ಬೆಳಗಾವಿ : ಮನೆಬಾಗಿಲು ಮುರಿದು ಚಿನ್ನಾಭರಣ ದೋಚುತ್ತಿದ್ದ ಆರೋಪದ ಮೇಲೆ ಕುಖ್ಯಾತ ಕಳ್ಳನನ್ನು ಬಂಧಿಸಿರುವ ಚನ್ನಮ್ಮನ ಕಿತ್ತೂರು ಪೊಲೀಸರು ಆತನಿಂದ ಐದು ಕಡೆಗಳಲ್ಲಿ ಕಳ್ಳತನ ಮಾಡಿದ್ದ ₹20.30 ಲಕ್ಷ ಕಿಮ್ಮತ್ತಿನ 203 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ರುಕ್ಕಿಣಿ ನಗರದ ನಿತೇಶ ಉರ್ಫ್ ದೀಪು ಜಗನ್ನಾಥರಾವ್ ಢಾಪಳೆ (42) ಬಂಧಿತ ಆರೋಪಿ. ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
‘ಕಳೆದ ವರ್ಷ ಜುಲೈ ತಿಂಗಳಲ್ಲಿ ಇಲ್ಲಿನ ವಿದ್ಯಾಗಿರಿಯಲ್ಲಿರುವ ಕೀಲಿ ಹಾಕಿದ್ದ ಪ್ರವೀಣ ಇಟಗಿ ಅವರ ಹಿತ್ತಲಿನ ಬಾಗಿಲು ಮುರಿದು ನಗದು ಸೇರಿ ₹11.60 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ದೋಚಿಕೊಂಡು ಪರಾರಿಯಾಗಿದ್ದನು. ಈ ಪ್ರಕರಣದ ಬೆನ್ನು ಹತ್ತಿದ ಕಿತ್ತೂರು ಪೊಲೀಸರು, ಇದನ್ನು ಸೇರಿ ಕಿತ್ತೂರು ಠಾಣಾ ವ್ಯಾಪ್ತಿಯಲ್ಲಿಯ ಮೂರು ಪ್ರತ್ಯೇಕ ಪ್ರಕರಣ, ಬೈಲಹೊಂಗಲ ಮತ್ತು ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯ ತಲಾ ಒಂದು ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಡಿವೈಎಸ್ ಪಿ ವೀರಯ್ಯ ಹಿರೇಮಠ ಗುರುವಾರ ಪತ್ರಕರ್ತರಿಗೆ ತಿಳಿಸಿದರು.
ಬಂಧಿತನ ಮೇಲೆ ಬೆಳಗಾವಿ ನಗರ, ಗದಗ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯದಲ್ಲಿಯೂ ಕಳ್ಳತನ ಆರೋಪದ ಪ್ರಕರಣಗಳಿವೆ ಎಂದು ಅವರು ಮಾಹಿತಿ ನೀಡಿದರು.