ಚಿಕ್ಕೋಡಿ- ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಅತ್ಯಂತ ಕಡಿಮೆ ಸಂಬಳಕ್ಕೆ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರಿಗೆ ಕನಿಷ್ಠ ವೇತನ, ಉದ್ಯೋಗ ಭದ್ರತೆ, ಮೆರಿಟ್ ಪದ್ಧತಿ ಕೈ ಬಿಟ್ಟು ಸೇವಾ ಹಿರಿತನಕ್ಕೆ ಆದ್ಯತೆ ನೀಡುವದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಫೆ.18ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಅತಿಥಿ ಶಿಕ್ಷಕರ ಸಂಘದಿಂದ ಹಮ್ಮಿಕೊಳ್ಳಲಾಗಿರುವ ಹೋರಾಟಕ್ಕೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅತಿಥಿ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲಿಸುವಂತೆ ಕರ್ನಾಟಕ ಅತಿಥಿ ಶಿಕ್ಷಕರ ಸಂಘದ ಚಿಕ್ಕೋಡಿ ಜಿಲ್ಲಾ ಉಪಾಧ್ಯಕ್ಷ ಪ್ರಭಾಕರ ತರಾಳ ಪತ್ರಿಕಾ ಪ್ರಕಟಣೆಯ ಮೂಲಕ ಕರೆ ನೀಡಿದ್ದಾರೆ.
ಇದೊಂದು ನಿರ್ಣಾಯಕ ಹೋರಾಟವಾಗಿದ್ದು, ಕರ್ನಾಟಕ ರಾಜ್ಯಾದಾದ್ಯಂತ ಕನಿಷ್ಠ ವೇತನಕ್ಕೆ ಕಳೆದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬರುತ್ತಿರುವ ಅತಿಥಿ ಶಿಕ್ಷಕರ ಭವಿಷ್ಯದ ಸವಾಲು ನಮ್ಮೆಲ್ಲರ ಎದುರಿಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಸಿಗದ ಹೊರತು ಯಾರೂ ಕೂಡ ವಿರಮಿಸಬಾರದು. ಈ ನಿಟ್ಟಿನಲ್ಲಿ ಈ ಹಿಂದೆಯೂ ಅನೇಕ ಬಾರಿ ಹೋರಾಟಗಳಾಗಿದ್ದರೂ ಯಾವುದೇ ಪ್ರಯೋಜನಗಳಾಗಿಲ್ಲ. ಆದರೆ ಈ ಬಾರಿ ಮಾಡು ಇಲ್ಲವೇ ಮಡಿ ಎಂಬ ಅಂತಿಮ ಹೋರಾಟ ನಮ್ಮದಾಗಲಿದೆ ಎಂದಿದ್ದಾರೆ.