ಧಾರವಾಡ :
ಬೆಂಗಳೂರು-ಹುಬ್ಬಳ್ಳಿ- ಧಾರವಾಡ ನಡುವೆ ಇಂದಿನಿಂದ ಆರಂಭವಾಗಿರುವ ವಂದೇ ಭಾರತ್ ರೈಲು ಬೆಳಗಾವಿಯಿಂದ ಆರಂಭಿಸಬೇಕು ಎಂಬ ಬೇಡಿಕೆ ಮೊದಲಿನಿಂದಲೂ ಇತ್ತು.
ಕೇಂದ್ರ ಸರ್ಕಾರ ಇದನ್ನು ಬೆಳಗಾವಿಯಿಂದ ಆರಂಭಿಸದೆ ಇರುವ ಬಗ್ಗೆ ಗಡಿನಾಡು ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಬೆಳಗಾವಿ ಜನತೆ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದರು. ಬೆಳಗಾವಿ ಜನತೆಯ ಕಿಡಿ ಕೊನೆಗೂ ಕೇಂದ್ರ ಸರಕಾರಕ್ಕೆ ತಲುಪಿದಂತಿದೆ. ಅದರಲ್ಲೂ ಹುಬ್ಬಳ್ಳಿಯ ಹಾಲಿ ಸಂಸದರು ಆಗಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮುಂದಿನ ದಿನಗಳಲ್ಲಿ ಬೆಳಗಾವಿಯಿಂದಲೂ ವಂದೇ ಭಾರತ್ ರೈಲು ಆರಂಭವಾಗಲಿದೆ ಎಂದು ಧಾರವಾಡದಲ್ಲಿ ಘೋಷಣೆ ಮಾಡಿದ್ದಾರೆ.
ಇಂದು ನಡೆದ ವಂದೇ ಭಾರತ್ ರೈಲು ಉದ್ಘಾಟನಾ ಕಾರ್ಯಕ್ರಮದಲ್ಲಿ ಈ ಭರವಸೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವಪೂರ್ಣ ಯೋಜನೆಯಲ್ಲಿ ವಂದೇ ಭಾರತ್ ರೈಲು ಸಂಚಾರ ಒಂದಾಗಿದೆ. ಈ ಸ್ವದೇಶಿ ರೈಲು ಮುಂದಿನ ಮೂರು ವರ್ಷಗಳಲ್ಲಿ 400 ವಂದೇ ಭಾರತ್ ರೈಲು ಓಡಿಸುವ ಗುರಿ ಇದೆ. ಬೆಳಗಾವಿ ಜನರಿಂದಲೂ ವಂದೇ ಭಾರತ್ ರೈಲಿಗೆ ಬೇಡಿಕೆ ಇದೆ. ಅದನ್ನು ಕೂಡ ಸರ್ಕಾರ ಈಡೇರಿಸುತ್ತದೆ ಎಂದು ತಿಳಿಸಿದರು.