ಬೆಳಗಾವಿ: ಕನ್ನಡ ಮಾತನಾಡು ಎಂದಿದ್ದಕ್ಕೆ ಹಲ್ಲೆಗೊಳಗಾದ ಕಂಡಕ್ಟರ್ ವಿರುದ್ಧ ದಾಖಲಾಗಿದ್ದ ಪೋಕ್ಸೋ ಕೇಸ್ ಗೆ ತಿರುವು ಸಿಕ್ಕಿದೆ. ಅಪ್ರಾಪ್ತೆಯ ಪೋಷಕರು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ, ಪೋಕ್ಸೋ ಕೇಸು ವಾಪಸ್ ಪಡೆದಿರುವುದಾಗಿ ಸ್ಪಷ್ಟಪಡಿಸಿದರು.
ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಪೋಷಕರು, ಬೆಳಗಾವಿಯಿಂದ ಬಾಳೇಕುಂದ್ರಿಗೆ ಬಾಲಕಿ ಬರುತ್ತಿದ್ದಳು. ಟಿಕೆಟ್ ಪಡೆಯುವ ಸಂಬಂಧ ಆಗಿರುವ ಜಗಳ ಇದು. ಇದನ್ನು ಕನ್ನಡ, ಮರಾಠಿ ಎಂಬ ವಿವಾದ ಮಾಡಿ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಹೇಳಿದರು.
ನಾವು ಕನ್ನಡದ ಅಭಿಮಾನಿಗಳು, ನಮ್ಮಲ್ಲಿ ಜಾತಿ ಭೇದ ಭಾವ ಇಲ್ಲ. ವಿನಾಕಾರಣ ಕನ್ನಡ, ಮರಾಠಿ ಎಂದು ಸುಳ್ಳು ಪ್ರಚಾರ ಮಾಡುವುದು ಸರಿಯಲ್ಲ. ಇದನ್ನು ಮುಂದಿಟ್ಟುಕೊಂಡು ಕರ್ನಾಟಕ, ಮಹಾರಾಷ್ಟ್ರ ನಡುವೆ ಜಗಳ ಆರಂಭವಾಗಿದೆ. ನಮ್ಮ ಮಗಳಿಗೆ ಅನ್ಯಾಯವಾಗಿದೆ. ನಾವು ಪ್ರಕರಣ ವಾಪಸ್ ಪಡೆಯುತ್ತೇವೆ, ಇದನ್ನು ಇಲ್ಲಿಗೆ ನಿಲ್ಲಿಸಬೇಕು. ಕೇಸ್ ಸ್ವ ಇಚ್ಛೆಯಿಂದ ವಾಪಸ್ ಪಡೆಯುತ್ತಿದ್ದೇವೆ. ನಮ್ಮ ಮೇಲೆ ಯಾವುದೇ ಒತ್ತಡ ಇಲ್ಲ ಎಂದು ಹೇಳಿದ್ದಾರೆ.