ಬೆಳಗಾವಿ: ಇಂದಿನಿಂದ ಬೆಂಗಳೂರಿನಿಂದ ಬೆಳಗಾವಿಗೆ ದೇಶದ ಅತಿ ವೇಗದ ರೈಲು ವಂದೇ ಭಾರತ್ ರೈಲು ಸಂಚಾರ ಆರಂಭಿಸಲಿದೆ. ಆದರೆ, ಇದರ ಶ್ರೇಯಸ್ಸನ್ನು ತಮ್ಮದಾಗಿಸಿಕೊಳ್ಳಲು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಮಾಡುತ್ತಿರುವ ಹಾರಾಟ ಈಗ ನಗೆ ಪಾಟಲಿಗೆ ಗುರಿಯಾಗಿದೆ.
ಈ ಹಿಂದೆ ಬೆಂಗಳೂರು- ಹುಬ್ಬಳ್ಳಿಗೆ ಬರುತ್ತಿದ್ದ ವಂದೇ ಭಾರತ್ ರೈಲನ್ನು ಬೆಳಗಾವಿವರೆಗೂ ವಿಸ್ತರಿಸಬೇಕು ಎಂಬ ಹೋರಾಟ ಜೋರಾಗಿತ್ತು. ಆಗ ಸಂಸದರಾಗಿದ್ದ ಮಂಗಲಾ ಅಂಗಡಿ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಈ ಬಗ್ಗೆ ಸಾಕಷ್ಟು ಪ್ರಯತ್ನ ನಡೆಸಿದ್ದರು. ಕೆಲ ಕಾಲ ಈ ರೈಲು ಬೆಳಗಾವಿಗೆ ಬರುತ್ತಿತ್ತು. ನಂತರ ತಾಂತ್ರಿಕ ಕಾರಣ ನೀಡಿ ಅದನ್ನು ಕೇವಲ ಹುಬ್ಬಳ್ಳಿ- ಧಾರವಾಡಕ್ಕೆ ಮಾತ್ರ ಸೀಮಿತಗೊಳಿಸಲಾಗಿತ್ತು.
ನಂತರದ ದಿನಗಳಲ್ಲಿ ನಡೆದ ಬೆಳವಣಿಗೆಗಳಲ್ಲಿ ಈ ರೈಲನ್ನು ಬೆಳಗಾವಿಗೆ ಮತ್ತೆ ಆರಂಭಿಸಬೇಕು ಎಂದು ಇಲ್ಲಿನ ಜನಪ್ರತಿನಿಧಿಗಳು ಒತ್ತಾಯಿಸಿದ್ದರು. ಆದರೆ ಪ್ರಯತ್ನ ವಿಫಲವಾಗಿತ್ತು. ಈ ನಿಟ್ಟಿನಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಸಾಕಷ್ಟು ಒತ್ತಡ ಹೇರಿದ್ದರು. ಕೊನೆಗೂ ಇದಕ್ಕೆ ಸ್ಪಂದಿಸಿದ ಕೇಂದ್ರ ಸರಕಾರ ಬೆಳಗಾವಿ- ಬೆಂಗಳೂರು ನಡುವೆ ವಂದೇ ಭಾರತ್ ರೈಲು ಆರಂಭಿಸುವ ಘೋಷಣೆ ಮಾಡಿತ್ತು. ಇದೀಗ ಇಂದಿನಿಂದ ಬೆಳಗಾವಿ- ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಮಾಡಲಿದೆ. ಆದರೆ, ಈ ರೈಲು ಆರಂಭಿಸಲು ತಾವೇ ಕಾರಣ ಎಂದು ಬೆಳಗಾವಿ ಸಂಸದ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮತ್ತು ಕೇಂದ್ರದ ಪ್ರಭಾವಿ ಸಚಿವರು ಆಗಿರುವ ಪ್ರಹ್ಲಾದ ಜೋಶಿ ನೀಡಿರುವ ಪತ್ರಿಕಾ ಹೇಳಿಕೆಗಳು ಅತ್ಯಂತ ಹಾಸ್ಯಾಸ್ಪದವಾಗಿದೆ ಎನ್ನುವುದು ಬೆಳಗಾವಿ ಜನರ ಆಕ್ರೋಶದ ಮಾತುಗಳಾಗಿವೆ.
ಬೆಳಗಾವಿ-ಬೆಂಗಳೂರು ಸಂಚರಿಸುವ ಈ ರೈಲು ಸಂಚರಿಸುವ ದಿನಾಂಕ ಘೋಷಣೆಯಾಗುತ್ತಿದ್ದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಜಗದೀಶ ಶೆಟ್ಟರ ಅವರು ಈ ರೈಲು ಆರಂಭಕ್ಕೆ ತಾವೇ ಕಾರಣ ಎಂದು ಪೈಪೋಟಿಗೆ ಬಿದ್ದಂತೆ ಪತ್ರಿಕಾ ಹೇಳಿಕೆಗಳನ್ನು ನೀಡಿ ಜನರಿಗೆ ರಂಜನೆ ನೀಡಿದ್ದರು. ಆದರೆ, ಈ ಪ್ರಯತ್ನದ ಹಿಂದೆ ಬೆಳಗಾವಿ ಜಿಲ್ಲೆಯ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಶಕ್ತಿಮೀರಿ ಪ್ರಯತ್ನಿಸಿದ್ದನ್ನು ಜಿಲ್ಲೆಯ ಜನ ಮರೆಯಲು ಸಾಧ್ಯವಿಲ್ಲ. ಜಗದೀಶ ಶೆಟ್ಟರ ಅವರು ಸಂಸದರಾಗಿ ಒಂದೂವರೆ ವರ್ಷ ಪೂರ್ಣಗೊಂಡಿದೆ. ಆದರೆ, ಈ ಅವಧಿಯಲ್ಲಿ ಅವರಿಂದ ಬೆಳಗಾವಿ ಜಿಲ್ಲೆಗೆ ಕೇಳಿಕೊಳ್ಳುವಂತ ಯಾವುದೇ ಕೆಲಸ ಕಾರ್ಯಗಳು ಆಗಿಲ್ಲ. ಬೆಳಗಾವಿ ಜಿಲ್ಲೆಯವರನ್ನೇ ಸಂಸದರಾಗಿ ಆಯ್ಕೆ ಮಾಡಿದ್ದರೆ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಅನುಕೂಲವಾಗುತ್ತಿತ್ತು ಎನ್ನುವುದು ಹೆಸರು ಹೇಳಲು ಇಚ್ಚಿಸದ ಬಿಜೆಪಿ ನಾಯಕರ ಅಭಿಪ್ರಾಯವಾಗಿದೆ.
ವಂದೇ ಭಾರತ್ ರೈಲಿನ ಶ್ರೇಯಸ್ಸು ಪಡೆದುಕೊಳ್ಳಲು ಬಿಜೆಪಿಯಲ್ಲೇ ಕಿತ್ತಾಟ ! ಜಿದ್ದಿಗೆ ಬಿದ್ದು ಪತ್ರಿಕಾ ಹೇಳಿಕೆ ನೀಡಿದ್ದ ಪ್ರಹ್ಲಾದ ಜೋಶಿ, ಜಗದೀಶ ಶೆಟ್ಟರ: ಬೆಳಗಾವಿ ಸಂಸದರ ನಡೆಗೆ ಗಡಿನಾಡಿನಲ್ಲಿ ರೋಷಾವೇಶ
