ಬೆಳಗಾವಿ :ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಹಿರಿಯ ಐಪಿಎಸ್ ಅಧಿಕಾರಿ ಸಂದೀಪ ಪಾಟೀಲ ಅವರಿಗೆ ರಾಷ್ಟ್ರಪತಿ ಪದಕ ಘೋಷಣೆಯಾಗಿದೆ.
ಸಂದೀಪ ಪಾಟೀಲ ಅವರು ಬೆಳಗಾವಿ ಸೇರಿದಂತೆ ರಾಜಧಾನಿ ಬೆಂಗಳೂರಿನಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ ಗಮನ ಸೆಳೆದಿದ್ದರು. ಅವರ ಅನುಪಮ ಸೇವೆ ಪರಿಗಣಿಸಿ ಇದೀಗ ರಾಷ್ಟ್ರಪತಿ ಪದಕಕ್ಕೆ ಅವರನ್ನು ಪರಿಗಣಿಸಲಾಗಿದೆ.
ಸಂದೀಪ ಪಾಟೀಲ ಸದ್ಯ ಹೆಚ್ಚುವರಿ ಪೊಲೀಸ್ ಕಮಿಷನರ್ (ಪಶ್ಚಿಮ), ಬೆಂಗಳೂರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಜನತಾ ದರ್ಶನ :
ಸಂದೀಪ ಪಾಟೀಲ ಅವರು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಆಗಿದ್ದ ಅವಧಿಯಲ್ಲಿ ಜನಸ್ನೇಹಿಯಾಗಿ ಪೊಲೀಸ್ ಇಲಾಖೆಯನ್ನು ಜನರ ಬಳಿಗೆ ಕೊಂಡೊಯ್ದ ಹಿರಿಮೆಗೆ ಪಾತ್ರರಾಗಿದ್ದರು. ಎಸ್ಪಿ ಕಚೇರಿಯಲ್ಲಿ ಜನತಾ ದರ್ಶನದ ಮೂಲಕ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದದ್ದ ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದರು. ಜನ ಸಂಪರ್ಕ ಸಭೆಗಳನ್ನು ನಡೆಸುವ ಮೂಲಕ ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದರು.
ಆದರೆ ಕಾಲಾನಂತರ ಸರಕಾರಿ ವರ್ಗಾವಣೆಯಂತೆ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿತ್ತು. ಇದನ್ನು ಖಂಡಿಸಿ ಜನ ಬೀದಿಗಿಳಿದಿದ್ದರು.
ಅಪರಾಧ ಪ್ರಕರಣಗಳು ಕಡಿಮೆಯಾಗಿದ್ದವು. ಆದ್ದರಿಂದ ಅವರ ವರ್ಗಾವಣೆ ಮಾಡಬಾರದು ಎಂದು ಬೆಳಗಾವಿ ಸೇರಿದಂತೆ ಜಿಲ್ಲೆಯಾದ್ಯಂತ ಪ್ರತಿಭಟನಾಕಾರರು ಹೋರಾಟ ಮಾಡಿದ್ದರು. ವರ್ಗಾವಣೆಯನ್ನು 24 ಗಂಟೆಯೊಳಗೆ ರದ್ದು ಪಡಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ವಿವಿಧ ಸಂಘಟನೆಗಳು ಪಕ್ಷಬೇಧ ಮರೆತು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದವು.