ಬೆಳಗಾವಿ :
ವಿಶ್ವ ಜನಸಂಖ್ಯಾ ದಿನವು ಇತಿಹಾಸದ ಮಹತ್ವ ದಿನಗಳಲ್ಲಿ ಒಂದಾಗಿದ್ದು, ಭಾರತದ ಜನಸಂಖ್ಯೆಯನ್ನು ತಡೆಗಟ್ಟಲು ಪ್ರತಿಯೊಬ್ಬ ಫಲಾನುಭವಿಯನ್ನು ತಲುಪಿ ಸ್ಥಿರೀಕರಣವನ್ನು ಗುರುತಿಸುವ ಕನಸನ್ನು ಹೊಂದಿದೆ. ಕಳೆದ ೧೩ ವರ್ಷಗಳಿಂದ ದೇಶಾದ್ಯಂತ ಪ್ರತಿ ವರ್ಷ ಒಂದು ತಿಂಗಳ ಅಭಿಯಾನವನ್ನು ಆಚರಿಸಲು ನಿರ್ಧರಿಸಲಾಗಿದ್ದು, ಅದರಂತೆ ಈ ವರ್ಷವು ಸಹ ಆಚರಿಸಲು ತೀರ್ಮಾನಿಸಲಾಗಿದೆ.
ಸಮುದಾಯ ಜಾಗೃತೀಕರಣ ಪಾಕ್ಷಿಕ (ದಂಪತಿ ಸಂರ್ಪಕ ಪಾಕ್ಷಿಕ) ಜೂನ್ ೨೭ ರಿಂದ ಜುಲೈ ೧೦ರ ವರೆಗೆ ಹಾಗೂ ಜನಸಂಖ್ಯೆ ಸ್ಥಿರೀಕರಣ ಪಾಕ್ಷಿಕ: ಜುಲೈ ೧೧ ರಿಂದ ಜುಲೈ ೨೪ರ ವರೆಗೆ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ.
ಈ ವರ್ಷದ ಘೋಷವಾಕ್ಯ “ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ, ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡು ಸಂತೋಷ ಮತ್ತು ಸಮೃದ್ಧಿಯ ಜೀವನವನ್ನು ಆಯ್ಕೆ ಮಾಡಿಕೊಳ್ಳುತ್ತೇವೆಂದು ಪ್ರತಿಜ್ಞೆಯನ್ನು ಮಾಡೋಣ” ಎಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ.
ವಿಶ್ವದ ಜನಸಂಖ್ಯೆಯು ೫೦೦ ಕೋಟಿ ತಲುಪಿದ ದಿನ ೧೯೮೭ರ ಜುಲೈ-೧೧ನೇ ದಿನಾಂಕದಿಂದ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಜನಸಂಖ್ಯಾ ಸ್ಥಿರೀಕರಣವು ದೇಶದ ಅಭಿವೃದ್ದಿಗೆ ಸಹಾಯಕವಾಗುತ್ತಿದೆ. ಹೆಚ್ಚು ಬೆಳೆಯುತ್ತಿರುವ ಜನಸಂಖ್ಯೆಯು ಜಾಗತಿಕ ಸಮಸ್ಯಗಳಿಗೆ ನಿರ್ಣಾಯಕ ವಿಷಯವಾಗಿದೆ. ಜನಸಂಖ್ಯೆಯಿಂದ ಸಂಪನ್ಮೂಲಗಳು ಸಮರ್ಥನೀಯವಲ್ಲದ ರೀತಿಯಲ್ಲಿ ಖಾಲಿಯಾಗುತ್ತಿವೆ. ಇದರಿಂದ ಪ್ರಕೃತಿಯ ಮೇಲೆ ಪರಿಣಾಮವನ್ನು ಬೀರಿ ಭೂಗೋಳಕ್ಕೆ ತೊಂದರೆಯಾಗಿ ವಾತಾವಾರಣದ ಕಾಲಘಟ್ಟಗಳು ಬದಲಾಗುತ್ತಿವೆ. ಮಳೆ ಬೆಳೆಯಲ್ಲಿ ಬದಲಾವಣೆ ಜೀವಹಾನಿ ಹಾಗೂ ರೋಗರುಜಿಗಳು ಹೆಚ್ಚಾಗುವದು ಕಂಡುಬರುತ್ತೀವೆ. ಜನಸಂಖ್ಯೆ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಜಾಗೃತಿ ನೀಡಲಾಗುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದ ಗರ್ಭಾವಸ್ಥೆಯಲ್ಲಿ ಹಾಗೂ ಹೆರಿಗೆ ಸಮಯದಲ್ಲಿ ಮಹಿಳೆಯರು ಎದುರುಸುತ್ತಿರುವ ಆರೋಗ್ಯ ಸಮಸ್ಯಗಳನ್ನು ಎದುರಿಸಲು ಕುಟುಂಬ ಯೋಜನೆ ಲಿಂಗ ಸಮಾನತೆ, ತಾಯಿ ಆರೋಗ್ಯವನ್ನು ನಿಭಾಯಿಸಲು ಜಿಲ್ಲೆಯಲ್ಲಿ ೬೧೬ ಉಪಕೇಂದ್ರಗಳು, ೧೩೯ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ೧೬ ಸಮುದಾಯ ಆರೋಗ್ಯ ಕೇಂದ್ರಗಳು, ೯ ಸಾರ್ವಜನಿಕ ಆಸ್ಪತ್ರೆ, ೧ ಜಿಲ್ಲಾ ಆಸ್ಪತ್ರೆ ಹಾಗೂ ವಿಶೇಷವಾಗಿ ೫ ತಾಯಿ ಮಕ್ಕಳ ಆಸ್ಪತ್ರೆಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ಸಮುದಾಯ ಜಾಗೃತೀಕರಣ ಪಾಕ್ಷಿಕದಲ್ಲಿ ಸಮುದಾಯಕ್ಕೆ ಕುಟುಂಬ ಯೋಜನೆಗಳ ಮಹತ್ವ ಜನಸಂಖ್ಯೆಯಿಂದಾಗುವ ಪರಿಣಾಮಗಳ ಕುರಿತು ಆರೋಗ್ಯ ಶಿಕ್ಷಣವನ್ನು ಗ್ರಾಮ ಮಟ್ಟದಲ್ಲಿ ಆಶಾ, ಅಂಗನವಾಡಿ, ಆರೋಗ್ಯ ಇಲಾಖೆಯ ಎಲ್ಲ ಹಂತದ ಅಧಿಕಾರಿ ಮತ್ತು ಸಿಬ್ಬಂದಿಗಳ ತಾಯಿಂದಿರ ಸಭೆ ಗುಂಪು ಸಭೆಗಳನ್ನು ಆಯೋಜನೆ ಮಾಡಲಾಗುತ್ತಿದೆ. ಹಾಗೂ ಜಾಥಾಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಮದುವೆ ವಯಸ್ಸು, ಮಕ್ಕಳ ಜನನದ ನಡುವಿನ ಅಂತರ, ಕುಟುಂಬ ಯೋಜನೆಯ ವಿಧಾನಗಳು ಮತ್ತು ಬಳಕೆ ಹಾಗೂ ಕುಟುಂಬ ಯೋಜನೆಗಳಲ್ಲಿ ಪುರುಷರ ಸಹಬಾಗಿತ್ವವನ್ನು ಹೆಚ್ಚಿಸುವದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ.
ಜನಸಂಖ್ಯಾ ಸ್ಥಿರೀಕರಣ ಪಾಕ್ಷಿಕದಲ್ಲಿ ಅರ್ಹ ಫಲಾನುಭವಿಗಳಿಗೆ ಕುಟುಂಬ ಯೋಜನೆಯ ವಿಧಾನಗಳ ಆಯ್ಕೆ ಬಗ್ಗೆ ಸಮಾಲೋಚನೆಯನ್ನು ನಡೆಸಿ ಕುಟುಂಬ ಯೋಜನೆಯ ವಿಧಾನಗಳ ಆಯ್ಕೆಗಳ ಸ್ವಾತಂತ್ರ್ಯವನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗಿದೆ. ಅವರಿಗೆ ಬೇಕಾದ ಸೇವಾ ಸೌಲಭ್ಯಗಳನ್ನು ಮುಟ್ಟಿಸಲಾಗುವುದು. ಗರ್ಭನಿರೋಧಕಗಳಲ್ಲಿ ತಾತ್ಕಾಲಿಕ ಮತ್ತು ಶಾಶ್ವತ ಎರಡು ವಿಧಾನಗಳಿದ್ದು ಫಲಾನುಭವಿಯು ಇಚ್ಚಿಸಿದ ಸೇವೆಯನ್ನು ನೀಡಲಾಗುತ್ತಿದೆ. ತಾತ್ಕಾಲಿಕ ವಿಧಾನದಲ್ಲಿ ಪುರುಷರಿಗೆ ನಿರೋದ್, ಸ್ತ್ರಿಯರಿಗಾಗಿ ಗರ್ಭನಿರೋಧಕ ನುಂಗುವ ಗುಳಿಗೆಗಳು, ಮಾಲಾ-ಎನ್ ಮಾತ್ರೆಗಳು, ಛಾಯಾ ಮಾತ್ರೆ ಮತ್ತು ತುರ್ತು ಗರ್ಭನಿರೋಧಕ ಮಾತ್ರೆಗಳು ಹಾಗೂ ಅಂತರ ಇಂಜೆಕ್ಷನ್ ನೀಡಲಾಗುತ್ತಿದೆ. ಅದರಂತೆ ಶಾಶ್ವತ ವಿಧಾನಗಳಲ್ಲಿ ಪುರುಷರಿಗೆ ಕುಟುಂಬ ಯೋಜನೆಯಲ್ಲಿ ಪುರುಷರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಸುಲಭ, ಗಾಯವಿಲ್ಲದ, ಹೊಲಿಗೆ ಇಲ್ಲದ ಮತ್ತು ಸರಳ ವಿಧಾನವಾಗಿ ಪುರುಷ ಸಂತಾನ ನಿರೋಧಕ (ಎನ್.ಎಸ್.ವ್ಹಿ) ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗುತ್ತಿದೆ. ಅದರಂತೆ ಸ್ತ್ರಿಯರಿಗೆ ಎರಡು ವಿಧಾನಗಳ ಮೂಲಕ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗುತ್ತಿದೆ. ಅರ್ಹ ಫಲಾನುಭವಿಗಳು ಈ ಕಾರ್ಯಕ್ರಮದ ಸದುಪಯೋಗವನ್ನು ಪಡಿಸಿಕೊಳ್ಳಲು ವಿನಂತಿಸಿದೆ.
೨೦೨೨-೨೩ನೇ ಸಾಲಿನಲ್ಲಿ ಜನಸಂಖ್ಯಾ ನಿಯಂತ್ರಣದಡಿಯಲ್ಲಿ ೪೨೩೨೫ ಫಲಾನುಭವಿಗಳಿಗೆ ಗರ್ಭನಿರೋಧಕ “ಮಾಲಾ” ನುಂಗುವ ಮಾತ್ರೆಗಳನ್ನು, ೬೩೪೮೫ ಫಲಾನುಭವಿಗಳಿಗೆ “ನಿರೋಧ”ನ್ನು ನೀಡಲಾಗಿದೆ. ೪೬೬೪ ಫಲಾನುಭವಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ “೩೮೦ ಮತ್ತು ೩೭೫ ವಂಕಿಧಾರಣೆ” ಮಾಡಲಾಗಿದೆ. ಹೆರಿಗೆ ಆದ ಸ್ಥಳದಲ್ಲಿ ಅಳವಡಿಸುವ “ಪಿ.ಪಿ.ಐ.ಯು.ಸಿ.ಡಿ” ಯನ್ನು ೮೦೦೪ ಫಲಾನುಭವಿಗಳಿಗೆ ಅಳವಡಿಸಲಾಗಿದೆ. ೪೩೬೯ ಫಲಾನುಭವಿಗಳಿಗೆ ತುರ್ತು ಗರ್ಭನಿರೋಧಕ ನುಂಗವ ಮಾತ್ರೆ “ಇ.ಸಿ.ಪಿ”ಗಳನ್ನು ನೀಡಲಾಗಿದೆ. ೮೪೬೨ ಫಲಾನುಭವಿಗಳಿಗೆ ನೂತನ ಗರ್ಭನಿರೋಧಕ ಮಾತ್ರೆ “ಛಾಯಾ” ನೀಡಲಾಗಿದೆ. ಅರ್ಹ ಫಲಾನುಭವಿಗಳಿಗೆ ಗರ್ಭ ನಿರೋಧಕ ಚುಚ್ಚುಮದ್ದು “ಅಂತರ” ನೀಡಲಾಗಿದೆ. ಜಿಲ್ಲೆಯ ಎಲ್ಲ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ೬೫೫೫ ಫಲಾನುಭವಿಗಳಿಗೆ ಲೇಪ್ರೋಸ್ಕೋಪಿ ಶಾಶ್ವತ ಸಂತಾನ ನಿರೋಧಕ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದೆ. ೭೨೫೯ ಫಲಾನುಭವಿಗಳಿಗೆ ಜಿಲ್ಲೆಯ ಆಯ್ದ ಆರೋಗ್ಯ ಸಂಸ್ಥೆಗಳಲ್ಲಿ ಮಿನಿಲ್ಯಾಪ್ ಶಾಶ್ವತ ಸಂತಾನ ನಿರೋಧಕ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದೆ. ಹಾಗೂ ನುರಿತ ತಜ್ಞ ವೈದ್ಯರ ೧೦೨ ಫಲಾನುಭವಿಗಳಿಗೆ ಪುರುಷ ಸಂತಾನ ನಿರೋಧಕ(ಎನ್.ಎಸ್.ವ್ಹಿ) ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದೆ.
೨೦೨೩-೨೪ನೇ ಸಾಲಿನಲ್ಲಿ ಅರ್ಹ ಫಲಾನುಭವಿಗಳು ಕುಟುಂಬ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಗ್ರಾಮದ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕು ಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.