ಬೆಂಗಳೂರು :ನಾನಿದ್ದೇನೆ. ನಿನಗ್ಯಾಕೆ ಚಿಂತೆ. 20,000 ರೂ.ನನಗೆ ಕೊಡು. ನಾನು ಹೇಳಿದ ಹಾಗೆ ನೀನು ಕೇಳು. ರಾತ್ರಿ ಊಟಕ್ಕೆ ರೆಡಿ ಮಾಡು. ಕರೆ ಮಾಡು ಬಂದು ಎಲ್ಲವನ್ನೂ ಸರಿ ಮಾಡುತ್ತೇನೆ.
ಕರ್ನಾಟಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶಕುಮಾರ ಹೊಸಮನಿ ಅವರ ಮೇಲೆ ಬೆಂಗಳೂರು ಆರ್.ಟಿ.ನಗರದಲ್ಲಿರುವ ಗ್ರಂಥಾಲಯ ಸಹಾಯಕಿಯೊಬ್ಬರು ಮಾಡಿರುವ ಗಂಭೀರ ಆರೋಪ ಇದು.
ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶಕುಮಾರ ಹೊಸಮನಿ ಅವರೂ ಸೇರಿದಂತೆ ಇನ್ನೂ ಕೆಲವು ಅಧಿಕಾರಿಗಳ ವಿರುದ್ಧ ಸಹಾಯಕ ಸಿಬ್ಬಂದಿ ಮಾಡಿರುವ ಗಂಭೀರ ಆರೋಪ ಈಗ ಮುಖ್ಯಮಂತ್ರಿ ಕಚೇರಿ ವರೆಗೂ ತಲುಪಿದೆ.
ಈ ದೂರನ್ನು ಸಹಾಯಕ ಸಿಬ್ಬಂದಿ ಮುಖ್ಯಮಂತ್ರಿ ಅವರ ಕಚೇರಿಗೆ ತಲುಪುತ್ತಿದ್ದಂತೆ ಅ ಬಗ್ಗೆ ಇದನ್ನು ಸಂಬಂಧಿಸಿದ ಸಚಿವರ ಗಮನಕ್ಕೆ ತರಬೇಕು ಎಂಬ ಟಿಪ್ಪಣಿಯೊಂದಿಗೆ ಸಾಕ್ಷರತಾ ಖಾತೆ ಸಚಿವ ಮಧು ಬಂಗಾರಪ್ಪ ಅವರ ಆಪ್ತ ಕಾರ್ಯದರ್ಶಿಗೆ ಮುಖ್ಯಮಂತ್ರಿ ಕಚೇರಿಯಿಂದ ರವಾನೆ ಮಾಡಿದ್ದಾರೆ. ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ ಎಚ್, ಅಧೀಕ್ಷಕ ಆನಂದ ಶಿವಪ್ಪ ಹಡಪದ, ದ್ವಿತೀಯ ದರ್ಜೆ ಸಹಾಯಕ ರಾಘವೇಂದ್ರ ಅವರ ಮೇಲೂ ಈ ಸಹಾಯಕ ಸಿಬ್ಬಂದಿ ಲೈಂಗಿಕ ದೌರ್ಜನ್ಯ ಆರೋಪ ಮಾಡಿ ದೂರು ನೀಡಿದ್ದಾರೆ.
ಇವರೆಲ್ಲರೂ ಲೈಂಗಿಕ ದೌಜನ್ಯ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಜೊತೆಗೆ ಕರ್ತವ್ಯ ಲೋಪದ ಆರೋಪದ ಮೇರೆಗೆ ನನ್ನ ಎರಡು ವರ್ಷದ ಬಡ್ತಿಯನ್ನು ಸಹಾ ತಡೆಹಿಡಿದಿದ್ದಾರೆ ಎಂದು ನೊಂದ ಮಹಿಳೆ ವಿವರವಾಗಿ ಪ್ರಕರಣವನ್ನು ಉಲ್ಲೇಖಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಗ್ರಂಥಾಲಯ ಕೆಲಸ ಹಾಗೂ ಕೋವಿಡ್ ಕೆಲಸಗಳನ್ನು ಮಾಡಬೇಕಾಗಿತ್ತು. ಆಗ ನಾನು ಬಯಲು ರಂಗ ಮಂದಿರ ಶಾಖೆಯ ಗ್ರಂಥಾಲಯದಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೆ. ಆಗ ಶಾಖಾ ಗ್ರಂಥಾಲಯ ಸ್ಥಳಾಂತರಗೊಂಡಿದೆ. ಆ ಸಂದರ್ಭದಲ್ಲಿ ಎರಡು ರಸೀದಿ ಪುಸ್ತಕ ನಾಪತ್ತೆಯಾಗಿತ್ತು. ಅದರ ನನ್ನ ಯಾವ ತಪ್ಪು ಇಲ್ಲ ಎಂದು ನಿರ್ದೇಶಕಿ ಸರಸ್ವತಿ ಅವರು ಈಗಾಗಲೇ ನಡೆದ ತನಿಖೆಯಲ್ಲಿ ತಿಳಿಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.
ಈ ಸಂದರ್ಭದಲ್ಲಿ ನಾನು ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ ಕುಮಾರ ಹೊಸಮನಿ ಅವರನ್ನು ಭೇಟಿಯಾಗಿ ವಿಷಯವನ್ನು ಉಲ್ಲೇಖಿಸಿದಾಗ ಅವರು ರಾತ್ರಿ ಊಟಕ್ಕೆ ಮಾಡಿ ಇಡು ಎಂದು ಹೇಳಿದರು. ಆದರೆ ನಾನು ಊಟ ರೆಡಿ ಮಾಡಿ ಇಡಲು ಸಿದ್ದಳಿರಲಿಲ್ಲ.
2022ರ ಸೆಪ್ಟೆಂಬರ್ 29 ರಂದು ನಿರ್ದೇಶಕರ ಇನ್ನೊಂದು ಕೊಠಡಿಯಲ್ಲಿ 20,000 ರೂ. ಇಟ್ಟು ಬಂದೆ. ಆಗ ಅವರು ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂದು ಅಂದುಕೊಂಡೆ. ಆದರೆ ಊಟಕ್ಕೆ ರೆಡಿ ಮಾಡಿ ಮಾಡಲು ನನಗೆ ಇಷ್ಟವಿರದೇ ಇದ್ದ ಕಾರಣಕ್ಕೆ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಆರೋಪದಲ್ಲಿ ವಿವರಿಸಿದ್ದಾರೆ.
ಸಹಾಯಕ ಸಿಬ್ಬಂದಿಯ ಈ ಲೈಂಗಿಕ ದೌರ್ಜನ್ಯ ಕುರಿತ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ ಕುಮಾರ ಹೊಸಮನಿ ಅವರು ಮಹಿಳೆಯ ಆರೋಪದಲ್ಲಿ ಯಾವುದೇ ಹುರುಳಿಲ್ಲ. ರಸೀದಿ ಪುಸ್ತಕ ಕಳೆದು ಹೋಗಿರುವ ಆರೋಪ ನ್ಯಾಯಾಧೀಶರ ತನಿಖೆಯಲ್ಲಿ ಸಾಬೀತಾಗಿದೆ. ಲೆಕ್ಕಪರಿಶೋಧನೆಯಲ್ಲೂ ತಪ್ಪು ಮಾಡಿರುವುದು ಗೊತ್ತಾಗಿದೆ. ಇಲಾಖೆಯ ನಿಯಮದಂತೆ ನೋಟಿಸ್ ನೀಡಲಾಗಿದೆ. ಆದರೆ ಇಲಾಖೆ ಏಳಿಗೆ ಸಹಿಸಲಾಗದೆ ಕೆಲ ವ್ಯಕ್ತಿಗಳು ಷಡ್ಯಂತ್ರ ಮಾಡಿ ನನ್ನ ವಿರುದ್ಧ ತೇಜೋವಧೆಗೆ ಮುಂದಾಗಿರುವ ಅನುಮಾನ ಇದೆ ಎಂದು ಅವರು ಸಂದೇಹ ವ್ಯಕ್ತಪಡಿಸಿದ್ದಾರೆ.