗುತ್ತದೆ ಎಂದು ಎಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ಶುಭ ಹಾರೈಸಿದರು.
ಪ್ರಶಸ್ತಿ ಪುರಸ್ಕೃತರು ಇನ್ನಷ್ಟು ಜನಮುಖಿಯಾಗಿ ಕರ್ತವ್ಯ ನಿರ್ವಹಿಸಿ.
ವರ್ಷದ ವ್ಯಕ್ತಿ ಪ್ರಶಸ್ತಿ ಪುರಸ್ಕೃತ ಸಚಿವ ಎಂ.ಬಿ.ಪಾಟೀಲ್, ಸನ್ಮಾನಿತರಾದ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಕೆ.ಜೆ.ಜಾರ್ಜ್, ಕೆ.ಹೆಚ್.ಮುನಿಯಪ್ಪ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹಮದ್, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ, ಸಚಿವ ಜಮೀರ್ ಅಹಮದ್ ಖಾನ್ ಅವರ ಮಾಧ್ಯಮ ಸಂಯೋಜಕ ಲಕ್ಷ್ಮೀನಾರಾಯಣ್, ಚಲನ ಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲಾ ಅವರು ಉಪಸ್ಥಿತರಿದ್ದರು.