ಕಾರ್ಕಳ:
ಕಾರ್ಕಳದಲ್ಲಿ ಈ ಬಾರಿ ಪಕ್ಷೇತರರಾಗಿ ಕಣಕ್ಕಿಳಿದಿರುವ
ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ವಿರುದ್ಧ ಅವರ ಒಂದು ಕಾಲದ ಬೆಂಬಲಿಗರೇ ಸಿಡಿದೆದಿದ್ದಾರೆ. ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಕಾರ್ಕಳಕ್ಕೆ ತೆರಳಿದ್ದ ಶ್ರೀರಾಮ ಸೇನೆಯ ಮಾಜಿ ನಾಯಕರು ಯಾವುದೇ ಕಾರಣಕ್ಕೂ ಈ ಬಾರಿ ಪ್ರಮೋದ ಮುತಾಲಿಕ್ ಅವರಿಗೆ ಕಾರ್ಕಳದಲ್ಲಿ ಮತ ಹಾಕದಂತೆ ಮನವಿ ಮಾಡಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ತೀವ್ರ ವಾಗ್ದಾಳಿ :
ಶ್ರೀ ರಾಮ ಸೇನೆಯ ಸಂಸ್ಥಾಪಕರಾದ ಪ್ರಮೋದ ಮುತಾಲಿಕ್ ನೈಜ ಹಿಂದುತ್ವದ ರಕ್ಷಣೆಗೋಸ್ಕರ ಚುನಾವಣೆ ಸ್ಪರ್ಧಿಸುತ್ತಿದ್ದಾರೆ ಎಂಬ ಸಂಗತಿ ತಿಳಿದು ಅವರ ಈ ನೈಜ ಹಿಂದುತ್ವದ ನಕಲಿ ಮುಖದ ಹಿಂದಿರುವ ಕೆಲ ಅಸಲಿ ಸಂಗತಿಯನ್ನು ಮುಗ್ಧ ಕರಾವಳಿಯ ಜನರಿಗೆ ತಿಳಿಸುವುದು ನಮ್ಮ ಆದ್ಯ ಕರ್ತವ್ಯ ಮತ್ತು ಅವರ ಮಾತಿಗೂ ಅವರ ಕೃತಿಗೂ ಯಾವುದೇ ಸಂಬಂಧವಿಲ್ಲ. ಉತ್ತರ ಕರ್ನಾಟಕದಲ್ಲಿ ನಮಗೆ ಮೋಸ ಮಾಡಿದ ಹಾಗೆ ತಾವು ಅವರನ್ನು ನಂಬಿ ಮೋಸ ಹೋಗಬೇಡಿ ಹಾಗೂ ನೈಜ ಹಿಂದುತ್ವ ಎಂದು ನಂಬಿ ನಕಲಿ ಹಿಂದುತ್ವಕ್ಕೆ ಯುವಕರು ಬಲಿಯಾಗದಿರಿ ಎಂದು ಶ್ರೀರಾಮ ಸೇನೆಯ ಮಾಜಿ ರಾಜ್ಯ ಸಂಚಾಲಕ ರವಿ ವಿ.
ಸಿಂದ್ಲಿಂಗ್ ತಿಳಿಸಿದರು.
ಅವರು ಕಾರ್ಕಳದಲ್ಲಿ ಸೋಮವಾರ ಪ್ರಮೋದ ಮುತಾಲಿಕ್ ಅವರ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದಿದರು.
ಪ್ರಮೋದ ಮುತಾಲಿಕರ ಹಿಂದುತ್ವದ ಪ್ರಖರ ಭಾಷಣದಿಂದ ಪ್ರಭಾವಿತರಾಗಿ ಉತ್ತರ ಕರ್ನಾಟಕದ ಭಾಗದಲ್ಲಿ 15 ವರ್ಷಗಳ ಕಾಲ ಹಿಂದು ಸಂಘಟನೆ ಬೆಳೆಸುವುದಕೋಸ್ಕರ ದುಡಿದರು. ಆದರೆ ಮುತಾಲಿಕ್ ಅವರ ಹಿಂದುತ್ವ ಕೇವಲ ಭಾಷಣಕ್ಕಾಗಿ ಮಾತ್ರ. ಹಿಂದುತ್ವ ಮತ್ತು ಅದರೊಳಗಿನ ಸತ್ಯ ಹಾಗೂ ವ್ಯವಹಾರಗಳೇ ಬೇರೆ. ಬೇರೆ ಬೇರೆ ರಾಜ್ಯದ ಯುವಕರ ಹೆಸರಿನಲ್ಲಿ ಸಂಗ್ರಹವಾದ ಹಣ ಹಿಂದುತ್ವಕ್ಕಾಗಿ ಹುತಾತ್ಮರಾದ ಹಿಂದು ಯುವಕರ ಮನೆಗೆ ಮುಟ್ಟಿಲ್ಲ.
ಉತ್ತರ ಕರ್ನಾಟಕ ಭಾಗದ ನಾವೆಲ್ಲರೂ ಅವರ ಸ್ವಾರ್ಥ ಹಾಗೂ ಜನದಾಹದ ಮನಸ್ಸಿನ ಅವರ ರಾಷ್ಟ್ರೀಯ ಹಿಂದು ಸೇನಾ ಪಕ್ಷದಿಂದ ಚುನಾವಣಾ ಕಣಕ್ಕಿಳಿಸಿ ನಮ್ಮನ್ನು ಬಲಿ ಹಾಕಿದರು. ಕರಾವಳಿಯ ಜನರು ಅವರಿಗೆ ಇಲ್ಲಿ ನೆಲೆ ನಿಲ್ಲುವುದಕ್ಕೆ ಅವಕಾಶ ಕೊಟ್ಟರೆ ನಮಗಾದ ಪರಿಸ್ಥಿತಿ ಈ ಜಿಲ್ಲೆಯ ಜನರಿಗೂ ಬರಬಹುದು ಎಂದು ಎಚ್ಚರಿಕೆ ನೀಡಿದರು.
ಮುತಾಲಿಕರ ನೈಜ ಹಿಂದುತ್ವದ ಭ್ರಮೆಗೆ ಸಿಲುಕಿ ನಾವೆಲ್ಲಾ ಮನೆ, ಮಠ, ಹೆತ್ತವರಿಂದ ದೂರವಾಗಿ ಜೈಲುವಾಸವನ್ನು ಅನುಭವಿಸುವಂತಹ ಪ್ರಮೇಯ ಬಂದೊದಗಿತ್ತು. ಆ ಸಂದರ್ಭದಲ್ಲಿ ಹತ್ತಾರು ವರ್ಷದಿಂದ ನಮ್ಮ ಬಗ್ಗೆ ಯಾವುದೇ ಕಾಳಜಿ ವಹಿಸದೇ ನಮ್ಮನ್ನು ಜೈಲಿನಲ್ಲಿ ಬಂಧಿಯಾಗುವಂತೆ ಮಾಡಿದರು ಎಂದು ಶ್ರೀರಾಮ ಸೇನೆಯ ಮಾಜಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ವಿಲಾಸ್ ಪವಾರ ತಿಳಿಸಿದರು.
ಇಡೀ ಕರ್ನಾಟಕಕ್ಕೆ ನಾನೊಬ್ಬನೇ ಹಿಂದುತ್ವವಾದಿ, ದೊಡ್ಡ ಆದರ್ಶ ಪುರುಷ ಎಂಬ ಹುಚ್ಚು ಭ್ರಮೆಯನ್ನು ತುಂಬಿ ಉತ್ತರ ಕರ್ನಾಟಕದ ಘಟಾನುಘಟಿ ಹಿಂದು ಕಾರ್ಯಕರ್ತರನ್ನು ಸಂಪೂರ್ಣ ಹಾಳು ಮಾಡಿ ಕಾರ್ಯಕರ್ತರ ಬದುಕಿಗೆ ಹಾಗೂ ಭವಿಷ್ಯಕ್ಕೆ ಕೊಳ್ಳಿ ಇಟ್ಟು ಕಾರ್ಕಳದ ವಿಧಾನಸಭೆಗೆ ಸ್ಪರ್ಧಿಸಲು ಬಂದಿದ್ದಾರೆ. ಇವರಿಗೆ ಹಿಂದುತ್ವದ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ. ಹಿಂದುತ್ವದ ವಿಚಾರದಲ್ಲಿ ಮಾತ್ರವಲ್ಲ ನೈತಿಕವಾಗಿಯೂ ಅವರು ಅಧಃಪತನ ಹೊಂದಿದ್ದಾರೆ. ಅವರ ಕಾಣದ ಮುಖವೊಂದು ನಿಮ್ಮ ಮುಂದೆ ತೆರೆದಿಡಲು ಕಾರ್ಕಳಕ್ಕೆ ಬಂದಿದ್ದೇವೆ.
ಮುತಾಲಿಕರ ಮಾತು, ಆವೇಶವನ್ನು ನಂಬಿ ನಮ್ಮನ್ನು ನಂಬಿಸಿ ಕತ್ತು ಕೊಯ್ದು ನಡು ನೀರಲ್ಲಿ ಕೈಬಿಟ್ಟ, ನಂಬಿದವರಿಗೆ ದ್ರೋಹ ಬಗೆದ, ಜೊತೆಗಿದ್ದವರನ್ನು ವಂಚಿಸಿ, ತುಳಿದು ಬೆಂಕಿಯಿಟ್ಟ ಅವರನ್ನು ಕರಾವಳಿಯ ಯುವಕರೇ ದಯವಿಟ್ಟು ನಂಬಬೇಡಿ. ನಮಗಾದ ದ್ರೋಹ, ವಂಚನೆ, ಮೋಸ ನಿಮಗೂ ಆಗದಿರಲಿ ಎಂದು ಈ ಮೂಲಕ ತಿಳಿಸಲು ಬಂದಿದ್ದೇನೆ ಎಂದರು.
ಶ್ರೀರಾಮ ಸೇನೆ ಬೆಳಗಾವಿ ವಿಭಾಗದ ಮಾಜಿ ಪ್ರಮುಖ ಶಿವಶಂಕರ್ ಖಾನಾಪುರ, ಬೆಳಗಾವಿ ಜಿಲ್ಲಾ ಮಾಜಿ ಪ್ರಮುಖ ದೀಪಕ್ ಪೂಜಾರ್, ಮಾಜಿ ಉತ್ತರ ಪ್ರಾಂತ್ಯ ಪ್ರಮುಖ್ ಉಮೇಶ್ ಅಲ್ಮೇಲ್ಕರ್, ಜಮಖಂಡಿ ತಾಲೂಕು ಮಾಜಿ ಪ್ರಮುಖ ಮಹೇಶ್ ಅರಾಕೇರಿ, ಬಾಗಲಕೋಟೆ ಜಿಲ್ಲಾ ಪ್ರಮುಖ್ ಜ್ಯೋತಿಬಾ, ಇನ್ನಿತರರು ಉಪಸ್ಥಿತರಿದ್ದರು.