ಬೆಳಗಾವಿ : ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು(ಕಾ&ಸು) ಹಾಗೂ ಉಪ ಪೊಲೀಸ್ ಆಯುಕ್ತರು(ಅ&ಸಂ) ಬೆಳಗಾವಿ ನಗರ ಅವರ ಮಾಗದರ್ಶನದಲ್ಲಿ ನಗರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸ್ ಇನ್ಸ್ಪೆಕ್ಟರ್ ನಂದೀಶ್ವರ ಕುಂಬಾರ ಹಾಗೂ ಅವರ ತಂಡ ಶುಕ್ರವಾರ ದಿ: 18/10/2024 ರಂದು ಸಾಯಂಕಾಲ ಸಾಂಗಲಿಯಿಂದ ಹುಬ್ಬಳ್ಳಿ ಕಡೆಗೆ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಯಾವುದೇ ಸೂಕ್ತ ದಾಖಲೆಗಳಿಲ್ಲದೇ ಹಣವನ್ನು ಸಾಗಾಣೆ ಮಾಡುತ್ತಿದ್ದ ಮಾಹಿತಿ ಮೇರೆಗೆ ಈ ವಾಹನವನ್ನು ವಶಕ್ಕೆ ಪಡೆದು, ಹಣ ಸಾಗಾಣೆ ಮಾಡುತ್ತಿದ್ದ ಸಚಿನ್ ಮೇನಕುದಳಿ, ಸಾ: ಸಾಂಗಲಿ, ಮಹಾರಾಷ್ಟ್ರ ಹಾಗೂ ಮಾರುತಿ ಮಾರಗುಡೆ, ಸಾ: ಸಾಂಗಲಿ, ಮಹಾರಾಷ್ಟ್ರ ಇವರನ್ನು ವಶಕ್ಕೆ ಪಡೆದಿರುತ್ತಾರೆ.
ಇವರಿಂದ ಒಟ್ಟು ನಗದು ಹಣ ರೂ. 2,73,27,500/- ಗಳನ್ನು ವಶಪಡಿಸಿಕೊಂಡಿದ್ದು, ಈ ವಾಹನದಲ್ಲಿ ಅಕ್ರಮವಾಗಿ ಹಣ ಸಾಗಾಣೆ ಮಾಡಲು ವಾಹನದ ಕ್ಯಾಬಿನ್ನಲ್ಲಿ ಮಾರ್ಪಾಡು ಮಾಡಿದ್ದು ಕಂಡು ಬಂದಿದ್ದು, ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಪ್ತದ ಹಣದ ಬಗ್ಗೆ ಕುಲಂಕುಶವಾದ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇದೀಗ ಉಭಯ ರಾಜ್ಯಗಳ ನಡುವೆ ಅಕ್ರಮ ಹಣ ಸಾಗಾಟ ನಡೆಯುವ ಕುರಿತು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.