ಬೆಳಗಾವಿ: ಪ್ರಜಾಪ್ರಭುತ್ವದ ಉದ್ದೇಶಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಇಂದಿನ ಓದು ಬರಹಗಳು ಸಾಗಬೇಕಿದೆ.ಸಂವಿಧಾನದ ಆಶಯಗಳನ್ನು ಕಟ್ಟಿಕೊಡುವ ಬರವಣಿಗೆಯನ್ನು ಇಂದಿನ ಯುವ ಕವಿಗಳು ಮಾಡಬೇಕಿದೆ.ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಅವರ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾವ್ಯಗಳು ಇಂದು ಪ್ರಸ್ತುತವಾಗಿವೆ. ಈ ನಿಟ್ಟಿನಲ್ಲಿ ಕವಿಗಳೆ ತಮ್ಮ ಕವನಗಳಿಗೆ ರಾಯಭಾರಿಗಳಿಗಾಗಿ ದೇಶವನ್ನು ಬಹುತ್ವದ ನೆಲೆಯಲ್ಲಿ ಕಟ್ಟಿಕೊಡುವ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ.ಕುವೆಂಪು ಅವರ ವೈಚಾರಿಕ ಚಿಂತನೆಗಳ ಪ್ರಜ್ಞೆಯಲ್ಲಿ ಅರಳಿದ ಕಾವ್ಯಗಳ ಮೂಲಕ ಪ್ರಜ್ಞಾವಂತರಾದ ನಾವು ಭಾರತೀಯ ಕಾವ್ಯಗಳ ಬಹುತ್ವದ ನೆಲೆಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನಾವು ಸಾಗಬೇಕು.ಬಡ ಮತ್ತು ಮಧ್ಯಮ ವರ್ಗದ ಹಾಗೂ ಕೂಲಿ ಕಾರ್ಮಿಕರ ಬದುಕು ಇಂದು ಚಿಂತಾಜನಕವಾಗಿದ್ದು ಸಾಹಿತಿಗಳಾದವರು ತಮ್ಮ ಸಶಕ್ತ ಕಾವ್ಯಗಳ ಮೂಲಕ ಆಳುವ ವರ್ಗವನ್ನು, ಅಧಿಕಾರಿ ಶಾಹಿಗಳನ್ನು ಸದಾ ಪ್ರಶ್ನಿಸುತ್ತ ಸಾಮಾಜೀಕರಣದ ಸಮಗ್ರ ಅಭಿವೃದ್ಧಿಗೆ ಇರುವ ಎಲ್ಲಾ ತೊಡಕುಗಳನ್ನು ನಿವಾರಿಸುವ ಹೊಣೆಗಾರಿಗೆ ಸಾಮ್ರಾಜ್ಯಶಾಹಿಗಿದೆ ಎಂಬುದನ್ನು ಎಚ್ಚರಿಸುತ್ತಿರಬೇಕು.ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್ .ಎನ್ ಮುಕುಂದರಾಜ್ ಕರೆ ನೀಡಿದರು.
ಸೋಮವಾರ ಬೆಳಗಾವಿಯಲ್ಲಿ ಸಾಹಿತ್ಯ ಅಕಾಡೆಮಿ ಆಯೋಜಿಸಿದ ಕಿತ್ತೂರು ಕರ್ನಾಟಕದ ಬೆಳಗಾವಿ ವಲಯ ಮಟ್ಟದ ಯುವ ಕವಿಗೋಷ್ಠಿ, ಸಂವಾದ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾವ್ಯಗಳ ಒಟ್ಟು ಮೌಲ್ಯ ಕಾವ್ಯದ ಆಶಯವು ಕೂಡಾ ಆಗಿರಬೇಕು. ಈ ನಿಟ್ಟಿನಲ್ಲಿ ಸದ್ಯ ಕಾವ್ಯ ಜಗತ್ತು ವೈಚಾರಿಕತೆಗೆ ತೆರೆದುಕೊಳ್ಳುವ ಮೂಲಕ ಸಾಮಾಜಿಕ ವೈರುಧ್ಯಗಳನ್ನು ಮೀರಿ ಸಾಮರಸ್ಯದ ನೆಲೆಗಳನ್ನು ಬಿತ್ತುವ ಕೆಲಸ ಮಾಡಬೇಕಿದೆ ಎಂದರು.ಕಾವ್ಯದಿಂದ ಪ್ರಜಾಪ್ರಭುತ್ವಕ್ಕೆ ಬಲ ಹೀಗಾಗಿ ಇಂದಿನ ಕಾಲಘಟ್ಟದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನ ಬಲಗೊಳಿಸುವ ಅಭಿವ್ಯಕ್ತಿಗಳು ಯುವ ಕವಿಗಳಿಂದ ಹೊರ ಬರಬೇಕು. ಈ ಯುಗದ ಕವಿಗಳ ಬರವಣಿಗೆಗೆ ಈ ಆಶಯಗಳೆ ಪ್ರೇರಣೆ ಮತ್ತು ಪ್ರಭಾವ ನೀಡಿವೆ.ಇದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಯುವ ಕವಿಗಳ ಮೇಲಿದೆ ಎಂದು ಹೇಳಿದರು.
ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಹಾಗೂ ಕನ್ನಡ ಭವನ, ಬೆಳಗಾವಿ ಸಹಯೋಗದೊಂದಿಗೆ ಆಯೋಜಿಸಿದ ಬೆಳಗಾವಿ ವಲಯ ಮಟ್ಟದ ಯುವ ಕವಿಗೋಷ್ಠಿ ಯಶಸ್ವಿಯಾಗಿ ಜರುಗಿತು.ಏಳು ಜಿಲ್ಲೆಯ ಒಟ್ಟು 23 ಯುವ ಕವಿಗಳು ಆಯ್ಕೆಯಾಗಿದ್ದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕಿ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಮಾತನಾಡಿ,
ಕನ್ನಡ ಕಾವ್ಯ ಪರಂಪರೆಗೆ ತನ್ನದೆಯಾದ ಅಸ್ಮಿತೆಯಿದೆ. ಕವಿರಾಜಮಾರ್ಗಕಾರನು ಹೇಳುವಂತೆ “ಕಸವರವೆಂಬುದು ನೇರೆ ಸೈರಿಸಲಾರ್ಪೊಡೆ ಪರ ಧರ್ಮಮುಂ ಪರರ ವಿಚಾರಮುಂ” ಎಂಬ ಜೀವಮೂಲದ ಧ್ವನಿಯಿಂದ ಹಿಡಿದು ಕುವೆಂಪುರವರ “ಮನುಜಮತ ವಿಶ್ವಪಥದ” ಆಶಯಕ್ಕೆ ಪೂರಕವಾಗಿ ಇಂದು ನಮ್ಮ ಓದು ಬರಹಗಳು ಸಾಗಬೇಕಿದೆ.
ಕನ್ನಡ ಕಾವ್ಯಗಳು ಅನೇಕ ಮೌಲ್ಯಗಳನ್ನು ಕಟ್ಟಿಕೊಟ್ಟಿದೆ.ಕಾವ್ಯ ಓದಿನ ಫಲವನ್ನು ಗಮನಿಸಿದಾಗ ಹಳೆಗನ್ನಡದ ಓದಿನಿಂದ ಪ್ರೇರಣೆ ಪಡೆದುಕೊಂಡು ಹೊಸಗನ್ನಡದಲ್ಲಿ ಈವರೆಗೆ ರಚನೆಯಾದ ಕಾವ್ಯಗಳು ಬಹುತ್ವದ ಆಶಯ ಪ್ರತಿಪಾದಿಸುತ್ತಲೇ ಬಂದಿವೆ. ಭಾವೈಕ್ಯ ಮತ್ತು ಸಾಮರಸ್ಯದ ನೆಲೆಗಟ್ಟಿನಲ್ಲೇ ಯುವ ಕವಿಗಳು ಕಾವ್ಯ ರಚಿಸಬೇಕು’ ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ನಾಗರಿಕ ಜವಾಬ್ದಾರಿ ಕವಿಗಳ ಮೇಲಿದೆ. ಹೀಗಾಗಿ ಯುವ ಕವಿಗಳು ಇದನ್ನು ಸದುದ್ದೇಶದಿಂದ ಮುನ್ನಡೆಸಿಕೊಂಡು ಹೋಗಲಿ. ಕಾವ್ಯಾನುಸಂಧಾನವು ಬುದ್ಧಿ ಭಾವಗಳ ವಿದ್ಯುದ್ದಾಲಿಂಗನ, ಈ ದಿಶೆಯಲ್ಲಿ ಕನ್ನಡ ಕಾವ್ಯಲೋಕ ಸಾಮರಸ್ಯದ ನೆಲೆಗಳನ್ನು ಅನುಸಂಧಾನಿಸುವ ಅವಶ್ಯಕತೆಯಿದೆ ಎಂದರು.
ಆಧುನಿಕೋತ್ತರ ಹಾಗೂ ಜಾಗತೀಕರಣೋತ್ತರದ ಈ ಕಾಲದಲ್ಲಿ ಮತ್ತು ಕೃತಕ ಬುದ್ಧಿಮತ್ತೆಯ ಈ ಸಂದರ್ಭದಲ್ಲಿಯೂ ಕವಿಗೆ ಬಹಳ ಮಹತ್ವದ ಸ್ಥಾನವಿದೆ. 2021 ರಲ್ಲಿ ಅಮೇರಿಕಾದ ಅಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಅಧ್ಯಕ್ಷ ಜೋ ಬೇಡನ್ ಅವರು ಅಮೆರಿಕಾದ ರಾಷ್ಟ್ರೀಯ ಯುವ ಕವಿ ಪ್ರಶಸ್ತಿ ಪಡೆದ 21 ವರ್ಷದ ಅಮಾಂಡೊ ಗೊರಮಾನ್ ಎಂಬ ಯುವ ಕವಯಿತ್ರಿಯನ್ನು ಆಹ್ವಾನಿಸಿ ಅವಳಿಂದ ಕವನ ವಾಚನ ಮಾಡಿಸಿದ್ದು ಪ್ರೇರಣಾದಾಯಕವಾಗಿತ್ತು.ಅಮಾಂಡೊ ಗೊರಮಾನ್ ಅವರ ದಿ ಹಿಲ್ ವಿ ಕ್ಲೈಂಬ್ಡ ನಾವು ಏರುವ ಬೆಟ್ಟಗಳು ಎಂಬ 740 ಪದಗಳ ಸುದೀರ್ಘ ಕವಿತೆ ಇಂದಿನ ಅಮೆರಿಕಾದ ಹಾಗೂ ಜಾಗತಿಕ ಸ್ಥಿತ್ಯಂತರಕ್ಕೆ ಹಿಡಿದ ಕನ್ನಡಿಯಾಗಿದೆ.ಯುದ್ಧ ಮತ್ತು ಶಾಂತಿ ಕುರಿತಾಗಿ ರಚಿಸಿದ ಕವನಗಳು ಯಾವ ಕಾಲಕ್ಕೂ ಪ್ರಸ್ತುವಾಗುತ್ತಲೇ ಇರುತ್ತವೆ.
ಗ್ವಾಟೆಮಾಲಾದ ಖ್ಯಾತ ಕವಿ ಓಟೊ ರೀನೊ ಕ್ಯಾಸ್ಟಲೋ ಎಂಬ ಮಹಾಕವಿಯ ಅನುವಾದಿತ ಈ ಇಂಗ್ಲೀಷ್ ಕವನವನ್ನು ಡಾ ಚಂದ್ರಶೇಖರ ಪಾಟೀಲರು ಕನ್ನಡಕ್ಕೆ 1977 ರಲ್ಲಿ ಅನುವಾದಿಸಿದ್ದಾರೆ. ಈ ಕವಿತೆಯನ್ನು ಓದುವ ಮೂಲಕ ತಮ್ಮ ಉಪನ್ಯಾಸ ಪ್ರಾರಂಭಿಸಿದರು .ಈ ಕವಿ ಮಿಲಿಟರಿ ಸೈನ್ಯ ದಿಂದ ಹತ್ಯೆಗೀಡಾದ ಕ್ರಾಂತಿಕಾರಿ ಕವಿಯಾಗುದ್ದನು ಕವಿತೆ ಶೀರ್ಷಿಕೆ ಹೀಗಿದೆ. “ವಿಚಾರಿಸಿಕೊಳ್ಳುತ್ತಾರೆ ಒಂದು ದಿನ” ವಿಚಾರಿಸಿಕೊಳ್ಳುತ್ತಾರೆ. ಒಂದು ದಿನ ಕೈಹಿಡಿದು ಯಾವ ದಡಕ್ಕೂ ಹತ್ತದ ಬುದ್ಧಿ ಜೀವಿಗಳನ್ನು ಅಲ್ಲಿಯೂ ಸಲ್ಲದ ಇಲ್ಲಿಯೂ ಸಲ್ಲದ ಸುವರ್ಣ ಮಾರ್ಗದ ತಟಸ್ಥ ಜೀವಿಗಳನ್ನು ಎನ್ನುವ ಸಾಲುಗಳನ್ನು ವಿವರಿಸುತ್ತ ಸೂಕ್ಷ್ಮ ಸಂವೇದನೆಯ ಹಾಗೂ ತೀವ್ರತರವಾದ ವಿಡಂಬನೆ ಯಿಂದ ಕೂಡಿದ ಈ ಕವನ ಎಚ್ಚರಿಕೆಯ ಗಂಟೆಯಾಗಿದೆ. ಹಲವು ದಶಕಗಳು ಕಳೆದರು ಈ ಕವಿತೆ ಇಂದಿಗೂ ಪ್ರಸ್ತುತವೆನಿಸುತ್ತದೆ ಎಂದರು.
ಪ್ರಾಚೀನ ಕನ್ನಡ ಕಾವ್ಯದ ಸಾಮರಸ್ಯದ ನೆಲೆಗಳನ್ನು ಅಧುನೀಕೋತ್ತರ ಕಾಲಘಟ್ಟದಲ್ಲಿಯೂ ಮರು ಚಿಂತನೆಗೆ ಒಳಪಡಿಸಿ ತಲಸ್ಪರ್ಶಿಯಾಗಿ ಗ್ರಹಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಪಂಪನಿಂದ ಕುವೆಂಪುರವರವರೆಗಿನ ಸಾಹಿತ್ಯದ ಆಶಯ ! ಮನುಷ್ಯ ಜಾತಿ ತಾನೊಂದೇ ವಲಂ” ಹಾಗೂ “ಮನುಜಮತ ವಿಶ್ವಪಥದ” ಚಿಂತನೆಯಾಗಿತ್ತು.
ಪಂಪ ಕನ್ನಡದ ಆದಿ ಮಹಾಕವಿ ಎಂದು ಪ್ರಸಿದ್ಧನಾದವನು.ಇಮ್ಮಡಿ ಅರಿಕೇಸರಿಯ ಆಸ್ಥಾನದ ಕವಿಯಾಗಿದ್ದ ಪಂಪನು, ಕವಿಯು ಕಲಿಯು ಆಗಿದ್ದನು.
ಎಂದು ಆಶಯನುಡಿ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಕನ್ನಡ ಭವನದ ನಿರ್ದೇಶಕ ಡಾ. ಬಸವರಾಜ ಜಗಜಂಪಿ ಮಾತನಾಡಿ, ‘ದ.ರಾ. ಬೇಂದ್ರೆ ಅವರ ಕಾವ್ಯದಲ್ಲಿನ ಸಾಹಿತ್ಯಕ ಗುಣ, ಕುವೆಂಪು ಅವರ ಕಾವ್ಯದಲ್ಲಿನ ಕ್ರಾಂತಿಗೀತೆಗಳು ಮತ್ತು ಚಂದ್ರಶೇಖರ ಪಾಟೀಲ ಅವರ ಕಾವ್ಯದಲ್ಲಿನ ನಾಡು-ನುಡಿ ಪ್ರೀತಿಯನ್ನು ಇಂದಿನ ಕವಿಗಳು ಮುಂದುವರಿಸಿಕೊಂಡು ಹೋಗಬೇಕು’ ಎಂದು ಹೇಳಿದರು.
ದೇಶದ ಸದ್ಯದ ಸಮಾಜ ನೈತಿಕ ಮೌಲ್ಯಗಳು ಅಪಮೌಲಿಕರಣಕ್ಕೆ ಒಳಗಾಗಿ ಮಾನವ ಜೀವನವನ್ನು ದುರ್ಬರಗೊಳಿಸಿದೆ.ವರ್ಗ ತಾರತಮ್ಯಗಳು ಮತ್ತೆ ಮುನ್ನಲೆಗೆ ಬಂದಿವೆ.ಬಡತನ, ಹಸಿವು, ಅನಕ್ಷರತೆಗಳು ಮಾನವೀಯತೆಯನ್ನೇ ಅಪ ವ್ಯಾಖ್ಯಾನಿಸುತ್ತ ಜನ ಸಾಮಾನ್ಯನನ್ನು ಸಮಾಜ ವಿಮುಖಿಯನ್ನಾಗಿ ಪರಿವರ್ತನೆ ಮಾಡುತ್ತಿವೆ. ಮುಖವಾಡ ತೊಟ್ಟ ಎಡಬಿಡಂಗಿತನದ ಸಮಾಜ ಸುಧಾರಕರ ನಿಲುವುಗಳನ್ನು ಕಾವ್ಯ ಕಾಲಕಾಲಕ್ಕೆ ತನ್ನದೇಯಾದ ರೀತಿಯಲ್ಲಿ ಪ್ರಶ್ನಿಸುತ್ತಿರಲೇಬೇಕು ಎಂದರು.
ಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಾವೇರಿ ಜಿಲ್ಲೆಯ ಯುವ ಕವಿ ದೇವರಾಜ ಹುಣಸಿಕಟ್ಟಿ ವಹಿಸಿದ್ದರು.ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವ ಕವಿಗೋಷ್ಠಿಗೆ ಬೆಳಗಾವಿ ವಲಯದ ಏಳು ಜಿಲ್ಲೆಗಳ ಒಟ್ಟು 23 ಯುವ ಕವಿಗಳು ಆಯ್ಕೆಯಾಗಿದ್ದರು.
ಯುವ ಕವಿಗೋಷ್ಠಿಯ ನಿರ್ವಹಣೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಮಹಾದೇವ ಬಸರಕೋಡ ಮಾಡಿದರು. ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ ಜಿಲ್ಲೆಯಿಂದ ಆಯ್ಕೆಯಾದ 23 ಜನ ಯುವ ಕವಿಗಳು ಕವಿತೆ ವಾಚಿಸಿದರು.
ಮಧ್ಯಾಹ್ನ ನಡೆದ ಗೋಷ್ಠಿಯಲ್ಲಿ ಡಾ. ಹೇಮಾ ಪಟ್ಟಣಶೆಟ್ಟಿ ಅವರು “ಕಾವ್ಯ – ಅನುಸಂಧಾನ” ಎನ್ನುವ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ವಿವಿಧೆಡೆಯಿಂದ ಬಂದಿದ್ದ ಕವಿಗಳು, ಸಾಹಿತಿಗಳ ಜತೆಗೆ ಸಂವಾದ ನಡೆಸಿ, ಅವರ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು. ಬದುಕಿನ ನೆಲೆಗಳ ವಿಸ್ತಾರ,ಜ್ಞಾನದ ವ್ಯಾಪಕತೆ, ಬುದ್ಧಿಯ ಪ್ರಸರಣ ಶೀಲತೆ, ಅನುಭವಗಳ ಅಗಾಧತೆ, ಕಲ್ಪನೆಗಳ ವಿಸ್ತೃತತೆ ಎಲ್ಲವನ್ನೂ ಒಂದು ದೊಡ್ಡ ಕ್ಯಾನ್ವಾಸ್ ನಲ್ಲಿ ತೋರಿಸುವ ಮಹತ್ವಾಕಾಂಕ್ಷೆಯುಳ್ಳ ಕವಿತೆ ಎನ್ನುವ ಲೋಕ ಅಚ್ಚರಿಯಾಗಿದೆ.ಜ್ಞಾನಕ್ಕೆ ತನ್ನದೆ ಯಾದ ಸ್ಥಾನವಿದೆ .ಅದನ್ನು ಸಾಧಿಸಿಕೊಂಡರೆ ಅದೊಂದು ದೈವಿಕ ಸಾಕ್ಷಾತ್ಕಾರವಿದ್ದಂತೆ.ಈ ಜ್ಞಾನದ ಶಾಖೆಗಳು ಹತ್ತು ಹಲವಾರು ಅದರಲ್ಲಿ ಕಾವ್ಯವು ಕೂಡಾ ಒಂದಾಗಿದ್ದು ಕಾವ್ಯಾನುಸಂಧಾನದ ಫಲಿತವೇ ಮಹಾತಪಸ್ಸಿದ್ದಂತೆ. ಅಂತಹ ಶ್ರೇಷ್ಠವಾದ ಕಾರ್ಯವನ್ನು ಬದ್ದತೆಯಿಂದ ಪ್ರಾಮಾಣಿಕತೆಯಿಂದ ವೈಚಾರಿಕತೆ ನಿಲುವಿಗೆ ಪೂರಕವಾಗುವಂತೆ ಕಾವ್ಯದ ಓದು ಅತೀ ಅವಶ್ಯಕವಾಗಿದೆ.ಭವಿಷ್ಯದಲ್ಲಿ ಬದುಕಬೇಕಾದರೆ ವರ್ತಮಾನದಲ್ಲಿ ಹೋರಾಡಲೇ ಬೇಕು.ಮಾನವೀಯತೆ ಮೂಲಕ ಕಾಲದ ಅಸಂಗತಗಳನ್ನು ದುರಂತಗಳನ್ನು ಮೀರಿ ಬದುಕುವ ಅಂತರಂಗಶುದ್ಧಿಯ ಮನಸ್ಥಿತಿ ಹೊಂದಬೇಕಿದೆ.ಗೇಯ ಗೀತೆಗಳ ಸೊಬಗು ಕಾವ್ಯವನ್ನು ಮನೋಜ್ಞವಾಗಿಸಿದರೆ. ವೈಚಾರಿಕ ಕವಿತೆಗಳು ಪ್ರಜ್ಞಾಪೂರ್ವಕ ಬದುಕನ್ನು ಕಟ್ಟಿಕೊಡುತ್ತವೆ ಎಂದರು.
ಅಕಾಡೆಮಿ ಸದಸ್ಯ ಡಾ. ಮಲ್ಲಿಕಾರ್ಜುನ ಮಾನ್ಪಡೆ ಸಂವಾದ ಕಾರ್ಯಕ್ರಮ ನಿರ್ವಹಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಎನ್. ಕರಿಯಪ್ಪ ಸ್ವಾಗತಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ. ಮಲ್ಲಿಕಾರ್ಜುನ ಮಾನ್ಪಡೆ ಮತ್ತು ಮಹದೇವ ಬಸರಕೋಡ ಕವಿಗೋಷ್ಠಿ ನಿರ್ವಹಿಸಿದರು. ಬೆಳಗಾವಿ ಕನ್ನಡ ಭವನದ ಕಾರ್ಯದರ್ಶಿ ಯ.ರು. ಪಾಟೀಲ ಸಂವಾದದಲ್ಲಿ ಭಾಗವಹಿಸಿದ್ದರು.
ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ .ವೈ .ಬಿ ಹಿಮ್ಮಡಿ, ಡಾ ಸರಜೂ ಕಾಟ್ಕರ್,ಎಂ.ಎಸ್. ಇಂಚಲ, ನೀಲಗಂಗಾ ಚರಂತಿಮಠ, ಡಾ. ನಿರ್ಮಲಾ ಬಟ್ಟಲ್, .ವಿಜಯ ಬಡಿಗೇರ, ಬಸವರಾಜ ಗಾರ್ಗಿ ಉಪಸ್ಥಿತರಿದ್ದರು.
ಪ್ರಿಯಾಂಕಾ ಅನಗೋಳಕರ ಪ್ರಾರ್ಥಿಸಿದರು. ಪೂಜಾ ದೊಡ್ಡಬೊಮ್ಮನ್ನವರ ಮತ್ತು ಸುಮಾ ಹವಾಲ್ದಾರ ನಿರೂಪಿಸಿದರು.
************
ಯುವ ಕವಿಗಳ ಕವನ ವಾಚನ
ಕಿತ್ತೂರು ಕರ್ನಾಟಕ ಭಾಗದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಂದ ಬಂದಿದ್ದ ಯುವ ಕವಿಗಳು ಕವನಗಳನ್ನು ಪ್ರಸ್ತುತಪಡಿಸಿದರು.
ವ್ಯವಸ್ಥೆಯನ್ನು ಪ್ರಶ್ನಿಸುವ ಕವಿ ಅಪರಾಧಿಯಲ್ಲ.
ಇದರ ವಾಸ್ತವಿಕತೆಯನ್ನು ತಿಳಿದು ಕೂಡಾ ಮೌನವಾಗಿರುವ ಬುದ್ದಿಜೀವಿಗಳೇ ಅಪರಾಧಿಗಳು.
ನೊಂದವರಿಗೆ ನಾವೆಷ್ಟು ಹೆಗಲಾಗಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಹಿಳಾ ಶೋಷಣೆ, ಪ್ರಸವ ವೇದನೆ, ಪರಿಶಿಷ್ಟ ಸಮುದಾಯದ ನೋವು, ಕಿತ್ತೂರು ಕರ್ನಾಟಕದ ಜನರ ಸಂಕಟಗಳು, ಯುದ್ಧ. ಮತೀಯವಾದ ಮತ್ತಿತರ ವಿಷಯ ಕುರಿತಾದ ಕವನಗಳು ಗಮನಸೆಳೆದವು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕವಿ ದೇವರಾಜ ಹುಣಸಿಕಟ್ಟಿ, ಇಂದು ಯುವ ಕವಿಗಳು ರಚಿಸುವ ಕಾವ್ಯಗಳಲ್ಲಿ ತುಸು ತಿರುಳು ಇರಬೇಕು, ಕರುಳು ಇರಬೇಕು ಮತ್ತು ವಿರಳವಾಗಿಬೇಕು. ಮುಖ್ಯವಾಗಿ ಕಾವ್ಯ ಜೀವತಂತು ಒಳಗೊಂಡಿರಬೇಕು’ ಎಂದರು.
ತುಳಿತಕ್ಕೊಳಗಾದವರ ಸಂಕಟಗಳನ್ನು ,ಆತ್ಮಸಾಕ್ಷಿ ಪ್ರಜ್ಞೆಯ ಮೂಲಕವೆ ನೀಗಬೇಕು. ಇಲ್ಲದಿದ್ದರೆ ನೈಜತೆಯ ಮುಖವಾಡ ಕಳಜಿ ನಮ್ಮ ಅಸ್ಮಿತೆಯನ್ನೆ ಕಳೆದುಕೊಳ್ಳುವ ಅಪಾಯದಲ್ಲಿದ್ದೇವೆ. ಸಾಮಾಜೀಕರಣದ ಈ ಸಂದ್ದಿಗ್ಧತೆಯಲ್ಲಿ ನಮ್ಮ ಆತ್ಮಾವಲೋಕನದ ಪರಿಸ್ಥಿತಿ ಎದುರಾಗಿದೆ.ಬದುಕು ಬರಹ ಸಮಚಿತ್ತದಿಂದ ಮುನ್ನಡೆದಾಗ ಮಾತ್ರ ಕವಿಯ ಮತ್ತು ಸಾಹಿತ್ಯದ ನಿಜವಾದ ಆಶಯ ಈಡೇರಿಸಲು ಸಾಧ್ಯ. ಶೋಷಿತರ ದನಿಯಾಗಿ, ನೊಂದವರ ಆಶಾಕಿರಣವಾಗಿ ಅತೀತ ವ್ಯಥೆಯಿಂದ ಬಳಲುವವರನ್ನು ಗುರುತಿಸಿ ಸಾಂತ್ವನಿಸಬೇಕಿದೆ.ಭಾರತೀಯ ಸಾಹಿತ್ಯದ ತಾಯಿಬೇರು ಸಾಮರಸ್ಯದ ನೆಲೆಯಾಗಿದೆ.ಈ ನಿಟ್ಟಿನಲ್ಲಿ ನಮ್ಮ ನೆಲದ ಸಂತರು, ದಾರ್ಶನಿಕರು ಹಾಕಿ ಕೊಟ್ಟ ದಾರಿಯಲ್ಲಿ ನಡೆಯುವ ಸಕಾರಾತ್ಮಕತೆ ಬೆಳಿಸಿಕೊಳ್ಳಬೇಕಿದೆ. ಕವಿಗೋಷ್ಠಿಯ ಆಶಯ ಈಡೇರಿದೆ. ವಿವಿಧ ಕಥಾವಸ್ತು ಹೊಂದಿದ ಉತ್ತಮ ಕಾವ್ಯಗಳನ್ನು ಎಲ್ಲರೂ ಪ್ರಸ್ತುತಪಡಿಸಿದ್ದೀರಿ’ ಎಂದು ಶ್ಲಾಘಿಸಿದರು. ಅಕಾಡೆಮಿ ಸದಸ್ಯ ಮಹಾದೇವ ಬಸರಕೋಡ ಯುವ ಕವಿಗೋಷ್ಠಿ ನಿರ್ವಹಿಸಿದರು.